ಲಿಂಗಾಯತ ಮಠದ ಪೀಠಾಧೀಶರಾಗಿ ಆಯ್ಕೆಯಾದ ಮುಸ್ಲಿಂ ವ್ಯಕ್ತಿ

ಗದಗ ಜಿಲ್ಲೆಯ ಅಸೂಟಿ ಗ್ರಾಮದಲ್ಲಿ ದಿವಾನ ಶರೀಫ್ (33) ಎಂಬ ಮುಸ್ಲಿಂ ವ್ಯಕ್ತಿಯೊಬ್ಬರು ಮುರುಘರಾಜೇಂದ್ರ ಕೋರನೇಶ್ವರ ಶಾಂತಿಧಾಮ ಎಂಬ ಲಿಂಗಾಯತ ಮಠದ ಪೀಠಾಧಿಪತಿಗಳಾಗಿ ಆಯ್ಕೆಯಾಗಿದ್ದಾರೆ.

ಲಿಂಗಾಯತ ಮಠದ ಪೀಠಾಧೀಶರಾಗಿ ಆಯ್ಕೆಯಾದ ಮುಸ್ಲಿಂ ವ್ಯಕ್ತಿ

Thursday February 20, 2020,

2 min Read

ಭಾರತವು ಸರ್ವಧರ್ಮಗಳಿಂದ ಕೂಡಿದಂತಹ ಸಮನ್ವಯ ರಾಷ್ಟ್ರ. ಇಲ್ಲಿ ಎಲ್ಲ ವರ್ಗ ಪಂಥಗಳನ್ನೊಳಗೊಂಡ ಭಾವೈಕತೆಯು ಕಂಡು ಬರುತ್ತದೆ. ಶಿವಶರಣ ಬಸವಣ್ಣನವರ ಮಾರ್ಗದ ಪಥವನ್ನೂ ಇಂದಿಗೂ ಅನೇಕ ಜನರು ಪಾಲಿಸುತ್ತಿರುವುದು ವಿಶೇಷ. ಇಂತಹವರ ಸಾಲಿಗೆ ಮುಸ್ಲಿಂ ಮತದ ವ್ಯಕ್ತಿಯೊಬ್ಬರು ಲಿಂಗಾಯತ ಮಠದ ಮುಖ್ಯಸ್ಥರಾಗಲಿರುವುದು ಭಾವೈಕತೆಯನ್ನು ಎತ್ತಿ ಹಿಡಿದಿದೆ.


ಇಂತಹದ್ದೊಂದು ವಿನೂತನ ಘಟನೆಗೆ ಗದಗ ಜಿಲ್ಲೆ ಸಾಕ್ಷಿಯಾಗಿದೆ, ಜಿಲ್ಲೆಯ ಅಸೂಟಿಯ ಮುರುಘರಾಜೇಂದ್ರ ಕೋರನೇಶ್ವರ ಶಾಂತಿಧಾಮದ ಪೀಠಾಧಿಪತಿಗಳಾಗಲು ದಿವಾನ್ ಶರೀಫ್‌ (33) ಸಜ್ಜಾಗಿದ್ದಾರೆ.


(ಚಿತ್ರಕೃಪೆ: ದಿ ಹಿಂದೂ)


ತಮ್ಮ ಜೀವನದುದ್ದಕ್ಕೂ ಸಮಾನತೆಯ ತತ್ವವನ್ನು ಎತ್ತಿ ಹಿಡಿದ‌ 12ನೇ ಶತಮಾನದ ಸಾಮಾಜಿಕ ಸುಧಾರಕರಾದ ಬಸವಣ್ಣನವರ ಆದರ್ಶ ತತ್ವಗಳನ್ನು ಪಾಲಿಸುತ್ತಾ ಗದಗ ಜಿಲ್ಲೆಯ ಲಿಂಗಾಯತ ಮಠವು ತನ್ನ ಪೀಠಾಧಿಪತಿಯಾಗಿ ಮುಸ್ಲಿಂ‌ರೊಬ್ಬರನ್ನು ನೇಮಿಸಲು ಮುಂದಾಗಿದೆ.


ಕಲಬುರ್ಗಿಯ ಖಜೂರಿ ಗ್ರಾಮದಲ್ಲಿ ಕೊರಾನೇಶ್ವರ ಸಂಸ್ಥಾನ ಮಠದ ದರ್ಶಕರಾದ ಶ್ರೀ ಮುರುಘರಾಜೇಂದ್ರ ಕೋರಾನೇಶ್ವರ ಶಿವಯೋಗಿ ಅವರು ಈ ದಿಟ್ಟ ನಡೆಯ ಹಿಂದಿರುವ ವ್ಯಕ್ತಿ. ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ ಮಠದಿಂದ ಪ್ರೇರಣೆ ಪಡೆದಿದ್ದಾರೆ. ಈ ಮಠವು ಬಸವ ತತ್ವಗಳ‌ನ್ನು ಅಳವಡಿಸಿಕೊಂಡಿದೆ, ವರದಿ ದಿ ಹಿಂದೂ.


"ದಿವಾನ್ ಶರೀಫ್‌ರು ಬಾಲ್ಯದಿಂದಲೂ ಬಸವಣ್ಣನವರ ತತ್ವಗಳಿಂದ ಪ್ರಭಾವಿತರಾಗಿದ್ದರು. ಅವರ ಆದರ್ಶಗಳು, ಸಾಮಾಜಿಕ ನ್ಯಾಯ ಮತ್ತು ಸಾಮರಸ್ಯದ ಕೆಲಸಗಳಲ್ಲಿ ತೊಡಗುವುದಾಗಿತ್ತು," ಎನ್ನಲಾಗಿದೆ.


ಅಸೂಟಿಯಲ್ಲಿ ಶಿವಯೋಗಿಯವರ ಪ್ರವಚನದಿಂದ ಪ್ರಭಾವಿತರಾದ ಶರೀಫ್‌ರವರ ತಂದೆ ದಿವಂಗತ ರಹೀಮ್ ಸಾಬ್‌ ಮುಲ್ಲಾ ಅವರು ಗ್ರಾಮದಲ್ಲಿ ಮಠವನ್ನು ಸ್ಥಾಪಿಸಲು ಎರಡು ಎಕರೆ ಭೂಮಿಯನ್ನು ದಾನ ಮಾಡಿದ್ದರು. ಶರೀಫ್ ಹಾಗೂ ಅವರ ತಂದೆ ಇವರಿಬ್ಬರೂ ಲಿಂಗ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.


ದಿ ಹಿಂದೂ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರೀ ಮುರುಘರಾಜೇಂದ್ರ ಕೋರನೇಶ್ವರ ಶಿವಯೋಗಿಗಳು,


"ಮೂರು ಹೆಣ್ಣು ಹಾಗೂ ಒಬ್ಬ ಗಂಡು ಮಗನ ತಂದೆಯಾದ ಶರೀಫ್‌ರವರು ಪಕ್ಕದ ಹಳ್ಳಿಯಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಶರಣರ ಹಾಗೂ ವಚನಗಳ ಕುರಿತಾಗಿ ಮಾತನಾಡುತ್ತಿದ್ದರು. ಬಸವಣ್ಣನವರು ವಿವಾಹಿತ ವ್ಯಕ್ತಿಯು ಮಠಾಧೀಶರಾಗುವುದನ್ನು ಎಂದು ವಿರೋಧಿಸಿದರಲಿಲ್ಲ. ಶರೀಫ್‌ರವರ ಕುಟುಂಬದ ಜೀವನೋಪಾಯಕ್ಕೆ ವ್ಯವಸ್ಥೆ ಮಾಡಿದ ನಂತರ ನಾವು ನಮ್ಮ ಜೊತೆ ಅವರನ್ನು ಕರೆದೊಯ್ಯುತ್ತಿದ್ದೇವೆ. ಈ ನಿರ್ಧಾರವನ್ನು ಗ್ರಾಮದ ನಿವಾಸಿಗಳು ಸ್ವಾಗತಿಸಿದ್ದಾರೆ," ಎಂದು ತಿಳಿಸಿದ್ದಾರೆ.


ಇದೇ ತಿಂಗಳು 26ರಂದು ನಡೆಯಲಿರುವ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶರೀಫ್‌ ಅವರನ್ನು ಶಾಂತಿಧಾಮದ ಮುಖ್ಯಸ್ಥರೆಂದು ಹೇಳಲಾಗುತ್ತದೆ.


ಸಮಾಜದ ಕಟ್ಟುಪಾಡುಗಳನ್ನು ಬದಲಾಯಿಸುವಂತಹ ಹಾಗೂ ಭಾವೈಕತೆಯನ್ನು ಸಾರುವಂತಹ ಇಂತಹ ಘಟನೆಗಳು ಉಳಿದ ಧರ್ಮಗಳಿಗೂ ಪ್ರೇರೆಣೆಯಾಗಲಿ. ಭಾರತದಲ್ಲಿ ಎಂದಿಗೂ ಈ ಭಾವೈಕತೆ, ಏಕತೆ ಹೀಗೆ ಉಳಿಯಲಿ.