ಕಿತ್ತಳೆ ಮಾರಿ ಆಟೋ ಓಡಿಸುತ್ತಿದ್ದ ಚಾಲಕ ಇಂದು 400 ಕೋಟಿ ಮೌಲ್ಯದ ಕಂಪನಿಯ ಒಡೆಯ

ಒಂದು ಕಾಲದಲ್ಲಿ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದ ಪ್ಯಾರಾ ಖಾನ್ ಇಂದು ದೊಡ್ಡ ಸಾರಿಗೆ ಕಂಪನಿಯನ್ನು ಮುನ್ನಡೆಸುವ ಒಡೆಯರಾಗಿದ್ದಾರೆ.

ಕಿತ್ತಳೆ ಮಾರಿ ಆಟೋ ಓಡಿಸುತ್ತಿದ್ದ ಚಾಲಕ ಇಂದು 400 ಕೋಟಿ ಮೌಲ್ಯದ ಕಂಪನಿಯ ಒಡೆಯ

Wednesday October 30, 2019,

3 min Read

q

ಹಲವಾರು ಪ್ರಶಸ್ತಿಯೊಂದಿಗೆ ಪ್ಯಾರಾ ಖಾನ್ (ಚಿತ್ರ ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌)

ಯಶಸ್ಸು ಎಂಬುದು ಬಹು ವರ್ಷಗಳ ಪರಿಶ್ರಮ. ಅದು ಸಾಮಾನ್ಯವಾಗಿ ಬರುವಂಥದಲ್ಲ. ಸಾಕಷ್ಟು ಮಂದಿ, ಸಾಧಕರು ಎಂಬ ಹಣೆಪಟ್ಟಿ ಪಡೆಯುತ್ತಾರೆ ಎಂದರೆ ಅದು ಅವರ ಬಹಳ ವರ್ಷದ ತಪ್ಪಸ್ಸೇ ಸರಿ. ಅನೇಕ ಮಂದಿ ಸಾಧಕರು ಹಿಂದಿನ ದಿನಗಳಲ್ಲಿ ಒಂದೊತ್ತಿನ ಊಟಕ್ಕೂ ಶ್ರಮ ಪಟ್ಟಿದ್ದಾರೆ ಎಂದರ್ಥವೇ. ಇಂಥಹ ಮಾತಿಗೆ ಸಾಕಷ್ಟು ಉದಾಹರಣೆಗಳು ಇವೆ. ಈ ಸಾಧಕರ ಸಾಲಿಗೆ ಸೇರುತ್ತಿದ್ದಾರೆ ಪ್ಯಾರಾ ಖಾನ್.


ನಾಗಪುರದ 41 ವರ್ಷದ ಯಶಸ್ವಿ ಉದ್ಯಮಿ ಪ್ಯಾರಾ ಖಾನ್ ಅಶ್ಮಿ ರೋಡ್ ಟ್ರಾನ್ಸ್ ಪೋರ್ಟ್ ಸಂಸ್ಥೆಯಲ್ಲಿ 500 ಜನರಿಗೆ ಕೆಲಸವನ್ನು ಕೊಟ್ಟಿದ್ದಾರೆ. 125 ಟ್ರಕ್ ಸೇರಿದಂತೆ ಹಲವು ವಾಹನ ಹೊಂದಿದ್ದಾರೆ. ಮತ್ತು ನೂರಾರು ಕೋಟಿ ವ್ಯವಹಾರ ಮಾಡುತ್ತಿದ್ದಾರೆ.


15 ವರ್ಷಗಳ ಹಿಂದೆ ಪ್ಯಾರ್ ಖಾನ್‌ಗೆ ಟ್ರಕ್ ಖರೀದಿಸಲು 11 ಲಕ್ಷ ಹಣ ಬೇಕಿರುತ್ತದೆ‌. ಈ ಹಣಕ್ಕಾಗಿ ವೈಶ್ಯ ಬ್ಯಾಂಕ್ ಗೆ ಅರ್ಜಿ ಹಾಕುತ್ತಾರೆ. ಆದರೆ ಪ್ಯಾರಾ ಖಾನ್ ಗೆ ಹಣ ಕೊಡಲು ಹಿಂದೇಟು ಹಾಕುತ್ತಾರೆ ಬ್ಯಾಂಕ್ ಮ್ಯಾನೇಜರ್. ಆದರೆ ಪ್ರಯತ್ನ ಬಿಡದ ಪ್ಯಾರಾ ಖಾನ್ ಹೇಗೋ ಮಾಡಿ 11 ಲಕ್ಷ ಸಾಲ ಪಡೆಯುತ್ತಾರೆ‌. ಈ ಸಾಲವನ್ನು ಕೇವಲ 2 ವರ್ಷದಲ್ಲಿ ತೀರಿಸುತ್ತಾರೆ ಪ್ಯಾರೆ ಖಾನ್, ವರದಿ ಫೈನಾಷಿಯಲ್ ಎಕ್ಸ್ ಪ್ರೆಸ್.


ವಿಶೇಷ ಅಂದರೆ ಅಂದು ಸಾಲ ಕೊಡಲು ಹಿಂದೆ ಮುಂದೆ ನೋಡಿದ್ದ ಬ್ಯಾಂಕ್ ಮ್ಯಾನೇಜರ್ ಇಂದು ಪ್ಯಾರಾ ಖಾನ್ ಮಾಲೀಕರಾಗಿರುವ ಕಂಪನಿಯ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಮುಖ್ಯಾಧಿಕಾರಿ.


ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡುತ್ತಾರಾ ಪ್ಯಾರಾ ಖಾನ್ ತಮ್ಮ ಹಿಂದಿನ ಹಾದಿಯ ಬಗ್ಗೆ ಹೇಳುತ್ತಾರೆ,


“ನನ್ನ ತಾಯಿ ಹೆಸರು ರಾಯಿಸಾ ಖತುನ್‌. ನನ್ನ ತಾಯಿಗೆ ನಾವು ನಾಲ್ಕು ಮಕ್ಕಳು. ಸಾಕಷ್ಟು ಕಷ್ಟಪಟ್ಟು ಬೆಳೆಸಿದ್ದಾಳೆ. ಚಿಕ್ಕಂದಿನಲ್ಲಿ ನಾವು ನಾಗಪುರ ರೈಲು ನಿಲ್ದಾಣದಲ್ಲಿ ಕಿತ್ತಲೆ ಹಣ್ಣುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದೆವು. ನನಗೆ 18 ವರ್ಷವಿದ್ದಾಗ ವಾಹನ ಚಲಾವಣಾ ಪರವಾನಗಿ ದೊರೆಯಿತು. ಆಗ ಕೊರಿಯರ್‌ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದೆ.”


ಒಡಿಶಾದಲ್ಲಿ ನಡೆದ ಅಪಘಾತದ ನಂತರ ಆ ಕೆಲಸವನ್ನು ಬಿಟ್ಟು, ಅಮ್ಮನ ಉಳಿತಾಯದ ಹಣದಿಂದ ಆಟೋ ಕೊಂಡುಕೊಂಡೆ. ಕೆಲ ದಿನಗಳವರೆಗೆ ಆಟೊ ಚಲಾಯಿಸಿದೆ. ಆಗ ನಾನು ಕೀಬೋರ್ಡ್‌ ಸಹ ನುಡಿಸುತ್ತಿದ್ದೆ. ನಾಗ್ಪುರದ ಮೆಲೊಡಿ ಮೇಕರ್ಸ್‌ ತಂಡದಲ್ಲಿದಲ್ಲಿಯೂ ಇದ್ದೆ.


ಈ ತಂಡದಲ್ಲಿರುವಾಗ ಬೇರೆ ಬೇರೆ ಕಾರ್ಯಕ್ರಮಗಳಿಗೆ ತೆರಳಲು ನಮ್ಮ ತಂಡಕ್ಕೆ ಒಂದು ಬಸ್ ಅವಶ್ಯಕತೆ ಇತ್ತು. ಹಾಗಾಗಿ ನನ್ನ ಕೆಲವೊಂದು ವಸ್ತುಗಳನ್ನು ಮಾರಿ ಬಸ್‌ ಖರೀದಿಸಿದೆ. ಆದರೆ, ಈ ಬಸ್ ಬಹಳಷ್ಟು ದಿನ ನನ್ನ ಬಳಿ ಉಳಿಯಲಿಲ್ಲ. ಇದರ ನಂತರ 2004ರಲ್ಲಿ ಟ್ರಕ್‌ ಖರೀದಿಸಬೇಕೆಂದು ನಿರ್ಧರಿಸಿದೆ. ಅದು ನನ್ನ ಕೈಹಿಡಿಯಿತು. 2007ರ ವೇಳೆಗೆ 8 ಟ್ರಕ್‌ಗಳನ್ನು ಖರೀದಿಸಿ 2013ರಲ್ಲಿ ಆಶ್ಮಿ ರೋಡ್ ಟ್ರಾನ್ಸ್ಫೋರ್ಟ್ ಕಂಪನಿ ನೋಂದಣಿ ಮಾಡಿಸಿದೆ ಎನ್ನುತ್ತಾರೆ ಪ್ಯಾರಾ ಖಾನ್.



ಖಾನ್ ಅವರ ಟ್ರಕ್ ಗಳು ಕೆಇಸಿ ಇಂಟರ್‌ನ್ಯಾಷನಲ್‌, ಕೆಎಸ್‌ಡಬ್ಲ್ಯೂ ಸ್ಟೀಲ್‌, ಟಾಟಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಕಂಪನಿಗಳ ಉತ್ಪನ್ನ ಸಾಗಣೆಗೆ ಬಳಕೆಯಾಗುತ್ತಿದ್ದವು. 2016ರಲ್ಲಿ ಕೆಇಸಿ ಇಂಟರ್‌ನ್ಯಾಷನಲ್‌ ಕಂಪನಿಯ ಟ್ರಾನ್ಸ್‌ಫಾರ್ಮರ್‌ಗಳನ್ನು ಭೂತಾನ್‌ಗೆ ಸಾಗಿರುವ ಗುತ್ತಿಗೆ ಪಡೆದು ಕೊಂಡಿದ್ದರು ಖಾನ್. ಈ ವೇಳೆ ಇವರ ಟ್ರಕ್ ಗಳು ಹೋಗಲು ದಾರಿ ಇರಲಿಲ್ಲ. ಈಶಾನ್ಯ ಭಾಗದಲ್ಲಿ ದುರ್ಗಮ ಪ್ರದೇಶದಲ್ಲಿ ಮರಗಳನ್ನು ಕಡಿದು 30 ಕಿ. ಮೀ ರಸ್ತೆ ನಿರ್ಮಿಸುವ ಅನಿವಾರ್ಯತೆ ಇತ್ತು. ಹಾಗಾಗಿ ರಸ್ತೆ ಹಾಗೂ ದುರ್ಬಲ ಸೇತುವೆಗಳನ್ನು ರಿಪೇರಿ ಕೂಡ ಮಾಡಲಾಯಿತು.


ಇಷ್ಟೆಲ್ಲ ಕೆಲಸಗಳ ನಂತರ ಅವರ ಟ್ರಕ್‌ ಭೂತಾನ್‌ ತಲುಪಿತು. ಆದರೆ, ಅಲ್ಲಿ ಟ್ರಕ್ ಗಳು ದೊಡ್ಡದಾಗಿದ್ದರಿಂದ ಪ್ರವೇಶ ಕಮಾನಿನೊಳಗೆ ಟ್ರಕ್‌ ಹೋಗುತ್ತಿರಲಿಲ್ಲ. ಅದಕ್ಕಾಗಿ ರಸ್ತೆಯನ್ನು ಅಗೆಯಬೇಕಾಗಿತ್ತು. ಹಾಗಾಗಿ ಅಲ್ಲಿನ ಅಧಿಕಾರಿಗಳ ಅನುಮತಿ ಪಡೆದು ರಸ್ತೆಯನ್ನು ಅಗೆದು ಟ್ರಕ್‌ ಸಾಗಿಸಿದರು. ನಂತರ ಆ ರಸ್ತೆಯನ್ನು ಮರು ನಿರ್ಮಿಸಿ ಕೊಟ್ಟಿದ್ದಾರೆ.


ಖಾನ್ ಬಗ್ಗೆ ಮಾತನಾಡುತ್ತಾ ಜೆಎಸ್‌ಡಬ್ಲ್ಯೂ ಸಂಸ್ಥೆಯ ಮುಖ್ಯಸ್ಥ ಮುಕುಲ್ ವರ್ಮಾ ಹೇಳುತ್ತಾರೆ,


“ಖಾನ್ ಕಠೋರ ಹಾಗೂ ಆತ್ಮವಿಶ್ವಾಸ ಮನಸ್ಥಿತಿಯವರು. ಲಾಭ ಮತ್ತು ನಷ್ಟದ ಬಗ್ಗೆ ಯೋಚಿಸುವುದಿಲ್ಲ. ಕಳಿಸಬೇಕಾದ ವಸ್ತುಗಳ ರವಾನೆಯನ್ನು ತಲುಪಿಸುತ್ತಾರೆ. ಈ ವೇಳೆ ಸವಾಲಿನ ಕಾರ್ಯ ಯೋಜನೆಗಳಿದ್ದರೂ ಅದನ್ನು ತೆಗೆದುಕೊಳ್ಳುತ್ತಾರೆ.”


ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡುತ್ತಾ ಖಾನ್ ಹೇಳುತ್ತಾರೆ,


"2018ರಲ್ಲಿ ಅಹಮದಬಾದ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಮಹೀಂದ್ರ ಟ್ರಕ್‌ ಅಂಡ್ ಬಸ್ ಕಂಪನಿ ಜಂಟಿಯಾಗಿ ಕಾರ್ಯಕ್ರಮ ಆಯೋಜನೆ ಮಾಡುತ್ತದೆ. ಈ ಕಾರ್ಯಕ್ರಮದಲ್ಲಿ ಯುವ ಸಾರಿಗೆ ಉದ್ಯಮಿ ವಿಭಾಗದ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಲಭಿಸಿತು. ಈ ಸ್ಪರ್ಧೆಯಲ್ಲಿ ಅಮೆರಿಕದ ಇಬ್ಬರು ಒಳಗೊಂಡು ಒಟ್ಟು 18 ಮಂದಿ ಈ ಸ್ಪರ್ಧೆಯಲ್ಲಿದ್ದರು."

ಈ ವೇಳೆ ಕೆಲವೊಬ್ಬರು ಲ್ಯಾಪ್ ಟಾಪ್, ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ತಮ್ಮ ಉದ್ಯಮದ ಬಗ್ಗೆ ಹೇಳುತ್ತಿದ್ದರು. ಆದರೆ ಈ ವೇಳೆ ನಾನು ಹಿಂದಿಯಲ್ಲಿ ನನ್ನ ಹಾದಿಯನ್ನು ವಿವರಿಸಿದ್ದೆ ಎನ್ನುತ್ತಾರೆ‌.


ಇನ್ನು ಕಾರ್ಯಕ್ರಮ ಸಂಘಟಕರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೇಳಿದಾಗ ನನಗೆ ಐಐಎಂ ಎಂದರೇನು ಎಂದು ತಿಳಿದಿರಲಿಲ್ಲ. ಹಾಗಾಗಿ ಮನಸ್ಸಿಲ್ಲದೆ ಅದರಲ್ಲಿ ಭಾಗವಹಿಸಿದ್ದೆ ಎನ್ನುತ್ತಾರೆ‌.


ಸದ್ಯ ಖಾನ್ ಅವರ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುವತ್ತ ಗಮನ ಹರಿಸಿದ್ದಾರೆ. ಅಶ್ಮಿ ರೋಡ್ ಟ್ರಾನ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಶೀಘ್ರದಲ್ಲೇ ನಾಗಪುರದ ನಗರಕ್ಕೆ ಹತ್ತಿರವಿರುವ ಮೂರು ಎಕರೆ ಪ್ರದೇಶದಲ್ಲಿ 7 ಕೋಟಿ ರೂ. ಗಳ ಕಾರ್ಪೊರೇಟ್ ಕಚೇರಿಗೆ ಸ್ಥಳಾಂತರಗೊಳ್ಳಲಿದೆ.


ನಾನು ಒಂದೆರಡು ವರ್ಷಗಳಲ್ಲಿ ನನ್ನ ವ್ಯವಹಾರವನ್ನು ವಿಸ್ತರಿಸಲು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಉದ್ದೇಶಿಸಿದ್ದೇನೆ. ಇದು ನಮ್ಮ ದೇಶಕ್ಕೆ ಹೆಚ್ಚು ಅಗತ್ಯವಾಗಿದೆ ಎನ್ನುತ್ತಾರೆ ಖಾನ್ ವರದಿ ಫೈನಾಷಿಯಲ್ ಎಕ್ಸ್ ಪ್ರೆಸ್.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.