ಗಾಂಜಾ ಬೆಳೆಯುವಂತಹ ಮಾಲಾನಾ ಹಳ್ಳಿಯ ಮಕ್ಕಳಿಗೆ ಲಸಿಕೆ ಹಾಕಲು ಹೋರಾಡಿದ ಇಬ್ಬರು ಮಹಿಳೆಯರ ಕಥೆ
ಹೊರಗಿನ ಪ್ರಪಂಚಕ್ಕೆ ಸಂಪರ್ಕವೇ ಇಲ್ಲವೆಂಬಂತಿರುವ ಹಿಮಾಚಲ ಪ್ರದೇಶದ ಮಲಾನಾ ಗ್ರಾಮದಲ್ಲಿ, ವ್ಯಾಕ್ಸಿನೇಷನ್ ದುಷ್ಟವಾದದ್ದು ಎಂದು ಜನರು ನಂಬಿದ್ದರು. ಇಬ್ಬರು ಮಹಿಳೆಯರು ಅಲ್ಲಿನ ಜನರ ಮನಸ್ಥಿತಿಯನ್ನು ಬದಲಾಯಿಸಿ ಮಕ್ಕಳಿಗೆ ಲಸಿಕೆ ಹಾಕಿದರು.
ಹಿಮಾಚಲ ಪ್ರದೇಶದ ಹಚ್ಚ ಹಸಿರಿನಿಂದ ಕೂಡಿದ, ಹಿಮಾವೃತಗೊಂಡ 8,701 ಅಡಿ ಎತ್ತರದಲ್ಲಿರುವ ಪಾರ್ವತಿ ಕಣಿವೆಯ ಮಲಾನ ಹಳ್ಳಿಯನ್ನು ತಲುಪುವುದು ಸುಲಭದ ಮಾತಲ್ಲ. 220 ಮನೆಗಳಲ್ಲಿ ನೆಲೆಸಿರುವ 1,935 ಜನರಿರುವ ಮಲಾನ, ಅಕ್ಷರಶಃ ದೇಶದ ಇತರ ಭಾಗಗಳಿಂದ ಪ್ರತ್ಯೇಕಗೊಂಡಂತಿದೆ. ಸಾರಿಗೆ ವ್ಯವಸ್ಥೆಯಿರದ ಈ ಹಳ್ಳಿಯನ್ನು ತಲುಪಬೇಕೆಂದರೆ, ಒಂದು ವರೆ ಗಂಟೆಗಳ ಕಾಲ ದುರ್ಭರ ಕಣಿವೆಯಲ್ಲಿ 40ಕಿಮೀ ನಡೆಯಬೇಕು. ಹಳ್ಳಿಗರನ್ನು ಬಿಟ್ಟರೆ ಈ ಕಷ್ಟಕರವಾದ ಪ್ರಯಾಣವನ್ನು ಸಹಿಸಿಕೊಳ್ಳುವವರು ಅಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಗಾಂಜಾಗಾಗಿ ಬರುವವರು ಮಾತ್ರ.
ಗ್ರಾಮವು ನಾಗರಿಕತೆಯಿಂದ ಉದ್ದೇಶಪೂರ್ವಕವಾಗಿ ದೂರವುಳಿದಿದೆ ಎಂದು ತೋರುತ್ತದೆ.
"ಸಾಂಪ್ರದಾಯಿಕ ಕಟ್ಟುಪಾಡುಗಳಲ್ಲಿಯೇ ಉಳಿದುಹೋಗಿರುವ ಈ ಹಳ್ಳಿಯಲ್ಲಿ ಸಾಕ್ಷರತೆಯ ಪ್ರಮಾಣ ಅತ್ಯಂತ ಕಡಿಮೆ ಇದೆ.ಮಲಾನದ ಹಳ್ಳಿಗರು, ಹೊರಗಿನವರಿಗೆ ಪ್ರವೇಶವನ್ನು ನಿರಾಕರಿಸುತ್ತಾರೆ" ಎನ್ನುತ್ತಾರೆ, ಜಿಲ್ಲಾ ರೋಗನಿರೋಧಕ ಅಧಿಕಾರಿ ರಮೇಶ ಚಂದ್ರ ಗುಲೇರಿಯಾ.
ಆದಾಗ್ಯೂ, ಹಳ್ಳಿಗರಿಗೆ ಈ ಅಂತರವು ತುಟ್ಟಿಯಾಗಿ ಪರಿಣಮಿಸಿತು. ಗ್ರಾಮದ ಸಂಪೂರ್ಣ ಆಡಳಿತವನ್ನು ಗ್ರಾಮ ಪರಿಷತ್ತಿನ ಮೂಲಕ ‘ಜಂಬ್ಲು’ ಎಂಬ ದೇವತೆ ನಿಯಂತ್ರಿಸುತ್ತದೆ.
"ಹಲವಾರು ವರ್ಷಗಳಿಂದ, ಈ ಪರಿಷತ್ತು ಜಂಬಲು ದೇವತಾ ನಿರ್ದೇಶನದಂತೆ ಮಕ್ಕಳಿಗೆ ಯಾವುದೇ ಲಸಿಕೆಗಳನ್ನು ನೀಡುವುದನ್ನು ವಿರೋಧಿಸಿತ್ತು. ಇದರರ್ಥ ನಾವು ಯಾವುದೇ ವೈದ್ಯಕೀಯ ಶಿಬಿರಗಳು ಅಥವಾ ರೋಗನಿರೋಧಕ ಕಾರ್ಯಕ್ರಮಗಳಿಗೆ ಗ್ರಾಮಕ್ಕೆ ಹೋದಾಗ, ನಮ್ಮನ್ನು ನಿರ್ಲಕ್ಷಿಸಿ ಹೊರ ಕಳಿಸಲಾಗುತ್ತಿತು," ಎನ್ನುತ್ತಾರೆ ಡಾ. ಗುಲೇರಿಯಾ.
ಕುಲ್ಲು ಊರಿನ ಆರೋಗ್ಯಾಧಿಕಾರಿಗಳಿಗೆ, ಯಾರೂ ಮಲಾನಾದತ್ತ ಹೊರಡಲು ಸಿದ್ಧರಿರಲಿಲ್ಲ ಹಾಗಾಗಿ ಮಲಾನಾ ರೋಗನಿರೋಧಕ ವ್ಯಾಪ್ತಿಯಿಂದ ಹೊರಗುಳಿದಿತ್ತು. ಆದಾಗ್ಯೂ, 2015 ರ ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ 38 ವರ್ಷದ ಮೀನಾ ಕುಮಾರಿ ಕುಲ್ಲುದಲ್ಲಿನ ಪಿನಿ ಉಪಕೇಂದ್ರದಲ್ಲಿ ಸಹಾಯಕ ನರ್ಸ್ ಸೂಲಗಿತ್ತಿ (ಎಎನ್‌ಎಂ) ಯಾಗಿ ಸೇರಿಕೊಂಡ ನಂತರ ಪರಿಸ್ಥಿತಿಗಳು ಬದಲಾದವು.
ಮಲಾನಾದ ಭೌಗೋಳಿಕ ಕಠಿಣತೆ ಅಡೆತಡೆಗಳನ್ನು ತಂದಿದ್ದರೂ ಮೀನಾ, ಹಳ್ಳಿಯ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ನೀಡುವ ಉದ್ದೇಶದಿಂದ ಹೊರಟರು. ಗುಡ್ಡಗಾಡು ಪ್ರದೇಶವಾದ್ದರಿಂದ ಪರ್ಯಾಯ ಲಸಿಕೆ ವಿತರಣೆ ಸಾಧ್ಯವಾಗದ ಕಾರಣ, ಮೀನಾ ಲಸಿಕೆ ವಾಹಕಗಳನ್ನು ಸ್ವತಃ ಹೊತ್ತೊಯ್ದರು, ಭಾಗಶಃ ಸಾರ್ವಜನಿಕ ಸಾರಿಗೆಯಲ್ಲಿ ಮತ್ತು ಇನಷ್ಟನ್ನು ಕಾಲ್ನಡಿಗೆಯಲ್ಲಿ ಪ್ರಯಾಣಿಸಿದರು.
"ನಾನು ಮಲಾನಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಟಿಕಾ (ವ್ಯಾಕ್ಸಿನೇಷನ್) ಗಾಗಿ ಅಂಗನವಾಡಿ ಕೇಂದ್ರಕ್ಕೆ ಯಾರೂ ಬರುತ್ತಿರಲಿಲ್ಲ, ಹಾಗಾಗಿ ನಾನೇ ಅವರ ಬಳಿ ಹೋದೆ" ಎಂದು ಮೀನಾ ಯುವರ್ ಸ್ಟೋರಿಗೆ ಹೇಳಿದರು. ರೋಗನಿರೋಧಕತೆಯ ಮಹತ್ವವನ್ನು ವಿವರಿಸುತ್ತಾ ಅವರು ಮನೆ ಮನೆಗೆ ಹೋದರು. "ನಾನವರಿಗೆ ಮಗು ಅನಾರೋಗ್ಯದಿಂದ ಬಳಲುತ್ತಿರುವುದು ದೇವರ ಶಾಪದಿಂದಲ್ಲ. ಅವರಿಗೆ ಈ ಚುಚ್ಚುಮದ್ದು ಹಾಕಿದರೆ ಸಾವಿನಿಂದ ಪಾರು ಮಾಡಬಹುದು ಎಂದು ತಿಳಿಹೇಳಿದೆ" ಎನ್ನುತ್ತಾರೆ ಮೀನಾ.
ಲಸಿಕೆಗಳಿಂದ ಮರಣ ಪ್ರಮಾಣ ಮತ್ತು ಅಸ್ವಸ್ಥತೆಯನ್ನು ಗುಣಪಡಿಸಬಹುದೆಂದು ಹಾಗೂ ಇದು ವೆಚ್ಚ ಪರಿಣಾಮಕಾರಿಯೆಂದು ಸಾಬೀತಾಗಿದೆ. ಆದರೂ, ಸರ್ಕಾರದಿಂದ ಅನೇಕ ಕಾರ್ಯಕ್ರಮಗಳ ಹೊರತಾಗಿಯೂ, ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ 12 ರಿಂದ 23 ತಿಂಗಳ ವಯಸ್ಸಿನ ಮಕ್ಕಳಲ್ಲಿ ರೋಗನಿರೋಧಕ ವ್ಯಾಪ್ತಿ ಸುಧಾರಿಸಿಲ್ಲ, ಇದು 2009 ರಲ್ಲಿ 61 ಪ್ರತಿಶತದಿಂದ 2015-16ರಲ್ಲಿ ಕೇವಲ 62 ಪ್ರತಿಶತಕ್ಕೆ ಏರಿಕೆ ಕಂಡಿದೆ.
ಆದಾಗ್ಯೂ, ರೋಗನಿರೋಧಕ ಶಕ್ತಿಯ ವ್ಯಾಪ್ತಿಯನ್ನು 2020ರೊಳಗೆ 90 ಪ್ರತಿಶತಕ್ಕೆ ಏರಿಸುವ ಸಲುವಾಗಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ಡಿಸೆಂಬರ್ 2014 ರಲ್ಲಿ ಮಿಷನ್ ಇಂದ್ರಧನುಷ್ ಅನ್ನು ಆರಂಭಿಸಿತು. ಮೀನಾ, ಇದರ ಭಾಗವಾಗಿದ್ದರು.
ಇಂದು ಮಳೆ ಇರಲಿ ಹಿಮ ಬೀಳುತ್ತಿರಲಿ ಮೀನಾ, ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ 180 ಮಕ್ಕಳಿಗೆ ಲಸಿಕೆ ಹಾಕಿದ್ದರಿಂದ 95 ಪ್ರತಿಶತ ರೋಗನಿರೋಧಕತೆ ಹೆಚ್ಚಿದೆ.
“ಇದು ಜನರ ನಂಬಿಕೆಯನ್ನು ಗಳಿಸುವುದು ಹಾಗೂ ಇದು ಅವರ ಸ್ವಂತ ಒಳಿತಿಗಾಗಿ -- ಮಕ್ಕಳ ಕಲ್ಯಾಣಕ್ಕಾಗಿ, ಅವರ ಭವಿಷ್ಯದ ಆರೋಗ್ಯಕ್ಕಾಗಿ, ಅವರ ಹಣಕಾಸಿಗಾಗಿ ಮತ್ತು ಅವರ ಕುಟುಂಬ ವಂಶಾವಳಿಯ ನಿರಂತರತೆಗಾಗಿ ಎಂದು ಅವರಿಗೆ ಮನವರಿಕೆ ಮಾಡುವುದರ ಮೇಲೆ ಅವಲಂಬಿತವಾಗಿತ್ತು" ಎನ್ನುತ್ತಾರೆ ಮೀನಾ.
ಗತಕಾಲದಲ್ಲೆ ಸಿಲುಕಿಕೊಂಡಿರುವ ಹಳ್ಳಿ
ಮಲಾನಾದ ಸಂಪೂರ್ಣ ಆಡಳಿತವನ್ನು ಗ್ರಾಮ ಪರಿಷತ್ತಿನ ಮೂಲಕ ಜಂಬ್ಲು ದೇವತೆ ನಿಯಂತ್ರಿಸುತ್ತದೆ ಎಂದು ನಂಬಲಾಗಿದೆ. ಈ ಮಂಡಳಿ 11 ಸದಸ್ಯರನ್ನು ಒಳಗೊಂಡಿದ್ದು, ಅವರೆಲ್ಲರನ್ನೂ ಜಂಬ್ಲುವಿನ ಪ್ರತಿನಿಧಿಗಳು ಎನ್ನಲಾಗಿದೆ, ಅವರು ಜಂಬ್ಲೂವಿನ ಹೆಸರಿನಲ್ಲಿ ಗ್ರಾಮವನ್ನು ಆಳುತ್ತಾರೆ.
ತಮ್ಮ ದೇವತೆಯ ಮೇಲಿನ ಗಾಢವಾದ ನಂಬಿಕೆ ಮತ್ತು ಜಾತಿವಾದದ ಮೇಲಿನ ನಂಬಿಕೆಯಿಂದಾಗಿ, ಮಲಾನಿಯರು ತಮ್ಮ ಹಳ್ಳಿಗೆ ಭೇಟಿ ನೀಡುವ ಹೊರಗಿನವರಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಅವರ ಅನುಮತಿಯಿಲ್ಲದೆ ಯಾರೂ ಅವರನ್ನು ಅಥವಾ ಅವರ ದೇವತೆಯನ್ನು (ಮತ್ತು ದೇವಾಲಯವನ್ನು) ಮುಟ್ಟುವಂತಿಲ್ಲ.
ಹೊರಗಿನವರೊಂದಿಗೆ ಯಾವುದೇ ಸಂಪರ್ಕ ಮಾಡಿದ್ದಲ್ಲಿ, ಅವರು ಸ್ನಾನ ಮಾಡಲು ಓಡುತ್ತಾರೆ. ಈ ಸಾಮಾಜಿಕ ನಿಷೇಧಗಳು ಬರಲು ಕಾರಣ ಮಲಾನಿಗಳು ತಾವು ‘ಶುದ್ಧ’ ಆರ್ಯರು ಮತ್ತು ಅಲೆಕ್ಸಾಂಡರ್ ದಿ ಗ್ರೇಟ್‌ನ ವಂಶಸ್ಥರು ಎಂದು ನಂಬಿರುವುದು.
ಭೌಗೋಳಿಕ ತೊಂದರೆಗಳ ಹೊರತಾಗಿ, ಮೀನಾ, ಸಾಮಾಜಿಕ ನಿಷೇಧವನ್ನು ಸಹ ಎದುರಿಸಬೇಕಾಯಿತು. ಇದು ಮಲಾನದ ಮಕ್ಕಳಿಗೆ ಲಸಿಕೆ ಹಾಕುವ ಯೋಜನೆಗೆ ಅಡ್ಡಗಲ್ಲಾಗಿತು.
ಬದಲಾವಣೆಯ ಅಲೆ
ಪಿನಿ ಉಪಕೇಂದ್ರದ ಎಎನ್‌ಎಂ ಮುಖ್ಯಸ್ಥರಾಗಿ, ಮೀನಾ ಅಂಗನವಾಡಿ ಕೇಂದ್ರಗಳು ಮತ್ತು ಆಶಾ ಕಾರ್ಮಿಕರ ಉಸ್ತುವಾರಿ ವಹಿಸಿದ್ದರು. ಹಳ್ಳಿಯಲ್ಲಿ ರೋಗನಿರೋಧಕ ಲಸಿಕೆಗಳ ಅಸಹಜ ದರದ ಬಗ್ಗೆ ಅವರು ಮೊದಲು ವಿಚಾರಿಸಿದಾಗ, ಜನರು ತಮ್ಮ ಕೇಂದ್ರಕ್ಕೆ ಭೇಟಿ ನೀಡಲು ಬಯಸುವುದಿಲ್ಲ ಎಂದು ಅವರು ತಿಳಿದುಕೊಂಡರು. ಆಗಲೇ ಅವರು ಮನೆಮನೆಗೆ ತೆರಳಲು ನಿರ್ಧರಿಸಿದ್ದು.
ಅದೃಷ್ಟವಶಾತ್ ಅದೇ ಸಮಯಕ್ಕೆ ನಿರ್ಮಾ ದೇವಿ ಆಶಾ ಕಾರ್ಯಕರ್ತೆಯಾಗಿ ಸೇರಿದರು. ಈ ಹಳ್ಳಿಗೆ ಮೊದಲ ಆಶಾ ಕಾರ್ಯಕರ್ತೆಯಾಗಿ ಬಂದವರು ನಿರ್ಮಾ. ಆಗಿನಿಂದ ನಿರ್ಮಾ, ಮೀನಾರೊಂದಿಗೆ ಮನೆಮನೆಗೆ ತೆರಳಲು ಆರಂಭಿಸಿದರು.
ಈ ಹಳ್ಳಿಯ ಭಾಷೆಗೆ ಕನಾಶಿ ಎನ್ನುತ್ತಾರೆ. ಹಳ್ಳಿಗರಿಗೆ ಕನಾಶಿ ಬಿಟ್ಟರೆ ಬೇರೆ ಭಾಷೆ ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳಲು ಬರುವುದಿಲ್ಲ ಹಾಗೆ ಉಳಿದವರಿಗೆ ಇವರ ಭಾಷೆ ಅರ್ಥವಾಗುವುದಿಲ್ಲ. ನಿರ್ಮಾರ ಸಹಾಯದಿಂದ, ಮೀನಾ ಮನೆಮನೆಗೆ ಭೇಟಿ ನೀಡಿ ತಾಯಂದಿರನ್ನು ಮಾತನಾಡಿಸಲು ಆರಂಭಿಸಿದರು.
"ಮೊದಮೊದಲು ನಮ್ಮನ್ನು ನಿಂದಿಸುತ್ತಿದ್ದರು. ನಾವು ಅವರ ಮನೆಯೊಳಗೆ ಹೆಜ್ಜೆ ಹಾಕದಂತೆ ನೋಡಿಕೊಳ್ಳಲು ಅವರು ತಮ್ಮ ಮನೆಗಳ ಹೊರಗೆ ಕಾವಲುಗಾರರಾಗಿ ನಿಲ್ಲುತ್ತಿದ್ದರು. ಕೆಲವರು ನನ್ನ ಹಿಂದೆ ಓಡಿ ಬಂದು" ಮೇಡಂ, ದಯವಿಟ್ಟು ಇಲ್ಲಿಗೆ ಬರಬೇಡಿ ಎನ್ನುತ್ತಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ, ಮೀನಾ.
ನಿರ್ಮಾ ಮತ್ತು ಮೀನಾ ಇಬ್ಬರೂ ‘ನಿಂದನೆಗಳನ್ನು ಮತ್ತು ಬೆದರಿಕೆಗಳನ್ನು ಎದುರಿಸಿದರು. ಗ್ರಾಮಸ್ಥರ ಪ್ರಕಾರ, ನಿರ್ಮಾ ದೇವತೆಯ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಇದು ಮಲಾನಿಗಳಿಗೆ ಮತ್ತು ಅವರ ಮಕ್ಕಳಿಗೆ ಹಾನಿಕಾರಕವಾಗಬಹುದು ಎಂದು ಅವರು ಮೀನಾರಿಗೆ ಮಕ್ಕಳನ್ನು ಮುಟ್ಟಲು ಬಿಡಲಿಲ್ಲ.
ಆದರೆ ಆಶಾ ಕಾರ್ಯಕರ್ತೆಯರು ಗ್ರಾಮಸ್ಥರೊಂದಿಗೆ ಸಂವಹನ ನಡೆಸುವ ವಿಧಾನಗಳ ಬಗ್ಗೆ ವಿಶೇಷ ತರಬೇತಿ ಪಡೆದಿದ್ದರು. ಅವರಿಗೆ ಮಲಾನಿಗರನ್ನು ಗೆಲ್ಲಲು ಒಂದು ವರ್ಷಬೇಕಾಯಿತು ಹಾಗೂ ಮಲಾನಾ ಅವರ ಮುಂದಿನ ಪೀಳಿಗೆಗೆ ಪ್ರಯೋಜನವಾಗಲು ಮೀನಾ ಬಂದಿರುವುದು ಎಂದು ಮನವರಿಕೆ ಮಾಡಿಕೊಟ್ಟರು. ನಿರ್ಮಾ ಅವರು ಗ್ರಾಮದ ಹಿರಿಯ ಮಹಿಳೆಯರ ಸಭೆಗಳನ್ನು ಏರ್ಪಡಿಸಿ, ಲಸಿಕೆಗಳು ಮತ್ತು ಮಕ್ಕಳ ಆರೋಗ್ಯದ ಮೇಲೆ ರೋಗನಿರೋಧಕಗಳ ಪ್ರಯೋಜನಗಳನ್ನು ತಿಳಿಸಿದರು. ಮೀನಾ ಜೊತೆಗೆ, ಅವರು ಹಲವಾರು ಬಾರಿ ಗ್ರಾಮ ಪರಿಷತ್ತನ್ನು ಭೇಟಿಯಾದರು ಮತ್ತು ಸರ್ಕಾರದ ಲಸಿಕೆಗಳ ಬಗ್ಗೆ ನಂಬಿಕೆ ಇಟ್ಟುಕೊಳ್ಳಬೇಕೆಂದು ಮಲಾನಿಯರನ್ನು ಒತ್ತಾಯಿಸಿದರು, ವ್ಯಾಕ್ಸಿನೇಷನ್ ಮಾಡಿದ ನಂತರ ಮಕ್ಕಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಭರವಸೆ ನೀಡಿದರು.
“ಮತ್ತು ಅಂತಿಮವಾಗಿ, ಎರಡು-ಮೂರು ಮನೆಗಳು ತಮ್ಮ ಮಕ್ಕಳಿಗೆ ಲಸಿಕೆ ಹಾಕಲು ನಮಗೆ ಅವಕಾಶ ಮಾಡಿಕೊಟ್ಟವು. ಅವರು ನಮ್ಮ ಬೆಂಬಲಿಗರಾದರು ಮತ್ತು ಚುಚ್ಚುಮದ್ದು ಯಾವುದೇ ನೋವು ಅಥವಾ ಜ್ವರವನ್ನು ಉಂಟುಮಾಡುವುದಿಲ್ಲ ಎಂದು ಎಲ್ಲರಿಗೂ ತಿಳಿಸಿದರು. ಅದರ ನಂತರ, ಇತರ ಅನೇಕ ತಾಯಂದಿರು ತಮ್ಮ ಮಗುವಿಗೆ ಲಸಿಕೆ ಹಾಕಿಸಲು ಮುಂದೆ ಬಂದರು,” ಎಂದು ನೆನಪಿಸಿಕೊಳ್ಳುತ್ತಾ ಮೀನಾ, ಬೆಳೆಯುತ್ತಿರುವ ಸ್ವೀಕಾರದೊಂದಿಗೆ ಅರ್ಧದಷ್ಟು ಯುದ್ಧವನ್ನು ಗೆದ್ದಂತಾಗಿತ್ತು ಎನ್ನುತ್ತಾರೆ.
ಒಂದು ಪೀಳಿಗೆಯ ಸುರಕ್ಷಿತ ಭವಿಷ್ಯ
ನಿರ್ಮಾ ಜೊತೆಗೆ, ಮೀನಾ ಎಲ್ಲಾ 170 ತಾಯಂದಿರಿಗೆ ಪ್ರಸವಪೂರ್ವ ಆರೈಕೆಗಾಗಿ ರೋಗನಿರೋಧಕವನ್ನು ಮತ್ತು ತರುವಾಯ ಅವರ ಮಕ್ಕಳಿಗೆ ರೋಗನಿರೋಧಕ ಲಸಿಕೆ ನೀಡಿದ್ದಾರೆ. ಇಂದು, ಮೀನಾ, ಮಲಾನಿಗರಿಗೆ ಹೊರಗಿನವರೂ ಅಲ್ಲ, ಅಸ್ಪೃಶ್ಯರೂ ಅಲ್ಲ.
"ಈಗ ಅವರೇ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ ಹಾಗೂ ನಾನು ಯಾವಾಗ ಬರುತ್ತೇನೆಂದು ಕೇಳಿ ತಿಳಿದುಕೊಳ್ಳುತ್ತಾರೆ ಮತ್ತು ಅವರು ನನ್ನ ಕುಟುಂಬದವರಂತಿದ್ದಾರೆ," ಎನ್ನುತ್ತಾರೆ ಮೀನಾ.
ಆಗಾಗ್ಗೆ, ಪೂರ್ಣ ದಿನದ ಕೆಲಸದ ನಂತರ, ಗ್ರಾಮಸ್ಥರು ಮೀನಾ ಅವರಿಗೆ ಆಹಾರವನ್ನು ನೀಡುತ್ತಾರೆ, ಇದರಿಂದಾಗಿ ಅವರು ತಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ. ಅವರು ಮುಖ್ಯ ರಸ್ತೆಯನ್ನು ತಲುಪುವವರೆಗೆ ಮತ್ತು ಮನೆಗೆ ಮರಳಲು ವಾಹನವನ್ನು ಪಡೆಯುವವರೆಗೂ ಮಲಾನಾದ ಜನರು ಕೆಲವೊಮ್ಮೆ ಅವರೊಂದಿಗೆ ಹೋಗುತ್ತಾರೆ.
ಇಂದು, ಮಲಾನಾದಲ್ಲಿ ಲಸಿಕೆ ಹಾಕಿಸಿಕೊಳ್ಳದ ಒಂದೂ ಮಗುವಿಲ್ಲ ಹಾಗೂ ಮಹಿಳೆಯರು ಮತ್ತು ಮಕ್ಕಳು ಈಗ ಹನ್ನೆರಡು ರೋಗಗಳಿಂದ ರಕ್ಷಿತರಾಗಿದ್ದಾರೆ. ಆ ಮಹಿಳೆಯರ ಸ್ಥಿರ ಮನೋಭಾವಕ್ಕೆ ಧನ್ಯವಾದಗಳು.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.