ಅಂದು ಶಾಲೆ ತೊರೆದು ಭಿಕ್ಷೆ ಬೇಡುತ್ತಿದ್ದವ ಇಂದು ಎರಡು ಶಾಲೆ ಹಾಗೂ ಅನಾಥಾಲಯ ನಡೆಸುತ್ತಿದ್ದಾರೆ

ಕೊಲ್ಕತ್ತಾದ ಗಾಝಿ ಜಲಾಲುದ್ದಿನ್‌ ಹಲವಾರು ಕಾರಣಗಳಿಂದ ಶಿಕ್ಷಣದಿಂದ ವಂಚಿತರಾಗಿ ದೂರ ಉಳಿದರು, ತಮ್ಮ ಪರಿಸ್ಥಿತಿ ಬೇರೆ ಮಕ್ಕಳಿಗೆ ಬರದಿರುವಂತೆ ಎಚ್ಚರಿಕೆ ವಹಿಸುತ್ತ ತಾವೇ ಸ್ವತಃ ಶಾಲೆ ನಡೆಸುತ್ತ ನೇರವಾಗುತ್ತಿದ್ದಾರೆ.

ಅಂದು ಶಾಲೆ ತೊರೆದು ಭಿಕ್ಷೆ ಬೇಡುತ್ತಿದ್ದವ ಇಂದು ಎರಡು ಶಾಲೆ ಹಾಗೂ ಅನಾಥಾಲಯ ನಡೆಸುತ್ತಿದ್ದಾರೆ

Friday October 18, 2019,

2 min Read

ಗಾಝಿ ಜಲಾಲುದ್ದಿನ್‌ ತಮ್ಮ 7ನೇ ವಯಸ್ಸಿನಲ್ಲಿ ತಮ್ಮ ತರಗತಿಗೆ ಮೊದಲ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದಾಗ ಅವರ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ. ವ್ಯಾಸಂಗನಿರತ ವಿದ್ಯಾರ್ಥಿಯಾಗಿದ್ದ ಅವರು, ತಮ್ಮ ತಂದೆಗೆ ಈ ವಿಷಯ ತಿಳಿಸಲು ಕಾತುರರಾಗಿದ್ದರು. ವಿಷಯ ತಿಳಿದದ್ದೇ, ಗಾಝಿಯವರ ತಂದೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ತಿಳಿಯಲಿಲ್ಲ. ಇತ್ತ ತಮ್ಮ ಮಗನ ಸಾಧನೆಯಿಂದಾಗಿ ಖುಷಿ ಹಾಗೂ ಹೆಮ್ಮೆ ಮೂಡುತ್ತಿದ್ದರೆ ಅತ್ತ ತಮ್ಮ ಕಡಿಮೆ ಆದಾಯದಲ್ಲಿ ಮಗನಿಗೆ ಮುಂದಿನ ವಿದ್ಯಾಭ್ಯಾಸ ಕೊಡಿಸುವುದು ಹೇಗೆ ಎಂದು ತಂದೆಯ ಮನಸ್ಸು ಚಿಂತಿಸುತಿತ್ತು. ಮಗನ ಕನಸಿಗೆ ಸಹಕಾರಿಯಾಗಬಲ್ಲ ಸಂಪನ್ಮೂಲಗಳ ಕೊರತೆಯಿಂದಾಗಿ ಗಾಝಿಯವರನ್ನು ಎರಡನೇ ತರಗತಿಗೆ ಶಾಲೆ ಬಿಡುವಂತೆ ಅವರ ತಂದೆಯೇ ಒತ್ತಾಯಿಸಿದರು.


ಗಾಝಿ ಜಲಾಲುದ್ದಿನ್‌ (ಚಿತ್ರಕೃಪೆ : ಕೆಟ್ಟೋ)




ಆಗಲೇ ಇಡೀ ಕುಟುಂಬ ಕೊಲ್ಕತ್ತಾಗೆ ವಲಸೆ ಬಂದದ್ದು, ಅಲ್ಲಿಯೇ ಅವರ ತಂದೆ ಹೊಸ ಕೆಲಸವನ್ನೂ ಹಾಗೂ ಹೊಸ ಆದಾಯ ಮೂಲವನ್ನು ಅರಸಿದ್ದು. ದುರಾದೃಷ್ಟವಶಾತ್‌ ಗಾಝಿಯವರ ತಂದೆ ಕಾಯಿಲೆ ಬೀಳುತ್ತಾರೆ ಹಾಗೂ ಇಡೀ ಕುಟುಂಬ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತದೆ. ಸಂದರ್ಭದ ಕಠಿಣತೆಗೆ ಬಲಿಯಾದ ಗಾಝಿ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವ ಕೆಲಸಕ್ಕೆ ಇಳಿಯುತ್ತಾರೆ. ತಾವು ಕೆಟ್ಟೋದಲ್ಲಿ ನಡೆಸುತ್ತಿರುವ ಕ್ರೌಡ್‌ಫಂಡಿಂಗ್‌ ಅಭಿಯಾನದಲ್ಲಿ ಅವರು


ನಾನು ಶಾಲೆ ತೊರೆದಾಗ ನನಗೆ ಅರಿವಾದದ್ದು, ನನ್ನಂತೆಯೇ ಬಡಕುಟುಂಬದಿಂದ ಬಂದ, ಶಾಲೆಗೆ ಹೋಗಲಾಗದ ಮಕ್ಕಳು ಸಹ ಭಿಕ್ಷಾಟನೆಗೆ ಬರುತ್ತಾರೆಂಬುದು. ಇದೇ ನನಗೆ ಏನಾದರು ಮಾಡುವುದಕ್ಕಾಗಿ ಪ್ರೇರೇಪಿಸಿದ್ದು.


ತಮ್ಮ 12ನೇ ವಯಸ್ಸಿನಲ್ಲಿ ಅವರು ಕೊಲ್ಕತ್ತಾದ ಮಾರುಕಟ್ಟೆಗಳಲ್ಲಿ ರಿಕ್ಷಾ ಎಳೆಯುವವರಾಗಿ ಕೆಲಸಕ್ಕೆ ಸೇರಿದರು.


18ಕ್ಕೆ, ವಾಹನ ಚಲಾಯಿಸುವುದನ್ನು ಕಲಿತು, ಟ್ಯಾಕ್ಸಿ ಚಾಲಕರಾದರು. ನಿರುದ್ಯೋಗ ಸಮಸ್ಯೆ ಹಾಗೂ ಕಡಿಮೆ ವೇತನ ಸಮಸ್ಯೆಯನ್ನು ಸರಿಪಡಿಸಲು ಅವರು ಸುಂದರ್‌ಬನ್‌ ಡ್ರೈವಿಂಗ್‌ ಸಮಿತಿಯನ್ನು ಆರಂಭಿಸಿ ಯುವಕರಿಗೆ ವಾಹನ ಚಲನೆ ಮಾಡುವುದ್ನು ಕಲಿಸಿದರು.


ತಮ್ಮ ಟ್ಯಾಕ್ಸಿ ಜೊತೆಗೆ ಗಾಝಿ ಜಲಾಲುದ್ದಿನ್‌ (ಚಿತ್ರಕೃಪೆ : ಕೆಟ್ಟೋ)




ಯಾವ ಮಕ್ಕಳೂ ತಮ್ಮಂತೆ ಶಿಕ್ಷಣದಿಂದ ವಂಚಿತರಾಗಿ ದೂರ ಉಳಿಯಬಾರದೆಂಬ ಕಾರಣಕ್ಕೆ 1988ರಲ್ಲಿ, ತಮ್ಮ ಪತ್ನಿ ತಸ್ಲೀಮಾರೊಂದಿಗೆ ಸೇರಿ ತಮ್ಮದೇ ಆದ ಮೊದಲ ಶಾಲೆಯನ್ನು ತೆರೆದರು. ಆ ಶಾಲೆ ನಡೆಯುತ್ತಿದ್ದದ್ದು ಗಾಝೀ ತಮಗಾಗಿ ಖರೀದಿಸಿದ ಎರಡು ಕೋಣೆಯ ಮನೆಯಲ್ಲಿ. 2009ರಹೊತ್ತಿಗೆ, ಹಲವು ಜನರು ಮಾಡಿದ ಸಹಾಯದಿಂದ ಸುಂದರ್‌ ಶಿಕ್ಷಯಾತನ್‌ ಮಿಷನ್ ಎಂಬ ಎರಡನೇ ಶಾಲೆಯನ್ನು ತೆರೆದರು. ಆರಂಭದಲ್ಲಿ ಈ ಶಾಲೆಯು ಇಬ್ಬರು ಶಿಕ್ಷಕರು ಹಾಗೂ 22 ಮಕ್ಕಳನ್ನು ಒಳಗೊಂಡಿತ್ತು. ಈಗ, 486 ಮಕ್ಕಳು ಹಾಗೂ 26 ಶಿಕ್ಷಕರು ಈ ಶಾಲೆಯಲ್ಲಿದ್ದಾರೆ.


64ರ ವಯಸ್ಸಿನ ಗಾಝಿ, ಎರಡು ಶಾಲೆಗಳನ್ನು ಹಾಗೂ ಒಂದು ಅನಾಥಾಲಯವನ್ನು ನಡೆಸುತ್ತಿದ್ದಾರೆ ಹಾಗೂ ಮತ್ತಷ್ಟು ಜನರಿಗೆ ಸಹಾಯ ಮಾಡಲು ಉತ್ಸುಕರಾಗಿದ್ದಾರೆ. ಯಾರೂ ಸಹ, ಬಡವರಾಗಿದ್ದರೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ನಂಬಿರುವ ಅವರು, ಯಾವುದೇ ಅಪರಾದದ ಮೂಲ ಹಾಗೂ ಅಭಿವೃದ್ಧಿಯಿಂದ ವಂಚಿತರಾಗುವುದರ ಮೂಲ ಬೇರು ಅಸಾಕ್ಷರತೆ ಎಂದಿದ್ದಾರೆ. ಅವರು ತಮ್ಮ ಶಾಲೆಯಲ್ಲಿ, ಬಡ ಮಕ್ಕಳಿಗೆ ಸಹಾಯವಾಗಲೆಂದು ಮದ್ಯಾಹ್ನದ ಬಿಸಿಯೂಟವನ್ನು ಆರಂಭಿಸಿದ್ದಾರೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.