ಹುತಾತ್ಮ ಯೋಧನ ಪತ್ನಿ ಸೈನ್ಯ ಕ್ಕೆ ಸೇರಿದ ಕಥೆ

ಹುತಾತ್ಮ ಯೋಧ ಕರ್ನಲ್ ಸಂತೋಷ ಮಹಾದಿಕ್ ಅವರ ಪತ್ನಿ ಸ್ವಾತಿ ಮಹಾದಿಕ್ ತಮ್ಮ ಪತಿ ಪ್ರೀತಿಸುತ್ತಿದ್ದ ಕೆಲಸವನ್ನೇ ಆಯ್ಕೆ ಮಾಡಿಕೊಂಡು ತಮ್ಮ 37 ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿ ಲೆಫ್ಟಿನೆಂಟ್ ಆಗಿ 2 ವರ್ಷ ಪೂರೈಸಿದ್ದಾರೆ.

ಹುತಾತ್ಮ ಯೋಧನ ಪತ್ನಿ ಸೈನ್ಯ ಕ್ಕೆ ಸೇರಿದ ಕಥೆ

Thursday November 21, 2019,

2 min Read

ಕರ್ನಲ್ ಸಂತೋಷ ಯಶ್ವಂತ್ ಮಹಾದಿಕ್ ಅವರು 2015 ರಲ್ಲಿ ಕಾಶ್ಮೀರದ ಕುಪ್ವಾರಾದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡಿ ವೀರಮರಣ ಹೊಂದಿದ್ದರು. ಪತ್ನಿಯಾದ ಸ್ವಾತಿ ಮಹಾದಿಕ್ ಅವರು ಪತಿಯ ಹೋರಾಟದ ಜೀವನದಿಂದ ಸ್ಪೂರ್ತಿ ಪಡೆದು ತಮ್ಮ 37ನೇ ವಯಸ್ಸಿಗೆ ಭಾರತೀಯ ಸೈನ್ಯ ಕ್ಕೆ ಸೇರಿದ್ದರು.


ಸ್ವಾತಿ ಮಹಾದಿಕ್ ಅವರಿಗೆ ಕಾರ್ತಿಕೀ ಹಾಗೂ ಸ್ವರಾಜ್ ಎಂಬ ಇಬ್ಬರು ಮಕ್ಕಳಿದ್ದಾರೆ. ಪತಿ ಮರಣ ಹೊಂದಿದ ದಿನವೇ ಸೈನ್ಯಕ್ಕೆ ಸೇರುವ ನಿರ್ಧಾರ ಮಾಡಿ, ತರಬೇತಿ ಪಡೆದು ಸೈನ್ಯಕ್ಕೆ ಸೇರಿದ್ದ ಸ್ವಾತಿ ಈಗ ಲೆಫ್ಟಿನೆಂಟ್ ಆಗಿ ಎರಡು ವರ್ಷ ಪೂರೈಸಿದ್ದಾರೆ.


ಲೆಫ್ಟಿನೆಂಟ್ ಸ್ವಾತಿ ಮಹಾದಿಕ್ ಹಾಗೂ ಮಕ್ಕಳಾದ ಕಾರ್ತಿಕೀ, ಸ್ವರಾಜ್ (ಫೋಟೊ: ಶೀ ದ ಪೀಪಲ್)




ಪತಿಯ ಅಂತ್ಯಕ್ರಿಯೆಯ ದಿನದಂದೇ ನಾನು ಸೈನ್ಯಕ್ಕೆ ಸೇರಲು ನಿರ್ಧರಿಸಿದ್ದೇನೆ. ಹುತಾತ್ಮರ ಪತ್ನಿಗೆ ಸೈನ್ಯ ನೀಡುವ ಏಕೈಕ ರಿಯಾಯಿತಿ ವಯಸ್ಸಿನ ರಿಯಾಯಿತಿ ಅಷ್ಟೇ. ಅದು ನನಗೆ ದೊರೆತಿದೆ ಎನ್ನುತ್ತಾರೆ ಸ್ವಾತಿ ಮಹಾದಿಕ್.


ತನ್ನ ಪತಿಯ ಗೌರವಾರ್ಥವಾಗಿ ಸೈನ್ಯಕ್ಕೆ ಸೇರಿದ್ದ ಸ್ವಾತಿ ಮಹಾದಿಕ್ ಎಸ್ ಎಸ್ ಬಿ (ಸರ್ವಿಸ್ ಸೆಲೇಕ್ಷನ್ ಬೋರ್ಡ್) ಪರೀಕ್ಷೆ ಪೂರೈಸಿ, ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಿ ಅಲ್ಲಿಂದ 11 ತಿಂಗಳ ಕಠಿಣ ತರಬೇತಿ ಪಡೆದು ಸೈನ್ಯದಲ್ಲಿ ಸಶಸ್ತ್ರ ಪಡೆಗಳ ಲೆಫ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


ನಾನು ಸಹ ಸೈನ್ಯಕ್ಕೆ ಸೇರುವ ಮೂಲಕ ನನ್ನ ಪತಿಗೆ ಹತ್ತಿರವಾಗಬೇಕೆಂದು ಬಯಸಿದ್ದೆ. ಯುನಿಫಾರ್ಮ್ ಅವರ ಮೊದಲ ಆಯ್ಕೆ ಮತ್ತು ಪ್ರೀತಿ ಆಗಿತ್ತು. ನನ್ನ ಮಕ್ಕಳೂ ಸಹ ಅವರ ಜೀವನ ವಿಧಾನವನ್ನೇ ಅನುಸರಿಸಲಿ ಎಂದು ಆಶಿಸುತ್ತೇನೆ ಎನ್ನುತ್ತಾರೆ ಸ್ವಾತಿ, ವರದಿ ಶೀ ದ ಪೀಪಲ್.

ನವೆಂಬರ್‌ 18 ಕ್ಕೆ ಸ್ವಾತಿ ಮಹಾದಿಕ್ ಪ್ರಮಾಣ ವಚನ ಸ್ವೀಕರಿಸಿ ಸಶಸ್ತ್ರ ಪಡೆಗಳಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡು ಎರಡು ವರ್ಷ ಪೂರೈಸಿದ್ದಾರೆ. ತನ್ನ ಗಂಡನ ಕಳೆದುಕೊಂಡ ಮಹಿಳೆ ಪತಿಯ ಜೀವನದಿಂದ ಸ್ಪೂರ್ತಿ ಹೊಂದಿ ಸೈನ್ಯಕ್ಕೆ ಸೇರುವುದು ಸಣ್ಣ ವಿಷಯವೇನಲ್ಲ. ಆದರೆ ಅಸಾಧ್ಯವಾದದ್ದೂ ಸಾಧ್ಯ ಎನ್ನುವುದನ್ನು ಸ್ವಾತಿ ಮಹಾದಿಕ್ ತೋರಿಸಿ ಕೊಟ್ಟಿದ್ದಾರೆ. ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿ ನಿಲ್ಲುತ್ತಾರೆ ಸ್ವಾತಿ ಮಹಾದಿಕ್.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.