ಹಳೆಯ ಬೆಡ್‌ಶೀಟ್ ಮೂಲಕ ಬಟ್ಟೆಯ ಚೀಲಗಳನ್ನು ತಯಾರಿಸಿ ವಿತರಿಸುತ್ತಿರುವ ಚೆನ್ನೈನ ಈ ಸಹೋದರರು
ಜೈ ಅಸ್ವಾನಿ ಮತ್ತು ಪ್ರೀತ್ ಅಸ್ವಾನಿ ಬೆಡ್‌ಶೀಟ್ ಮೂಲಕ ಬಟ್ಟೆ ಚೀಲಗಳನ್ನು ತಯಾರಿಸಿ ಮಾರಾಟಗಾರರಿಗೆ ವಿತರಿಸುತ್ತಿದ್ದಾರೆ.
ಸಹಾಯ ಮಾಡುವ ಮನಸ್ಸಿದ್ದರೆ ಸಾಕು ಅದಕ್ಕೆ ಯಾವುದೇ ವಯಸ್ಸಿನ ಭೇದವಿಲ್ಲ. ಮಾಡುವ ಹುಮ್ಮಸ್ಸು ಮತ್ತು ಸರಿಯಾದ ಯೋಜನೆಯಿರಬೇಕು.
ಇಂದು ಪ್ಲಾಸ್ಟಿಕ್ ತ್ಯಾಜ್ಯವು ಎಲ್ಲೆಡೆ ಹೆಚ್ಚುತ್ತಿದೆ. ಭಾರತದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರಿದ್ದರೂ ಕೂಡ ಇನ್ನೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ವರದಿಯೊಂದರ ಪ್ರಕಾರ ಭಾರತ ದೇಶದಲ್ಲಿ ಪ್ರತಿದಿನ ಸುಮಾರು 26,000 ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ.
2019ರಲ್ಲಿ ತಮಿಳನಾಡಿನಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ನ್ನು ನಿಷೇಧಿಸಲಾಯಿತು. ಆಗ ಚೆನ್ನೈನ ಈ ಇಬ್ಬರೂ ಸಹೋದರರು ಮಾರಾಟಗಾರರಿಗೆ ಬೆಡ್‌ಶೀಟ್ ಮೂಲಕ ತಯಾರಿಸಿದ ಬಟ್ಟೆ ಚೀಲಗಳನ್ನು ವಿತರಿಸುವಂತಹ ವಿಶಿಷ್ಟ ಕಾರ್ಯಕ್ರಮ ಕೈಗೊಂಡರು.
ಸಿಂಧಿ ಮಾಡೆಲ್ ಶಾಲೆಯ ಜೈ ಅಸ್ವಾನಿ (17) ಮತ್ತು ಪ್ರೀತ್ ಅಸ್ವಾನಿ(13) ಈ ಇಬ್ಬರೂ ಇತರೆ ವಿದ್ಯಾರ್ಥಿಗಳಂತೆ ಅಲ್ಲದೆ, ವಿಭಿನ್ನವಾಗಿದ್ದಾರೆ. ಪರಿಸರ ರಕ್ಷಣೆ ಮಾಡುವಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ.
ಎನ್‌ಡಿಟಿವಿಯೊಂದಿಗಿನ ಸಂದರ್ಶನವೊಂದರಲ್ಲಿ ಜೈ ಅಸ್ವಾನಿ,
"ಕೊಳೆಯಲು ಸಾವಿರಾರು ವರ್ಷಗಳನ್ನು ತೆಗೆದುಕೊಳ್ಳುವ ವಸ್ತುವಿನಲ್ಲಿ ಪ್ಲಾಸ್ಟಿಕ್ ಕೂಡ ಒಂದು. ಪ್ರತಿಯೊಬ್ಬ ವ್ಯಕ್ತಿಯು ಎಷ್ಟೊಂದು ಪ್ರಮಾಣದ ಪ್ಲಾಸ್ಟಿಕ್‌ನ್ನು ಬಳಸುತ್ತಿದ್ದಾನೆ ಮತ್ತು ಆ ಪ್ಲಾಸ್ಟಿಕ್ ಕಣ್ಮರೆಯಾಗಲು ಎಷ್ಟೊಂದು ವರ್ಷ ತೆಗೆದುಕೊಳ್ಳುತ್ತದೆ. ಇಂತಹ ಸನ್ನಿವೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮೇಲಿನ ನಿಷೇಧವನ್ನು ನಾನು ಸ್ವಾಗತಿಸುತ್ತೆನೆ. ಜನರು ಬಟ್ಟೆ-ಚೀಲಗಳನ್ನು ಖರೀದಿಸಲು ಶಕ್ತರಾಗಿರುತ್ತಾರೆ. ಆದರೆ ಸಣ್ಣ ಮಾರಾಟಗಾರರಿಗೆ ಸಾಧ್ಯವಿಲ್ಲ. ಆದ್ದರಿಂದ ನಾನು, ನನ್ನ ಸಹೋದರ ಬೆಡ್‌ಶೀಟ್ ಮೂಲಕ ತಯಾರಿಸಿದ ಬಟ್ಟೆ ಚೀಲಗಳನ್ನು ವಿತರಿಸುವ ಯೋಜನೆಯನ್ನು ಕೈಗೊಂಡೆವು," ಎಂದೆನ್ನುತ್ತಾರೆ.
ಈ ಯೋಜನೆಗೆ ಸ್ಪೂರ್ತಿ
ಈ ಆಲೋಚನೆ ಇವರಿಬ್ಬರಿಗೂ ಹೊಳೆದದ್ದು 2018 ರಲ್ಲಿ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಭೇಟಿ ನೀಡಿದಾಗ. ಅಲ್ಲಿ ಮಾನಸಿಕ ತೊಂದರೆಯಿರುವ ಮಹಿಳೆಯರನ್ನು ಭೇಟಿಯಾದರು. ಅವರು ಬಟ್ಟೆಯ ಚೀಲಗಳನ್ನು ಹೊಲಿಯುವಲ್ಲಿ ಪರಿಣಿತರಾಗಿದ್ದರು.
"ವೃದ್ಧಾಶ್ರಮಗಳಿಗೆ ಅಕ್ಕಿ ವಿತರಿಸುವಾಗ, ಬಟ್ಟೆಯ ಚೀಲಗಳ ಕಲ್ಪನೆ ಜೈ ಮನಸ್ಸಿನಲ್ಲಿ ಮೂಡಿತು. ಅಲ್ಲಿ ವಯಸ್ಸಾದ ಮಹಿಳೆಯೊಬ್ಬರು ಅವನ ಕೈಯನ್ನು ಹಿಡಿದು ಯಾರೂ ನಮ್ಮ ಬಗ್ಗ ಯೋಚಿಸುವುದಿಲ್ಲ. ಆದರೆ ನೀವು ಯೋಚಿಸುತ್ತಿದ್ದೀರಿ ಎಂದು ಹೇಳಿದರು," ಎಂದು, ಜೈ ಮತ್ತು ಪ್ರೀತ್ ಅವರ ತಾಯಿ ವರ್ಷಾರವರು ಲಾಜಿಕಲ್ ಇಂಡಿಯನ್‌ಗೆ ತಿಳಿಸಿದ್ದಾರೆ.
ಈ ಯೋಜನೆ ಬಂದ ನಂತರ, ಜೈ ಮತ್ತು ಪ್ರೀತ್ ಕಡಿಮೆ ಬೆಲೆಗೆ ಸಿಗುವ ಬಟ್ಟೆಯನ್ನು ಹುಡುಕಲು ಪ್ರಾರಂಭಿಸಿದರು. ಆಗ ಶಿಕ್ಷಕರು, ಪೋಷಕರಿಂದ ಅಭಿಪ್ರಾಯ ತೆಗೆದುಕೊಂಡು, ಹೋಟೆಲ್‌ಗಳಿಂದ ಹಳೆಯ ಬೆಡ್‌ಶೀಟ್‌ಗಳನ್ನು ಬಳಸಿಕೊಂಡು ಬಟ್ಟೆಯ ಚೀಲಗಳನ್ನಾಗಿ ಪರಿವರ್ತಿಸಲು ನಿರ್ಧರಿಸಿದರು. ಒಂದು ಬೆಡ್‌ಶೀಟ್‌ನಿಂದ 20 ಬಟ್ಟೆ ಚೀಲಗಳನ್ನು ತಯಾರಿಸಬಹುದು.
ಭವಿಷ್ಯದ ಯೋಜನೆ
"2020ರಲ್ಲಿ ನಮ್ಮ ಎನ್‌ಜಿಓ ಆದ ‘ಬಾರ್ನ್ ಟು ವಿನ್’ಗೆ ಎಲೆಕ್ಟ್ರಿಕ್ ಟ್ರಕ್‌ಗಳನ್ನು ಪಡೆಯುವುದಾದರೆ ಅದರಿಂದ ವಿವಿಧ ಕಾಲೇಜು, ವಸತಿ ಸಂಕೀರ್ಣಗಳಲ್ಲಿ ಬೆಡ್‌ಶೀಟ್‌ಗಳನ್ನು ಸಂಗ್ರಹಿಸಬಹುದು. ಅಲ್ಲದೆ, ನಾವು ನಮ್ಮ ಉಪಕ್ರಮವನ್ನು ವಿಸ್ತರಿಸುವ ಹಂಬಲವಿದೆ. ನಾವು ನಮ್ಮ ರಾಜ್ಯದ ಜನರಿಗೆ ಮಾತ್ರ ಸಹಾಯ ಮಾಡುತ್ತಿದ್ದೇವೆ. ದೇಶದ ಹೆಚ್ಚಿನ ಮಾರಾಟಗಾರರಿಗೆ ಮತ್ತು ಸುಸ್ಥಿರ ಆದಾಯವನ್ನು ಒದಗಿಸಲು ಬಟ್ಟೆಯ ಚೀಲಗಳನ್ನು ವಿತರಿಸಲು, ಇದು ರಾಷ್ಟ್ರೀಯವಾಗಿ ದೇಶದ ಎಲ್ಲರನ್ನು ತಲುಪಬೇಕೆಂಬುದು ನನ್ನ ಕನಸಾಗಿದೆ," ಎಂದು ಜೈ ಲಾಜಿಕಲ್ ಇಂಡಿಯನ್‌ಗೆ ತಿಳಿಸಿದ್ದಾರೆ.
ಪ್ರಸ್ತುತ ಬಾರ್ನ್ ಟು ವಿನ್ ಹೆಚ್ಚಿನ ಬಟ್ಟೆ ಚೀಲಗಳನ್ನು ತಯಾರಿಸಲು ತಮಿಳುನಾಡು ಬ್ಲೈಂಡ್ ಅಸೋಸಿಯೇಶನ್‌ನೊಂದಿಗೆ ಸಹಯೋಗಿಸಲು ಯೋಜಿಸಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.