ಕಾಡಿನ ವಿಶ್ವಕೋಶಕ್ಕೆ ಪದ್ಮಶ್ರೀಯ ಸಂಭ್ರಮ
74 ವರ್ಶದ ತುಳಸಿಗೌಡ ಇದುವರೆಗೂ ಸುಮಾರು 1ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಗಿಡಗಳು ಮರಗಳು ಔಷಧಿ ಮೂಲಿಕೆಗಳ ಕುರಿತು ಇವರಿಗೆ ಇರುವ ಜ್ಞಾನ ಅಪಾರ. ಈ ಹಿನ್ನಲೆಯಲ್ಲಿ ಭಾರತ ಸರ್ಕಾರ ಕೊಡಮಾಡುವ 2020 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ವೃಕ್ಷಮಾತೆ, ಅರಣ್ಯ ವಿಶ್ವಕೋಶ. ಈ ರೀತಿಯಲ್ಲಿ ಬಿರುದಿ ಪಡೆದವರು ಯಾವುದೇ ಪ್ರತಿಷ್ಠಿತ ಐಐಟಿ ನಿಂದಲೋ ಅಥವಾ ವಿಶ್ವವಿದ್ಯಾಲಯದಿಂದಲೋ ಸಸ್ಯಶಾಸ್ತ್ರದಲ್ಲಿ ಪದವಿ, ಡಾಕ್ಟರೇಟ್ ಗೌರವ ಗಳಿಸಿದವರಲ್ಲಿ, ವಿದೇಶಗಳಲ್ಲಿ ವ್ಯಾಸಂಗ ಮಾಡಿದವರೂ ಅಲ್ಲಾ. ಇವರು ಶಾಲೆಯ ಔಪಚಾರಿಕ ಶಿಕ್ಷಣವನ್ನೂ ಪಡೆಯದೆ, ಅತ್ಯಂತ ಕಾಡುಬಡತನದಲ್ಲಿ ಬೆಳೆದು ಕಾಡಿನ ಮರಗಳಲ್ಲಿ ಬದುಕನ್ನ ಕಂಡುಕೊಂಡ, 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಅವರು.
ಹೌದು ತುಳಸಿ ಗೌಡ ಅವರು ಜನಿಸಿದ್ದು ಉತ್ತರ ಕನ್ನಡದ ಅಂಕೋಲದ ಹೊನ್ನಳ್ಳಿ ಎಂಬ ದಟ್ಟ ಕಾಡಿನ ಮಧ್ಯೆ ಇರುವ ಹಾಲಕ್ಕಿ ಆದಿವಾಸಿ ಕುಟುಂಬದಲ್ಲಿ. ಬಾಲ್ಯದಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡ ತುಳಸಿ ಚಿಕ್ಕವರಿದ್ದಾಗ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ತಮ್ಮ ಗಂಡನ್ನೂ ಕಳೆದುಕೊಂಡರು.
ಬದುಕು ಕಟ್ಟಿಕೊಳ್ಳಲು ತುಳಸಿ ಆಯ್ದುಕೊಂಡಿದ್ದು ಕಾಡನ್ನು. ಬಿಸಿಲಿಗೆ ಬಾಡಿ ಮಳೆಗೆ ಚಿಗುರೊಡೆದು ಫಲಬಿಟ್ಟು, ನೆರಳು ಕೊಡುವ ಮರಗಳೇ ತುಳಸಿ ಅವರಿಗೆ ಜೀವನೋತ್ಸಾಹ ತುಂಬಿದವು. ತಮ್ಮ ಸಂಗಡಿಗರೊಂದಿಗೆ ಕಾಡಿಗೆ ಸೊಪ್ಪು ತರಲು ಹೋಗುತ್ತಿದ್ದಾಗ, ಕೃಷಿಕೆಲಸದಲ್ಲಿ ತೊಡಗಿದ್ದಾಗ ಮರ ಗಿಡ ಔಷದಿ ಗಿಡಮೂಲಿಕೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ ತುಳಸಿ ಬೀಜವನ್ನು ಸಂಗ್ರಹಿಸಿ ಮಳೆಗಾಲದಲ್ಲಿ ಕಾಡಿನೆಲ್ಲೆಡೆ ಬಿತ್ತುತ್ತಿದ್ದರು.
74 ವರ್ಶದ ತುಳಸಿಗೌಡ ಇದುವರೆಗೂ ಸುಮಾರು 1ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಗಿಡಗಳು ಮರಗಳು ಔಷಧಿ ಮೂಲಿಕೆಗಳ ಕುರಿತು ಇವರಿಗೆ ಇರುವ ಅಪಾರವಾದ ಜ್ಞಾನ ಇವರನ್ನು ಕಾಡಿನ ವಿಶ್ವಕೋಶ ಎಂದು ಕರೆಯಲು ಕಾರಣವಾಗಿದೆ.
ತುಳಸಿ ಗೌಡ ಅವರಿಗೆ ಸಸ್ಯಗಳ ಬಗ್ಗೆ ಇರುವ ಅಪಾರವಾದ ಒಲವು ಮತ್ತು ಕಾಳಜಿಯನ್ನು ಕಂಡು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಅವರಿಗೆ ತಮ್ಮ ಇಲಾಖೆಯಲ್ಲಿ ಉದ್ಯೋಗವನ್ನು ನೀಡಿತ್ತು. ಶಿರಸಿ, ಅಂಕೋಲಾ, ಯಲ್ಲಾಪುರದ ಕಾಡುಗಳಲ್ಲಿ ಇವರು ನೆಟ್ಟು ಬೆಳೆಸಿದ ಸಸಿಗಳು ಇಂದು ಮರಗಳಾಗಿದೆ. ತಮ್ಮ ನಿವೃತ್ತಿಯ ನಂತರವೂ ತುಳಸಿಗೌಡ ಮೊದಲಿನಂತೆಯೆ ಸಸಿಗಳನ್ನು ಬೆಳೆಸಿ ಪೋಷಿಸುವ ಕೆಲಸವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಹಲವಾರು ಸಂಧರ್ಭದಲ್ಲಿ ಇವರನ್ನು ಗುರುತಿಸಿ ಸನ್ಮಾನಿಸಿದ್ದರು, ನಮ್ಮ ಕಾಡು ಹಕ್ಕಿಗೆ ವೃಕ್ಷಮಾತೆಗೆ ರಾಷ್ಟ್ರ ಮಟ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ದೊರಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮರಗಳನ್ನು ಬೆಳಸಿ, ಸದ್ದಿಲ್ಲದೆ ನಮ್ಮ ಪರಿಸರಕ್ಕೆ ದೊಡ್ಡ ಕೊಡುಗೆ ಕೊಟ್ಟ ತುಳಸಿ ಅಮ್ಮನ ಈ ನಿಸ್ವಾರ್ಥ ಸೇವಾ ಮನೋಭಾವ ಮತ್ತು ಪರಿಸರ ಪ್ರೀತಿ ನಮ್ಮೆಲ್ಲರಿಗೂ ವಿಸ್ತರಿಸಲಿ ಎಂದು ಆಶಿಸೋಣ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.