ಕೇರಳದ ವಯನಾಡಿನಲ್ಲಿ ಕರೋನಾ ಸೋಂಕಿತರಿಗೆ ರೀಡ್ ಆಂಡ್ ರೆಸ್ಟ್ ಯೋಜನೆ
ಡೋನೇಟ್ ಎ ಬುಕ್ ಯೋಜನೆಯಡಿಯಲ್ಲಿ ವಯನಾಡು ಜಿಲ್ಲಾಡಳಿತ ಸಂಗ್ರಹಿಸಿದ ಪುಸ್ತಕಗಳನ್ನು ಮತ್ತು ನಿಯತಕಾಲಿಕೆಗಳನ್ನ ಐಸೋಲಶನ್‌ನಲ್ಲಿರುವ ಕೋವಿಡ್-19 ಸೊಂಕಿತರಿಗೆ ತಲುಪಿಸುತ್ತಿದ್ದು ಈ ಮೂಲಕ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತಿದೆ.
ಇಂದು ಪೂರ್ತಿ ಪ್ರಪಂಚವೇ ಕೋವಿಡ್-19 ನ ಭಯದಲ್ಲಿ ತತ್ತರಿಸುತ್ತಿದೆ. ಒಂದೆಡೆ ಸೋಂಕಿಗೆ ಒಳಗಾದ ಜನರು ಮತ್ತು ಅವರ ಶ್ರುಶ್ರುಷೆ ಭರದಿಂದಿ ಸಾಗುತ್ತಿದ್ದರೆ, ಇನ್ನೊಂದೆಡೆ ಈ ಸೋಂಕು ಇನ್ನೊಬ್ಬರಿಗೆ ಹರಡದಂತೆ ಸರಕಾರ ಮತ್ತು ವಿವಿಧ ಸರಕಾರೇತರ ಸಂಸ್ಥೆಗಳು ಶ್ರಮಿಸುತ್ತಿವೆ.
ಈ ಹಿನ್ನಲೆಯಲ್ಲಿ ಕೇರಳ ರಾಜ್ಯದ ವಯನಾಡು ಜಿಲ್ಲಾಡಳಿತ ಒಂದು ವಿನೂತನ ಕ್ರಮವನ್ನು ಜನರಮುಂದಿಟ್ಟಿದೆ. ತನ್ನ ರಾಜ್ಯದಲ್ಲಿ ಸೋಂಕಿತರು ಮತ್ತು ಶಂಕಿತ ಸೋಂಕಿತರನ್ನು ಜನಸಾಮಾನ್ಯರಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ಇರಿಸಿ, ಅವರ ಚಿಕಿತ್ಸೆಯಲ್ಲಿ ತೊಡಗಿದೆ. ಸೋಂಕಿತರು ಸುಮಾರು ಒಂದು ತಿಂಗಳುಗಳ ಕಾಲ ಪ್ರತ್ಯೇಕವಾದ ಕೊಠಡಿಯಲ್ಲಿ ಯಾವುದೇ ಜನರ ಸಂಪರ್ಕವಿಲ್ಲದೆ ಇರುವುದು ಈ ಸಮಯದಲ್ಲಿ ಅನಿವಾರ್ಯವಾಗಿದೆ.
ಈ ರೀತಿ ಐಸೋಲಶನ್ ನಲ್ಲಿ ಇರುವ ರೋಗಿಗೆ ಮಾನಸಿಕ ನೆಮ್ಮದಿಯನ್ನು ಮತ್ತು ಧೈರ್ಯವನ್ನು ನೀಡಲು ವಯನಾಡು ಜಿಲ್ಲಾಡಳಿತ ಪುಸ್ತಕದ ಮೊರೆ ಹೋಗಿದೆ. ಡೋನೇಟ್ ಎ ಬುಕ್ ಎಂಬ ಯೋಜನೆಯನ್ನು ಪ್ರಾರಂಭಿಸಿ ಅದರ ಪ್ರಯೋಜನವನ್ನು ರೋಗಿಗಳ ಶ್ರುಶ್ರೂಷೆಯಲ್ಲಿ ಬಳಸಿಕೊಳ್ಳಲು ನಿರ್ಧರಿಸಿದೆ.
ಡೋನೇಟ್ ಎ ಬುಕ್
ಡೋನೇಟ್ ಎ ಬುಕ್ ಎಂಬ ಯೋಜನೆಯಡಿ ಯಾರಾದರೂ ತಮ್ಮ ಪಂಚಾಯಿತಿಗಳಿಗೆ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ದಾನ ಮಾಡಬಹುದು. ಸಂಬಂಧಪಟ್ಟ ಪಂಚಾಯತ್ ಯಾಂತ್ರಿಕ ವ್ಯವಸ್ಥೆಯ ಮೂಲಕ ಪ್ರತ್ಯೇಕವಾಗಿರುವವರಿಗೆ ಪುಸ್ತಕಗಳನ್ನು ತಲುಪಿಸಲಾಗುವುದು, ವರದಿ ಇಂಡಿಯಾ ಟು ಡೇ.
ರೀಡ್ ಅಂಡ್ ರೆಸ್ಟ್
ಐಸೋಲಶನ್‌ನಲ್ಲಿ ಇರುವ ರೋಗಿಗಳಿಗೆ ವಿವಿಧ ಪಂಚಾಯತ್ ನಲ್ಲಿ ಸಂಗ್ರಹಿಸಲಾದ ಪುಸ್ತಕಗಳನ್ನು ಮತ್ತು ನಿಯತಕಾಲಿಕೆಗಳನ್ನ ನೀಡಿ ತನ್ಮೂಲಕ ಅವರಿಗೆ ಮನರಂಜನೆಯನ್ನು ಮತ್ತು ಆತ್ಮಸ್ಥೈರ್ಯವನ್ನು ತುಂಬುವ ಕೆಲಸಕ್ಕೆ ಮುಂದಾಗಿದೆ.
ಇದು ಪ್ರತ್ಯೇಕವಾಗಿರುವವರಿಗೆ ನಮ್ಮ ಕಡೆಯಿಂದ ಒಂದು ರೀತಿಯ ಸಕಾರಾತ್ಮಕ ಸೂಚಕವಾಗಿದೆ. ಇಡೀ ಜನತೆ ಅವರೊಂದಿಗೆ ಇದೆ ಮತ್ತು ಅದು ಅವರು ಇರುವ ಸಮಾಜದ ಹಿತದೃಷ್ಟಿಯಿಂದ ಎಂದು ನಾವು ಈ ಜನರಿಗೆ ಮಾನವೀಯ ಸಂದೇಶವನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ, ಎಂದು ಜಿಲ್ಲಾಧಿಕಾರಿ ಡಾ. ಅದೀಲಾ ಅಬ್ದುಲ್ಲಾ ಲಾಜಿಕಲ್ ಇಂಡಿಯನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.