Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಕೇರಳದಲ್ಲಿದೆ ಸಮುದ್ರ ಜೀವಿಗಳಿಗೊಂದು ಸಮಾಧಿ

ಕೋಝೀಕೋಡ್ ಬೀಚ್ ಸ್ಮಶಾನದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ಪ್ರಭೇದಗಳಿಗೆ ಮೀಸಲಾಗಿರುವ ಪ್ಲಾಸ್ಟಿಕ್‌ನಿಂದ ಮಾಡಿದ ಸಮಾಧಿ ಕಲ್ಲುಗಳಿವೆ. ಈ ಸಾಗರದಲ್ಲಿನ ಸ್ಮಶಾನಕ್ಕೆ ಬಳಸಲಾದ ವಸ್ತುಗಳು ಜಲಮೂಲಗಳಿಂದ ತೆಗೆದ ಏಕ-ಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಲಾಗಿದೆ.

ಕೇರಳದಲ್ಲಿದೆ ಸಮುದ್ರ ಜೀವಿಗಳಿಗೊಂದು ಸಮಾಧಿ

Saturday December 07, 2019 , 2 min Read

ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವ ಶಕ್ತಿ ಈ ಧರೆಗೆ ಇದೆ, ದುರಾಸೆಗಳನ್ನು ಅಲ್ಲಾ" ಎಂಬ ಗಾಂಧೀಜಿಯ ಮಾತು ಅಕ್ಷರಸಃ ಸತ್ಯ. ಮಾನವನ ನಾಗರಿಕತೆಯು ಬೆಳೆದು ಬಂದ ಹಿನ್ನಲೆಯನ್ನು ಗಮನಿಸಿದರೆ, ಹಲವಾರು ಮಹತ್ತರ ಬದಲಾವಣೆಗಳು ಕಂಡುಬರುತ್ತವೆ, ಚಕ್ರಗಳ ಕಂಡುಹಿಡಿದಿರುವಿಕೆ, ಬೆಂಕಿಯ ಅನ್ವೇಷಣೆ, ಗುಡಿಸಲಿನಿಂದ ಮನೆ, ಶಾಲೆ, ಸಮುದಾಯ, ಕಾನೂನು ಇವೆಲ್ಲದರೊಂದಿಗೆ ಇತ್ತೀಚಿನ ಶತಮಾನದವರೆಗೂ ಊಹಿಸಲು ಅಸಾಧ್ಯವಾದ, ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಪ್ಲಾಸ್ಟಿಕ್.


ಇಂದು ಪ್ಲಾಸ್ಟಿಕ್ ಎಲ್ಲಾ ಸಮಸ್ಯೆಗಳ ಮೂಲ. ಭೂಮಿಯನ್ನು ಸರ್ವವ್ಯಾಪಿಯಾಗಿ ಆವರಿಸಿಕೊಂಡಿರುವ ಈ ಪ್ಲಾಸ್ಟಿಕ್ ಪರಿಸರಮಾಲಿನ್ಯಕ್ಕೆ ನೀಡುತ್ತಿರುವ ಕೊಡುಗೆ ಅಪಾರ. ಮಣ್ಣಿಗೆ ಹಾಕಿದರೆ, ವಿಘಟಿಸದೆ ಮಣ್ಣು ಮಾಲಿನ್ಯಕ್ಕೆ, ಸುಟ್ಟರೆ ವಾಯುಮಾಲಿನ್ಯಕ್ಕೆ, ನೀರಲ್ಲಿ ಕರಗದೆ ಜಲಮಾಲಿನ್ಯಕ್ಕೆ ಕಾರಣವಾಗುವ ಇದು, ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಅರಿವನಕೊರತೆಯೊಂದಗೆ ಮಾಲಿನ್ಯವನ್ನು ಹೆಚ್ಚಿಸುತ್ತಿದೆ.


ನಮಗೆಲ್ಲಾ ತಿಳಿದಿರುವಂತೆ ಪರ್ಯಾಯ ದ್ವೀಪವಾದ ಭಾರತ, ಮೂರುಕಡೆ ಸಮುದ್ರದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಇಂದು ಪ್ಲಾಸ್ಟಿಕ್ ನಮ್ಮ ದೇಶದ ಕಡಲಿನ ಸೌಂದರ್ಯವನ್ನು ವಿರೂಪಗೊಳಿಸಿರುವುದಲ್ಲದೆ, ಜಲಚರಗಳಿಗೂ ಕಂಟಕವಾಗಿದೆ. ಈ ಹಿನ್ನಲೆಯಲ್ಲಿ ಕೇರಳದ ಕೋಝೀಕೋಡ್ ಬೀಚ್ ಸ್ಮಶಾನದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ಪ್ರಭೇದಗಳಿಗೆ ಮೀಸಲಾಗಿರುವ ಪ್ಲಾಸ್ಟಿಕ್‌ನಿಂದ ಮಾಡಿದ ಸಮಾಧಿ ಕಲ್ಲುಗಳಿವೆ. ಈ ಸಾಗರದಲ್ಲಿನ ಸ್ಮಶಾನಕ್ಕೆ ಬಳಸಲಾದ ವಸ್ತುಗಳು ಜಲಮೂಲಗಳಿಂದ ತೆಗೆದ ಏಕ-ಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಲಾಗಿದೆ. ಚಾಲ್ಯಾರ್ ನದಿ ಮತ್ತು ಕೊಝೀಕೋಡ್‌ನ ಬೇಪೋರ್ ಬೀಚ್‌ನ ಮೀಟಿಂಗ್ ಪಾಯಿಂಟ್‌ನಲ್ಲಿ ಈ ಸ್ಮಶಾನವಿದೆ.


ಬೀಚ್‌ ನಲ್ಲಿರುವ ಸಮಾಧಿ (ಚಿತ್ರಕೃಪೆ: ವಾಯ್ಸ್)



ಪ್ಲಾಸ್ಟಿಕ್ ಮಾಲಿನ್ಯದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಕಳೆದ ಮೂರು ತಿಂಗಳಿಂದ ಕೇರಳದ ಜೆಲ್ಲಿ ಮೀನು ವಾಟರ್ಸ್ಪೋರ್ಟ್ಸ್ ಹವಾಮಾನ ಕಾರ್ಯಕರ್ತ ಆಕಾಶ್ ರಾನಿಸನ್ ಅವರೊಂದಿಗೆ ಕೆಲಸ ಮಾಡುತ್ತಿದೆ. ವಿಶ್ವ ವನ್ಯಜೀವಿ ಸಂರಕ್ಷಣಾ ದಿನವಾದ ಡಿಸೆಂಬರ್ 4 ರಂದು, ಪ್ಲಾಸ್ಟಿಕ್ ಬಾಟಲಿಗಳಿಂದ ಸಂಪೂರ್ಣವಾಗಿ ನಿರ್ಮಿಸಲಾದ ವಿಶ್ವದ ಮೊದಲ ಸಮುದ್ರ ಸ್ಮಶಾನ ಸಾರ್ವಜನಿಕರಿಗೆ ತೆರೆದಿದೆ.


ಜೆಲ್ಲಿಫಿಶ್ ವಾಟರ್ಸ್ಪೋರ್ಟ್ಸ್ ಸೆಪ್ಟೆಂಬರ್ನಲ್ಲಿ ಸಾವರ್ಜನಿಕರಲ್ಲಿ ಮತ್ತು ಸ್ವಯಂ ಸೇವಕರಲ್ಲಿ ತ್ಯಾಜ್ಯಗಳನ್ನು ಆಯ್ದು ತರಲು ಪ್ರೋತ್ಸಾಹಿಸಿತು. ನವೆಂಬರ್‌ನಲ್ಲಿ ಬೇಪೋರ್‌ನಲ್ಲಿ ಮತ್ತಷ್ಟು ಬೀಚ್ ಕ್ಲೀನ್-ಅಪ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ರೀತಿಯಾಗಿ ಸುಮಾರು 800 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಲಾಯಿತು - ಅದರಲ್ಲಿ 2,000 ಪ್ಲಾಸ್ಟಿಕ್ ಬಾಟಲಿಗಳೇ ಸೇರಿದ್ದವು. ಕ್ಲೀನ್ ಬೀಚ್ ಮಿಷನ್‌ನ ಮುಖ್ಯಸ್ಥರಾಗಿರುವ ಕ್ಯಾಲಿಕಟ್ ಜಿಲ್ಲಾಧಿಕಾರಿ ಸಾಂಬಶಿವ ರಾವ್ ಮತ್ತು ಶಾಸಕ ವಿಕೆಸಿ ಮುಹಮ್ಮದ್ ಕೋಯಾ ಅವರ ಬೆಂಬಲದೊಂದಿಗೆ ಬೀಚ್ ಕ್ಲೀನ್ ಅಪ್ ಡ್ರೈವ್ ನಡೆಯಿತು, ವರದಿ ನ್ಯೂಯ್ಸ್ 18.


ಪ್ರಸ್ತುತ ಇಲ್ಲಿನ ಒಂದು ಸಮಾಧಿಯೂ 8*4 ಅಡಿ ಎತ್ತರವಾಗಿದ್ದು ಇದನ್ನು ಮಿಸ್ ಕೇರಳ ಎಂದು ಕರೆಯಲ್ಪಡುವ ಅತ್ಯಂತ ಎತ್ತರದ ಮೀನು ಡೆನಿಸನ್ ಬಾರ್ಬ್‌ಗೆ ಸಮರ್ಪಿಸಲಾಗಿದೆ, ಇತರ ಸಮಾಧಿ ಕಲ್ಲುಗಳನ್ನು ಕ್ರಮವಾಗಿ ಸಾಫಿಶ್, ಜೀಬ್ರಾ ಶಾರ್ಕ್, ಗಿಳಿ ಮೀನು, ಲೆದರ್‌ಬ್ಯಾಕ್ ಆಮೆ, ಈಗಲ್ ರೇ, ಡುಗಾಂಗ್, ಹ್ಯಾಮರಹೆಡ್ ಶಾರ್ಕ್ ಮತ್ತು ಸೀ ಹಾರ್ಸ್‌ಗೆ ಸಮರ್ಪಿಸಲಾಗಿದೆ.


ಆಕಾಶ್ ರಾನಿಸನ್ ಎಡೆಕ್ಸ್ ಲೈವ್‌ ಜೊತೆಗೆ ಮಾತನಾಡುತ್ತಾ,


"ನಮ್ಮ ಸಮುದ್ರಗಳಲ್ಲಿ ವಾರ್ಷಿಕವಾಗಿ 6.4 ದಶಲಕ್ಷ ಟನ್ ಸಮುದ್ರ ಕಸವನ್ನು ವಿಲೇವಾರಿ ಮಾಡಲಾಗುತ್ತದೆ. ಬೀಚ್ ಕಸ-ಅದರಲ್ಲಿ 50 ಪ್ರತಿಶತ ಪ್ಲಾಸ್ಟಿಕ್ ತ್ಯಾಜ್ಯ ಜಲಚರಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ನೀರು ಮತ್ತು ಪ್ಲಾಸ್ಟಿಕ್ ಮಾಲಿನ್ಯ, ಅತಿಯಾದ ಶೋಷಣೆ ಮತ್ತು ಹವಾಮಾನ ಬದಲಾವಣೆಯು 15 ಸಮುದ್ರ ಪ್ರಭೇದಗಳ ಅಳಿವಿಗೆ ಕಾರಣವಾಗಿದೆ ಮತ್ತು ಪ್ರಸ್ತುತ 700 ಕ್ಕೂ ಹೆಚ್ಚು ಜೀವಗಳಿಗೆ ಅಪಾಯವನ್ನುಂಟುಮಾಡಿದೆ," ಎನ್ನುತ್ತಾರೆ.


ಸ್ಮಶಾನದ ಸಮಾಧಿಯ ಎದುರು ನಿಂತಾಗ ಗತ ವ್ಯಕ್ತಿಯ ನೆನಪು ಆವರಿಸಿಕೊಳ್ಳುವಂತೆ, ಈ ಸಮಾಧಿ ತಮ್ಮದಲ್ಲದ ತಪ್ಪಿಗೆ ಜೀವತೆತ್ತ ಹಲವಾರು ಜಲಚರ ಜೀವಿಗಳ ನೆನಪನ್ನು ತಂದು, ನಮ್ಮೆಲ್ಲರಲ್ಲಿ ಕನಿಷ್ಠ ಪರಿಸರ ಕಾಳಜಿ ಮುಡಿಸಲಿ, ಪ್ಲಾಸ್ಟಿಕ್ ಮುಕ್ತ ಪರಿಸರ ಕೇವಲ ಕೆಲವು ದಿನಗಳ ದಿನಾಚರಣೆಗೆ ಮಾತ್ರ ಸೀಮಿತವಾಗದಿರಲಿ. ಸಣ್ಣ ಪುಟ್ಟ ಹೊದಾಣಿಕೆಗಳು ಪ್ಲಾಸ್ಟಿಕ್ ಮುಕ್ತ ಪರಿಸರದ ಸೃಷ್ಟಿಗೆ ಕಾರಣವಾಗಬಲ್ಲದು ಈ ನಿಟ್ಟಿನಲ್ಲಿ ನಾವೆಲ್ಲ ಒಂದು ಹೆಜ್ಜೆ ಮುಂದಿಡೋಣ, ಏನಂತೀರಾ...?


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.