ಕೇವಲ 7 ಗಂಟೆ 43 ನಿಮಿಷಗಳಲ್ಲಿ ಕಿಲಿಮಂಜಾರೋ ಏರಿದ ಭಾರತದ ಮಹಿಳೆ ಭಾವನ ದೇಹರಿಯಾ
ಕೀಲಿಮಂಜಾರೋ ಏರಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ ಮಧ್ಯಪ್ರದೇಶದ ಪರ್ವತಾರೋಹಿ ಭಾವನ ದೇಹರಿಯಾ.
ಭಾರತದಲ್ಲಿ ಸಿಹಿ, ತಿನಿಸು, ಪಟಾಕಿ, ಬೆಳಕಿನ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದರೆ ಮಧ್ಯಪ್ರದೇಶದ ಪರ್ವತಾರೋಹಿ ಭಾವನ ದೇಹರಿಯಾ ಕಳೆದ ಆದಿತ್ಯವಾರದಂದು ಆಫ್ರಿಕಾದ ಅತ್ಯಂತ ಎತ್ತರ ಶಿಖರ ಸುಮಾರು ಸಮುದ್ರ ಮಟ್ಟದಿಂದ 5,895 ಮೀಟರ್ ಅಥವಾ 19,340 ಅಡಿ ಎತ್ತರದಲ್ಲಿರುವ ಟಾಂಜಾನಿಯಾದ ಕಿಲಿಮಂಜಾರೋ ವನ್ನು ಏರಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಪ್ಲಾಸ್ಟಿಕ್‌ನ ವೈಯಕ್ತಿಕ ಬಳಕೆಯನ್ನು ಕಡಿಮೆಗೊಳಿಸಿ ಪರಿಸರ ಸ್ನೇಹಿ ಮಾರ್ಗದ ಮೂಲಕ ತಮ್ಮ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
“ಭಾರತೀಯ ಪರ್ವತಾರೋಹಿ ಭಾವನಾ ಡೆಹರಿಯಾ ಭಾನುವಾರ ಕಿಲಿಮಂಜಾರೋದ ಉಹುರು ಶಿಖರವನ್ನು ಏರಿ ಅಲ್ಲಿ ಮಣ್ಣಿನ ದೀಪವನ್ನಿರಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸಿದರು ಮತ್ತು ವೈಯಕ್ತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮತ್ತು ಪಾಲಿಥೀನ್ ಬಳಕೆಯನ್ನು ಕಡಿಮೆ ಮಾಡುವಂತೆ ಜನರನ್ನು ಕೇಳಿಕೊಂಡರು," ಎಂದು ಅವರ ಮಾರ್ಗದರ್ಶಕ ಮತ್ತು ಭಾರತ ದೈಹಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ. ರಾಜೇಶ್ ತ್ರಿಪಾಠಿ ಹೇಳಿದರು.
ಮುಂದುವರೆದು, ಅವರ ಪಯಣದ ಬಗ್ಗೆ ಮಾತನಾಡಿದ ತ್ರಿಪಾಠಿ,
"ಭಾವನ ಅಕ್ಟೋಬರ್ 23 ರಂದು ಟಾಂಜಾನಿಯಾದಿಂದ ಚಾರಣವನ್ನು ಪ್ರಾರಂಭಿಸಿದರು ಮತ್ತು ಅಕ್ಟೋಬರ್ 27 ಮಧ್ಯರಾತ್ರಿ 12 ಗಂಟೆಗೆ ಕಿಬೊ ಹಟ್ ಕ್ಯಾಂಪ್‌ನಿಂದ ಅಂತಿಮ ಆರೋಹಣವನ್ನು ಪ್ರಾರಂಭಿಸಿದರು. ಅವರು ಅಕ್ಟೋಬರ್ 27 ರಂದು ಬೆಳಿಗ್ಗೆ 7:43 ಕ್ಕೆ ಉಹುರು ಶಿಖರವನ್ನು ತಲುಪಿದರು" ಎಂದು ಅವರು ಮಾಹಿತಿ ನೀಡಿದರು.
7 ಗಂಟೆ 43 ನಿಮಿಷಗಳಷ್ಟು ಕಡಿಮೆ ಸಮಯದಲ್ಲಿ ಶಿಖರವನ್ನು ಹತ್ತುವ ಮೂಲಕ ಭಾರತೀಯ ಮಹಿಳೆ ಭಾವನ ದೇಹರಿಯಾ ದಾಖಲೆ ಮಾಡಿದ್ದಾರೆಂದು ತ್ರಿಪಾಠಿ ಹೇಳಿದ್ದಾರೆ.
ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆ ಮೂಲದವರಾದ ಭಾವನ ಭೋಪಾಲ್‌ನಿಂದ ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಕಡಿಮೆ ಸಮಯದಲ್ಲೇ ತಮ್ಮ ಟಾಂಜಾನಿಯಾದ ಮಾರ್ಗದರ್ಶಿಯೊಂದಿಗೆ ಕೀಲಿಮಂಜಾರೋ ಶಿಖರವನ್ನು ಏರಿ ಭಾರತದ ತ್ರಿವರ್ಣ ಧ್ವಜ ವನ್ನು ಹಾರಿಸಿದ್ದಾರೆ.
ಡಾ. ರಾಜೇಶ್ ತ್ರಿಪಾಠಿಯವರು ಹೇಳುವಂತೆ ಈ ವರ್ಷದ ಮೇ 22 ರಂದು ದೇಹರಿಯಾ ಈ ಹಿಂದೆ ಎವರೆಸ್ಟ್ ಶಿಖರವನ್ನು ಏರಿದ್ದರು.