ಕೇವಲ ಒಂದು ಎಕರೆ ಜಾಗದಲ್ಲಿ ಕಿರುವನ ಸೃಷ್ಟಿಸಿದ ಶಿವಮೊಗ್ಗದ ನಾಗೇಶ್
ಕಾಂಕ್ರೀಟ್ ಕಾಡೆಂಬ ನಗರವನ್ನು ನೋಡಿ ನೋಡಿ ಬೇಸತ್ತ ಶಿವಮೊಗ್ಗದ ನಾಗೇಶ್, ಒಂದು ಕೋಟಿ ಬೆಲೆಬಾಳುವ ಜಾಗದಲ್ಲಿ, 300 ಗಿಡಗಳನ್ನು ನೆಟ್ಟು ಈಗ ಅದನ್ನು ಈಶ್ವರ ವನ ಎಂದು ನಾಮಕರಣ ಮಾಡಿ, ಭಾರತದ ಅರಣ್ಯ ಪ್ರದೇಶದ ಬೆಳವಣಿಗೆಯಲ್ಲಿ ಭಾಗಿಯಾಗಿದ್ದಾರೆ.
ಭಾರತವು ತನ್ನ ಭೂಪ್ರದೇಶದ 33% ಜಾಗವನ್ನು ಅರಣ್ಯಪ್ರದೇಶವನ್ನಾಗಿ ಮಾಡಬೇಕೆಂಬ ಯೋಜನೆಯನ್ನು ಹೊಂದಿದೆ. ಹೀಗಿರುವಾಗ 2017ರಲ್ಲಿ 22 ಪ್ರತಿಶತದಷ್ಟು ಮಾತ್ರ ಅರಣ್ಯ ಪ್ರದೇಶವನ್ನು ಭಾರತ ಹೊಂದಿದೆ ಎಂದು ವರದಿಯೊಂದು ತಿಳಿಸಿತ್ತು.
ನಮ್ಮ ಕಾಡುಗಳನ್ನು ನಾಶಗೊಳಿಸಿ ಬಹಳಷ್ಟು ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ಸರಕಾರವು ನಿಷೇಧಿಸಿದ್ದರೂ, ಟಿಂಬರ್ ಮಾಫಿಯಾಗಳು ನಮ್ಮ ಕಾಡಿನ ಅಸಂಖ್ಯ ಮರಗಳನ್ನು ಕಡಿದು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಗಣಿಗಾರಿಕೆ ಕಡಿಮೆಯಾಗಿದ್ದರೂ ಹಿಂದಿನ ವರ್ಷಗಳಲ್ಲಿ ಭೂಗರ್ಭಕ್ಕೆ ಕೈಹಾಕಿ ಅದೆಷ್ಟೋ ಗುಡ್ಡಗಳು ಕರಗಿವೆ.
ಜಾಗತೀಕರಣದ ಪ್ರಭಾವಕ್ಕೆ ಯಥೇಚ್ಛವಾಗಿ ಒಳಪಟ್ಟ ನಗರ ಪ್ರದೇಶಗಳು ತಮ್ಮ ಸುತ್ತಲಿನ ಕೃಷಿ ಭೂಮಿಯನ್ನು ಸಹ ಅಳಿಸಿಹಾಕಿ ಅದರಲ್ಲೂ ಗಗನದೆತ್ತರದ ಕಟ್ಟಡಗಳನ್ನು ನಿರ್ಮಿಸಿ ಕಾಂಕ್ರೀಟ್ ಕಾಡೊಂದನ್ನು ಸೃಷ್ಟಿಸಿಬಿಟ್ಟಿದ್ದಾರೆ. ಹಾಗಾಗಿ ನಗರ ಪ್ರದೇಶದ ಜನರು ದಟ್ಟ ಮರಗಿಡಗಳ ಸಮೂಹವನ್ನು ನೋಡುವುದು ಸಾಧ್ಯವೇ ಇಲ್ಲವೆಂಬಂತಾಗಿದೆ. ಇಂತಹ ಪರಿಸ್ಥಿತಿಯನ್ನು ಕಂಡ 60ರ ವಯಸ್ಸಿನ ನವ್ಯಶ್ರೀ ನಾಗೇಶ್, ಒಂದು ಧೃಢ ನಿರ್ಧಾರಕ್ಕೆ ಬಂದರು.
ಶಿವಮೊಗ್ಗ- ಶಿಕಾರಿಪುರ ರಸ್ತೆ ಬದಿಯಲ್ಲಿ ಒಂದು ಎಕರೆ ಜಾಗದಲ್ಲಿ ನಾಗೇಶ್ 30 ರೀತಿಯ 300 ಗಿಡಗಳನ್ನು ನೆಟ್ಟು, ಬೆಳೆಸಿ, ಈಗ ಅದನ್ನು ದಟ್ಟವಾದ ಕಿರುವನದಂತೆ ಮಾಡಿದ್ದಾರೆ.
ತಮ್ಮ ಕಿರು ಅರಣ್ಯಕ್ಕೆ “ಈಶ್ವರ ವನ” ವೆಂದು ಹೆಸರಿಟ್ಟಿರುವ ನಾಗೇಶ್,
"ನಾವು ಮಾನವರು ಪ್ರಕೃತಿಯಲ್ಲಿ ಎಲ್ಲವನ್ನೂ ನಾಶಪಡಿಸಿದ್ದೇವೆ. ನಗರದಲ್ಲಿ ಎಲ್ಲಾ ಕಾಡುಗಳು ಮತ್ತು ಪಕ್ಷಿಗಳು ಕಣ್ಮರೆಯಾಗಿವೆ, ಆದ್ದರಿಂದ ನಾನು ಶಿವನ ಹೆಸರಿನಲ್ಲಿ ಈಶ್ವರ ವನವನ್ನು ಬೆಳೆಸಿದೆ. ಇದರಲ್ಲಿ 300 ಕ್ಕೂ ಹೆಚ್ಚು ಸಸ್ಯಗಳಿವೆ. ಇದು ಹಳೆಯ ಪರಿಕಲ್ಪನೆಯಾಗಿದ್ದು ಅದನ್ನು ಸಂರಕ್ಷಿಸುವುದಕ್ಕಾಗಿ ದೇವರ ಹೆಸರಿನಲ್ಲಿ ಕಾಡುಗಳನ್ನು ದೇವರಿಗೆ ಅರ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಪಕ್ಷಿಗಳನ್ನು ಸಂರಕ್ಷಿಸಲು ಮತ್ತು ಅಂತರ್ಜಲವನ್ನು ಪುನರ್ಭರ್ತಿ ಮಾಡಲು ನಗರದಲ್ಲಿ ಹೆಚ್ಚಿನ ಭೂಮಿಯನ್ನು ಖರೀದಿಸಲು ನಾನು ಬಯಸುತ್ತೇನೆ," ಎಂದು ಎ ಎನ್ ಐಗೆ ತಿಳಿಸಿದ್ದಾರೆ
ಈ ಈಶ್ವರ ವನವು ಕೇವಲ ಗಾಳಿಯನ್ನು ಶುದ್ಧಗೊಳಿಸುವುದಷ್ಟೇ ಅಲ್ಲದೆ, ಪಕ್ಷಿಗಳಿಗೆ ತಮ್ಮ ಗೂಡನ್ನು ಕಟ್ಟಿಕೊಳ್ಳಲೂ ಸಹ ಇದು ಸಹಾಯಕವಾಗಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಪುನರ್ಭರ್ತಿ ಮಾಡುತ್ತದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.