ನಿಖರ ಹವಾಮಾನ ಮುನ್ಸೂಚನೆ ನೀಡುವ ಮೂಲಕ ರೈತರಿಗೆ ನೆರವಾಗುತ್ತಿರುವ ‘ಕೊಯಮತ್ತೂರು ವೆದರ್‌ಮ್ಯಾನ್’
ಕೊಯಮತ್ತೂರು ವೆದರ್‌ಮ್ಯಾನ್ ಎಂದೇ ಕರೆಯಲ್ಪಡುವ ಜಿ. ಸಂತೋಷ್ ಕೃಷ್ಣನ್‌ರವರು ತಮ್ಮ ಪೇಸ್‌ಬುಕ್ ಪೇಜ್‌ನಲ್ಲಿ 6,800 ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ. ಇವರು ಕನಿಷ್ಟ ಮೂರು ತಿಂಗಳಿಗೊಮ್ಮೆ ತಮ್ಮ ಫೇಸ್‌ಬುಕ್ ಪುಟವನ್ನು ನವೀಕರಿಸುವ ಮೂಲಕ ಪ್ರಸ್ತುತ ಹವಾಮಾನ ಮುನ್ಸೂಚನೆ ಮತ್ತು ಕಾಲೋಚಿತ ಮುನ್ಸೂಚನೆಗಳ ವಿವರದ ಮೂಲಕ ರೈತರಿಗೆ ನೆರವಾಗುತ್ತಿದ್ದಾರೆ.
ಭಾರತದಲ್ಲಿ ಕೃಷಿಯು ಪ್ರಮುಖ ಜೀವನಾಧಾರ ಮೂಲವಾಗಿದೆ. ಕೃಷಿ ಕ್ಷೇತ್ರದ ಒಟ್ಟಾರೆ ಬೆಳವಣಿಗೆ ಮತ್ತು ಉತ್ಪಾದನೆಗೆ ನೀರು ಮತ್ತು ಹವಾಮಾನದ ಲಭ್ಯತೆ ಮುಖ್ಯವಾಗಿರುತ್ತದೆ.
ಹವಾಮಾನ ಮಾದರಿಗಳ ಬಗ್ಗೆ ಮುನ್ಸೂಚನೆ ಹೊಂದಿರುವುದು ಬೆಳೆ ಉತ್ಪಾದನೆಗೆ ಅತ್ಯಂತ ಅವಶ್ಯಕವಾಗಿದೆ. ಮತ್ತು ಇದನ್ನು ತಿಳಿದುಕೊಳ್ಳಲು ಪರಿಣತಿಯ ಅಗತ್ಯವಿರುತ್ತದೆ, ಈ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಿ ರೈತರಿಗೆ ನೆರವಾಗಲು ಸರ್ಕಾರದ ಕೆಲವು ಉಪಕ್ರಮಗಳು ಮತ್ತು ಕೆಲವು ತಜ್ಞರು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಒಬ್ಬರಾದ ಜಿ ಸಂತೋಷ್ ಕೃಷ್ಣನ್‌ರವರು ತಮ್ಮ ಫೇಸ್‌ಬುಕ್ ಪುಟದಲ್ಲಿ 'ಕೊಯಮತ್ತೂರು ವೆದರ್‌ಮ್ಯಾನ್' ಎಂದು ಗುರುತಿಸಿಕೊಂಡಿದ್ದಾರೆ, ಈ ಪುಟವು 6,800 ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದೆ.
ತಾವೊಬ್ಬ ರೈತನ ಮಗನಾಗಿರುವುದರಿಂದ ಹವಾಮಾನದ ನಿಖರ ಮಾಹಿತಿಯ ಅಗತ್ಯವನ್ನು ತಿಳಿದಿದ್ದು ಅದಕ್ಕನುಗುಣವಾಗಿ ಬೆಳೆಗಳನ್ನು ಬೆಳೆಯಲು ಯೋಜಿಸುತ್ತಾರೆ. ಇದು ಅವರಿಗೆ ಫೇಸ್ಬುಕ್ ಪುಟದ ಮೂಲಕ ಹಂಚಿಕೊಳ್ಳಲು ಸಾಧ್ಯವಾಯಿತು.
ಎಡೆಕ್ಸ್ ಲೈವ್‌ನೊಂದಿಗೆ ಮಾತನಾಡುತ್ತಾ ಅವರು ಹೀಗೆ ಹೇಳುತ್ತಾರೆ,
“ನಾನು 2017ರ ನವೆಂಬರ್‌ನಲ್ಲಿ ಕೊಯಮತ್ತೂರು ವೆದರ್‌ಮ್ಯಾನ್ ಫೇಸ್‌ಬುಕ್ ಪುಟವನ್ನು ಪ್ರಾರಂಭಿಸಿದೆ. 2016-17ರ ಅವಧಿಯಲ್ಲಿ ಕೊಯಮತ್ತೂರಿನಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬರಗಾಲವಿತ್ತು. ನಾನು ಕೃಷಿ ಹಿನ್ನೆಲೆಯಿಂದ ಬಂದಿದ್ದರಿಂದ, ರೈತರು ಅನುಭವಿಸುವ ತೊಂದರೆಗಳ ಬಗ್ಗೆ ನನಗೆ ಮೊದಲೇ ಅನುಭವವಿತ್ತು ಹೀಗಾಗಿ ಅವರಿಗೆ ಸಹಾಯ ಮಾಡಲು ಒಂದು ಮಾರ್ಗವನ್ನು ಕಂಡುಕೊಳ್ಳಲು ನಾನು ಬಯಸಿದ್ದೆ.”
ಕೃಷ್ಣರವರು ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ, ಬಾಲ್ಯದಿಂದಲೂ ಹವಾಮಾನ ಮುನ್ಸೂಚನೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅವರು ತಮ್ಮ ಹೊಲಗಳಲ್ಲಿ ಅಜ್ಜನವರಿಗೆ ಸಹಾಯ ಮಾಡುತ್ತಿದ್ದರು, ಆ ಅವಧಿಯಲ್ಲೇ ಹವಾಮಾನ ಮಾದರಿಗಳನ್ನು ಗಮನಿಸುವುದರ ಬಗ್ಗೆಯೂ ಕಲಿತರು, ಎಂದು ದಿ ಹಿಂದೂ ವದರಿಮಾಡಿದೆ.
ದಿ ಹಿಂದೂ ಜತೆ ಮಾತನಾಡುತ್ತಾ ಅವರು ಹೀಗೆ ಹೇಳುತ್ತಾರೆ,
"ನಮ್ಮ ಅಜ್ಜನವರು ನನಗೆ ಕಲಿಸಿರುವ ಎಲ್ಲವೂ ಅವರ ಅವಲೋಕನಗಳನ್ನು ಆಧರಿಸಿದೆ. ನಾನು ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ, ಇದರ ಹಿಂದಿರುವ ವೈಜ್ಞಾನಿಕ ಕಾರಣವನ್ನು ತಿಳಿದುಕೊಳ್ಳಲು ಪ್ರಾರಂಭಿಸಿದೆ. ಒತ್ತಡ, ಆದ್ರತೆ, ಮಳೆ ಮತ್ತು ಗಾಳಿಯ ಒಮ್ಮುಖದಂತಹ ಪರಿಕಲ್ಪನೆ ಮತ್ತು ಅವು ಮಳೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಲು ನೆರವಾದ ಇಂಟರ್‌ನೆಟ್‌ಗೆ ನಾನು ಆಭಾರಿಯಾಗಿದ್ದೇನೆ."
2011ರಲ್ಲಿ ಅವರು ಇಂಟರ್‌ನೆಟ್‌ನಲ್ಲಿ ದೇಶದ ಹವಾಮಾನ ತಜ್ಞರನ್ನೊಳಗೊಂಡ ಕಿಯಾ ವೆದರ್ ಬ್ಲಾಗ್ ಪರಿಚಯಿಸಿದರು. ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ತಜ್ಞರೊಂದಿಗೆ ಸಂವಹನ ನಡೆಸಿದರು.
ಫೇಸ್‌ಬುಕ್ ಪುಟ ಆರಂಭಿಸಿದರು
ಮೊದಲ ವಾರದಲ್ಲಿ 15 ಹಿಂಬಾಲಕರನ್ನು ಗಳಿಸಲು ಯಶಸ್ವಿಯಾದ ಕೃಷ್ಣರವರಿಗೆ ಮುಂಗಾರು ಆರಂಭವಾಗುತ್ತಿದ್ದಂತೆ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಾ ಹೋಯಿತು.
ಮುಂದುವರಿದು ಅವರು ಹೀಗೆ ಹೇಳುತ್ತಾರೆ “ಈಗ, ಹಲವಾರು ರೈತರು ಬೆಳೆಯನ್ನು ಬೆಳೆಯುವ ಮೊದಲು ನನ್ನನ್ನು ಸಂಪರ್ಕ ಮಾಡುತ್ತಾರೆ. ಯಾವುದೇ ಕಾರ್ಯಗಳಿಗೆ ದಿನಾಂಕ ನಿಗಧಿಪಡಿಸುವ ಮೊದಲು ಹವಾಮಾನ ಮುನ್ಸೂಚನೆ ಕುರಿತು ತಿಳಿದುಕೊಳ್ಳಲು ಜನರಿಗೆ ನಾನು ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ.”
ಮಾಹಿತಿಯನ್ನು ಒದಗಿಸಲು ಕೃಷ್ಣನ್‌ರವರು ತಮ್ಮ ಪುಟದಲ್ಲಿ ಪ್ರಸ್ತುತ ಹಾವಾಮಾನ ಪರಿಸ್ಥಿತಿ ಮತ್ತು ಕಾಲೋಚಿತ ಮುನ್ಸೂಚನೆಯ ಕುರಿತು ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ, ಕನಿಷ್ಠ ಮೂರು ತಿಂಗಳ ಮುನ್ಸೂಚನೆಯನ್ನು ಅವರು ನೀಡುತ್ತಾರೆ. ಅವರ ವ್ಯಾಪ್ತಿಯು, ನೀಲಗಿರಿ, ಈರೋಡ್, ಸೇಲಂ, ಕೃಷ್ಣಗಿರಿ, ಧರ್ಮಪುರಿ, ನಮಕ್ಕಲ್, ಕರುಕ್, ತಿರಿಪ್ಪೂರು ಮತ್ತು ಥೇನಿಯನ್ನು ಒಳಗೊಂಡಿದೆ.
ಕೃಷ್ಣನ್‌ರವರು ಮೂಲಗಳಿಗಾಗಿ, 'ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೊರ್ಕಾಸ್ಟಿಂಗ್ & ಗ್ಲೋಬಲ್ ಫೊರ್ಕಾಸ್ಟಿಂಗ್ ಸಿಸ್ಟಮ್' ಅನ್ನು ಅನುಸರಿಸುತ್ತಾರೆ. ಅವರ ಪ್ರಕಾರ ಈ ವ್ಯವಸ್ಥೆಯು ವಿಭಿನ್ನ ನಿಯತಾಂಕಗಳನ್ನು ನೀಡುತ್ತದೆ, ಇದು ಹವಾಮಾನ ಮುನ್ಸೂಚನೆಯನ್ನು ತಿಳಿದುಕೊಳ್ಳಲು ನೆರವಾಗುತ್ತದೆ.
ಅವರು ಹೇಳಿದ್ದನ್ನು ದಿ ಹಿಂದೂ ಹೀಗೆ ವರದಿ ಮಾಡಿದೆ
“ನಾನು 2018 ರಲ್ಲಿ ಗಜ ಚಂಡಮಾರುತದ ಮತ್ತು 2019 ರಲ್ಲಿ ಪಾಣಿ ಚಂಡಮಾರುತದ ಮುನ್ಸೂಚನೆಯನ್ನು ನೀಡಿದ್ದೆ. ನಾನು ಅದರ ಭೀತಿಯನ್ನು ತಪ್ಪಿಸಲು ಮೂರುದಿನ ಮುಂಚಿತವಾಗಿ ಅದರ ಚಲನೆಯ ಮಾಹಿತಿಯನ್ನು ನನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದೆ.”
ಅವರ ಮನೆಯ ತಾರಸಿಯಲ್ಲಿ ಅಳವಡಿಸಲಾಗಿರುವ ಹವಾಮಾನ ಸಂವೇದನಾ ಸಾಧನವನ್ನು ನಾವು ಗಮನಿಸಬಹುದು, ಅದು ಒಂದು ಕಿಮೀ ತ್ರಿಜ್ಯದ ನಿಯತಾಂಕವನ್ನು ನೀಡುತ್ತದೆ. ಅದರ ಮೂಲಕ ತಮ್ಮ ಕೊಠಡಿಯಲ್ಲಿರುವ ಮಾನಿಟರ್ನಲ್ಲಿ ಇನ್‌ಪುಟ್ ಪಡೆದುಕೊಂಡು ಹವಾಮಾನ ವರದಿ ನೀಡುತ್ತಾರೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.