ಮೃತ ಸಾಕು ಪ್ರಾಣಿಗಳ ನೆನಪಿಗಾಗಿ ಸಸಿಗಳನ್ನು ನೆಟ್ಟು, ಅವುಗಳ ನೆನಪುಗಳನ್ನು ಜೀವಂತವಾಗಿಸುವಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಯಶಸ್ವಿಯಾಗಿದ್ದಾನೆ
ಡಿಸೆಂಬರ್ 18 ರಲ್ಲಿ ಆರಂಭವಾದ ಪ್ರಮೋದ್ ಚಂದ್ರಶೇಖರ್ ಅವರ ‘ಲಾಸ್ಟ್ ರಿಪ್ಪಲ್’ , ಇಲ್ಲಿಯವರೆಗೂ ಬೆಂಗಳೂರಿನಲ್ಲಿ 15 ತೋಟಗಳನ್ನು ಹಾಗು ಸೇಲಂ ಮತ್ತು ಮುಂಬಯಿ ನಗರಗಳಲ್ಲಿ ತಲಾ ಒಂದೊಂದು ತೋಟಗಳನ್ನು ಮಾಡಿದೆ.
ಪ್ರಾಣಿ ಪ್ರೇಮಿಗಳಿಗೆ ಸಾಕು ಪ್ರಾಣಿಗಳನ್ನು ಕಳೆದುಕೊಳ್ಳುವುದು ಬಹಳ ದುಃಖಕರವಾದ ವಿಷಯ! ಅವುಗಳೂ ಕೂಡ ಪರಿವಾರದ ಒಂದು ಭಾಗವಾಗಿರುವ ಕಾರಣ, ಅವುಗಳು ಅಗಲಿದಾಗ ಆಗುವ ನೋವನ್ನು ವಿವರಿಸಲಾಗದು.
2018 ರಲ್ಲಿ ಪ್ರಮೋದ್ ತಮ್ಮ ಅಜ್ಜಿಯನ್ನು ಹಾಗೂ ಕೆಲವು ಸಂಬಂಧಿಗಳನ್ನು ಕಳೆದುಕೊಂಡು ಜರ್ಜರಿತರಾಗಿ ಈ ನೋವನ್ನು ಅನುಭವಿಸಿದರು. ತಮಗೆ ಹತ್ತಿರವಾಗಿದ್ದವರ ನೆನಪಿಗಾಗಿ ಏನನ್ನಾದರು ಮಾಡಬೇಕೆಂದು ಪ್ರಮೋದ್ ಪ್ರಯತ್ನಿಸಿದಾಗ, ಮನೆಯವರ ಪ್ರೋತ್ಸಾಹ ಸಿಗದೆ ಆ ಆಲೋಚನೆಯನ್ನು ಕೈ ಬಿಡಬೇಕಾಯಿತು.
ನಂತರ ಅವರ ಸ್ನೇಹಿತರೊಬ್ಬರು ಸಾಕು ಪ್ರಾಣಿಗಳ ಅಗಲಿಕೆಯ ನೋವಿನಲ್ಲಿರುವ ಮಾಲೀಕರಿಗಾಗಿ ಹಾಗು ಮೃತ ಪ್ರಾಣಿಗಳ ನೆನಪಿಗಾಗಿ ಏನಾದರು ಮಾಡಬಹುದೆಂಬ ಸಲಹೆ ನೀಡಿದರು.
ಹಾಗಾಗಿ ಡಿಸೆಂಬರ್ 2018 ರಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದ ಪ್ರಮೋದ್ “ಲಾಸ್ಟ್ ರಿಪ್ಪಲ್” ಎಂಬ ಹೊಸ ಪ್ರಯತ್ನವನ್ನು ಆರಂಭಿಸಿದರು. ಇಲ್ಲಿ ಸಾಕು ಪ್ರಾಣಿಗಳ ಬೂದಿಯನ್ನು ಜೈವಿಕ ಸಿಲಿಂಡರ್ ಗಳಲ್ಲಿ ಹಾಕಿ, ಅದರಲ್ಲಿ ಪುಟ್ಟ ಗಿಡವನ್ನು ನೆಟ್ಟು ನಂತರ ಈ ಗಿಡ ಪ್ರಾಣಿಗಳ ನೆನಪಾಗಿ ಬೆಳೆಯುತ್ತದೆ.
ಇಲ್ಲಿಯರೆಗೂ ಪ್ರಮೋದ್ ಒಬ್ಬಂಟಿಯಾಗಿ ಬೆಂಗಳೂರಿನಲ್ಲಿ 15 ಹಾಗೂ ಸೇಲಂ ಮತ್ತು ಮುಂಬಯಿ ನಗರಗಳಲ್ಲಿ ಒಂದೊಂದು ತೋಟಗಳನ್ನು ಮಾಡಿದ್ದಾರೆ.
ಎಡೆಕ್ಸ್ ಲೈವ್ ನೊಂದಿಗಿನ ಸಂಭಾಷಣೆಯಲ್ಲಿ ಪ್ರಮೋದ್ ತಿಳಿಸಿರುವಂತೆ,
ಬೆಂಗಳೂರಿನಲ್ಲಿ (ಬೀದಿಯಲ್ಲಿರವ ಪ್ರಾಣಿಗಳ ಹೊರತಾಗಿ) 6 ಲಕ್ಷ ಸಾಕು ಪ್ರಾಣಿಗಳಿವೆ. ಆದರೆ ಇಡೀ ನಗರಕ್ಕೆ ಇರುವುದು ಒಂದೇ ಸ್ಮಶಾನ. ಪ್ರತೀ ತಿಂಗಳು 1000 ಕ್ಕೂ ಹೆಚ್ಚು ಪ್ರಾಣಿಗಳು ಮೃತಪಟ್ಟರೆ, ಸುಮಾರು 300 ಮಾತ್ರ ದಾಖಲಾಗುತ್ತವೆ. ಬಿಬಿಎಮ್ ಪಿಯು ಇದನ್ನು ಘನ ತ್ಯಾಜ್ಯವಾಗಿ ಪರಿಗಣಿಸಿ ನಿರ್ವಹಣೆ ಮಾಡುತ್ತದೆ.
ಇದನ್ನು ಅರಿತ ಪ್ರಮೋದ್ ಪರಿಸರಸ್ನೇಹಿ ವಿಧಾನವನ್ನು ಹುಡುಕಲು ಪ್ರಾರಂಭಿಸಿದರು . ಈ ಸಮಸ್ಯೆಗೆ ಸಿಕ್ಕ ಪರಿಹಾರವೇ ಇಟಾಲಿಯನ್ ಮಾದರಿಯ ಕಾಪ್ಸುಲಾ ಮಂಡಿ ಪ್ರಾಜೆಕ್ಟ್. ಇದರ ಪ್ರಕಾರ, ಶವಪೆಟ್ಟಿಗೆಗಳ ಬದಲಾಗಿ ಜೈವಿಕವಾಗಿ ಪ್ರಾಣಿಗಳ ಬೂದಿಯನ್ನು ಶೇಖರಿಸಿ ನಂತರ ಅವುಗಳನ್ನು ಮೊಟ್ಟೆಯಾಕಾರದ ಕೊಳೆಯುವ ಚೀಲಗಳಲ್ಲಿ ಇರಿಸಲಾಗುತ್ತದೆ.
ಸಾಕು ಪ್ರಾಣಿಯ ಮರಣಾನಂತರ “ಲಾಸ್ಟ್ ರಿಪ್ಪಲ್” ತಂಡವು ಬೂದಿಯನ್ನು ಸಂಗ್ರಹಿಸಿ, ಒಂದು ಸಿಲಿಂಡರ್ ಆಕೃತಿಗೆ ಹಾಕುತ್ತಾರೆ. ನಂತರ ಅದರ ಆಮ್ಲತೆಯನ್ನು ತಟಸ್ಥಗೊಳಿಸಲು, ಮುಚ್ಚಿಗೆಯನ್ನಿರಿಸಿ, ಪೋಷಕಾಂಶ ಭರಿತ ಮಣ್ಣನ್ನು ತುಂಬಲಾಗುತ್ತದೆ.
ಆ ಚೀಲವನ್ನು ನಂತರ ಮಣ್ಣಿನಲ್ಲಿ ಹೂತು, ಗಿಡದ ಬೀಜವನ್ನು ನೆಡಲಾಗುತ್ತದೆ. ಪ್ರಾಣಿಯ ದೇಹವು ಬೆಳೆಯುವ ಮರಕ್ಕೆ ಪೋಷಕಾಂಶದ ಮೂಲವಾಗುತ್ತದೆ
ಎಂದು ವಂಡರ್ ಫುಲ್ ನ್ಯೂಸ್ ನೆಟ್ವರ್ಕ್ ವರದಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿರುವ ಬಿಬಿಎಮ್ ಪಿಯ ಎಲೆಕ್ಟ್ರಿಕ್ ಸ್ಮಶಾನಕ್ಕೆ ಭೇಟಿ ನೀಡಿದ ಪ್ರಮೋದ್- “ಅಲ್ಲಿನ ಉಸ್ತುವಾರಿಗಳು ನನ್ನ ಆಲೋಚನೆಯನ್ನು ಮೆಚ್ಚಿದರು. ಕೇವಲ ಕೆಲವು ಮಂದಿ ಬೂದಿಯನ್ನು ಮನೆಗೆ ಕೊಂಡ್ಯೊಯ್ಯುತ್ತಾರೆ, ಹೀಗೆ ಮಾಡುವುದು ನೆಚ್ಚಿನ ಸಂಗಾತಿಯೊಂದಿಗಿನ ನೆನಪನ್ನು ಜೀವಂತವಾಗಿರಿಸುವ ಒಳ್ಳೆಯ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು” ಎಂದು ವಿವರಿಸುತ್ತಾರೆ.
ತಾವು ಮಾಡುತ್ತಿರುವ ಸೇವೆಗೆ ಪ್ರಮೋದ್ ನಿರ್ದಿಷ್ಟ ಬೆಲೆಯನ್ನು ನಿಗದಿ ಪಡಿಸಿಲ್ಲ. ಬದಲಾಗಿ ಅವರಿಗೆ ಅನ್ನಿಸಿದಷ್ಟು ನೀಡಲು ಹೇಳುತ್ತಾರೆ. ಸಾಧಾರಣವಾಗಿ ಇದರ ಬೆಲೆ 3,500 ರೂಪಾಯಿ. ಸಸಿಯನ್ನು ಎಲ್ಲಿ ನೆಡಬೇಕೆನ್ನುವುದು ಗ್ರಾಹಕರ ಆಯ್ಕೆಗೆ ಬಿಟ್ಟಿದ್ದು. ಸಾರ್ವಜನಿಕ ಪಾರ್ಕ್ ಗಳಲ್ಲಿ ನೆಟ್ಟರೂ ಸಹ ,ಜಿಯೋ ಟ್ಯಾಗ್ ಮೂಲಕ ದಶಕಗಳ ನಂತರವೂ ತಮ್ಮ ಮರಗಳನ್ನು ಕಂಡುಹಿಡಿಯಬಹುದು.