ನೀರು ಕುಡಿಯಿರಿ ಎಂದು ಮಕ್ಕಳಿಗೆ ಎಚ್ಚರಿಸುವ ‘ವಾಟರ್‌ ಬೆಲ್‌ʼ

ಕರ್ನಾಟಕದ, ದ.ಕ ಜಿಲ್ಲೆಯ ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಯಲ್ಲಿ ದಿನನಿತ್ಯದ ತರಗತಿಗಳ ಬೆಲ್‌ನೊಂದಿಗೆ, ನೀರು ಕುಡಿಯಲು ಮಕ್ಕಳಿಗೆ ಎಚ್ಚರಿಸಲು ದಿನಕ್ಕೆ ಮೂರು ಬಾರಿ ಬೆಲ್‌ ಮಾಡಲಾಗುತ್ತದೆ.

ನೀರು ಕುಡಿಯಿರಿ ಎಂದು ಮಕ್ಕಳಿಗೆ ಎಚ್ಚರಿಸುವ ‘ವಾಟರ್‌ ಬೆಲ್‌ʼ

Wednesday November 13, 2019,

2 min Read

ನಮ್ಮ ಭೂಮಿ ಹೇಗೆ 71 ಪ್ರತಿಶತ ನೀರಿನಿಂದ ಕೂಡಿದೆಯೋ ಹಾಗೆಯೇ ನಮ್ಮ ದೇಹವೂ ಸಹ 60 ಪ್ರತಿಶತ ನೀರಿನಿಂದ ಕೂಡಿದೆ. ಜಲವೆಂಬುದು ಸಕಲಜೀವಿಗಳಿಗೂ ಜೀವಾಮೃತ. ನೀರಿಲ್ಲದೆ ಮನುಷ್ಯ ಬದುಕಲಾರ, ಕಡಿಮೆ ನೀರಿನ ಸೇವನೆಯೂ ಅಪಾಯಕಾರಿಯೇ. ಕಡಿಮೆ ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲಾಗುತ್ತವೆ, ನಿರ್ಜಲೀಕರಣದಿಂದ ಹೊಟ್ಟೆ ಕೆಡುತ್ತದೆ., ಒಟ್ಟಾರೆ ಸಂಪೂರ್ಣ ಆರೋಗ್ಯವೇ ನೀರಿನ ಮೇಲೆ ನಿಂತಿದೆ ಅಂದರೆ ತಪ್ಪಾಗಲಾರದು.


ಇತ್ತೀಚಿನ ಜೀವನಶೈಲಿಯೋ? ಆರೋಗ್ಯ ಕೆಡಿಸುವುದರಲ್ಲಿ ಅದರ ಪಾತ್ರವೇ ಹೆಚ್ಚು. ಸಾಫ್ಟ್ವೇರ್‌, ಮಶೀನ್‌ ಲರ್ನಿಂಗ್‌, ಕೃತಕಬುದ್ಧಿಮತ್ತೆಯಂತಹ ಹೊಸ ಹೊಸ ತಂತ್ರಜ್ಞಾನದ ಯುಗದಲ್ಲಿ ನೀರು ಕುಡಿಯರಿ ಅಂತ ನಮ್ಮನ್ನು ಎಚ್ಚರಿಸಲು ಆಪ್‌ಗಳೂ ಬಂದಿವೆ! ದಿನವಿಡೀ ಏರ್‌ ಕೂಲರ್‌ನಲ್ಲೇ ಜೀವಿಸುವ ನಮಗೆ ನೀರು ಕುಡಿಯಿರಯ್ಯ ಅಂತ ನಮ್ಮ ಗಂಟಲು ನಮ್ಮನ್ನು ಎಚ್ಚರಿಸುವ ಬದಲು ಅದನ್ನೂ ಮೊಬೈಲ್‌ ಆಪ್‌ಗಳು ಎಚ್ಚರಿಸುವಂತಾಗಿರೋದು ಈ ಶತಮಾನದ ದುರಂತವೇ ಸರಿ.


ಇದು ಹೊರಗಿನ ಪ್ರಪಂಚದ್ದಾದರೆ, ಪೋಷಕರ ಬುದ್ಧಿ ಮಕ್ಕಳಿಗೂ ಬಂದಿರಲಿಕ್ಕೂ ಸಾಕು, ಅವರೂ ಸಹ ಬೆಳಗ್ಗೆ ಶಾಲೆಗೆ ತೆಗೆದುಕೊಂಡು ಹೋದ ನೀರಿನ ಬಾಟಲಿ ಸಂಜೆ ಹಿಂತಿರುಗಿ ಬಂದಾಗ ಅರ್ಧವೂ ಖಾಲಿಯಾಗಿರುವುದಿಲ್ಲ. ಇದನ್ನು ಪೋಷಕರು ಶಾಲಾ ಮಂಡಳಿಗೆ ತಿಳಿಸಿರುತ್ತಾರೆ, ಅವರು ತಾನೇ ಏನು ಮಾಡಲು ಸಾಧ್ಯ? ತರಗತಿ ಶಿಕ್ಷಕರಿಗೆ ನೀರು ಕುಡಿಯಲು ಮಕ್ಕಳಿಗೆ ಹೇಳುವಂತೆ ತಿಳಿಸುತ್ತಾರೆ ಅಷ್ಟೆ.

ನೀರು ಕುಡಿಯುವಂತೆ ಎಚ್ಚರಿಸಲು ವಾಟರ್‌ ಬೆಲ್!

ವಾಟರ್‌ ಬೆಲ್‌ ಹೊಡೆದೊಡನೆ ನೀರು ಕುಡಿಯುತ್ತಿರುವ ವಿದ್ಯಾರ್ಥಿಗಳು (ಚಿತ್ರಕೃಪೆ : ಪ್ರಜಾವಾಣಿ )




ಆದರೆ ಇಲ್ಲೊಂದು ಶಾಲೆಯಲ್ಲಿ ದಿನನಿತ್ಯದ ತರಗತಿಗಳ ಬೆಲ್‌ನೊಂದಿಗೆ, ನೀರು ಕುಡಿಯಲು ಮಕ್ಕಳಿಗೆ ಎಚ್ಚರಿಸಲು ದಿನಕ್ಕೆ ಮೂರು ಬಾರಿ ಬೆಲ್‌ ಮಾಡಲಾಗುತ್ತದೆ! ಈ ವಿನೂತನ ಪ್ರಯೋಗ ನಡೆಯುತ್ತಿರೋದು ನಮ್ಮದೇ ಕರ್ನಾಟಕದ, ದ.ಕ ಜಿಲ್ಲೆಯ ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಯಲ್ಲಿ.


ಮಕ್ಕಳಿಗೆ ಅಗತ್ಯದಷ್ಟು ನೀರು ಕುಡಿಯುವಂತೆ ಎಚ್ಚರಿಸಲು ಈ ಪ್ರಯೋಗ ನಡೆಸುತ್ತಿರುವ ಈ ಶಿಕ್ಷಣ ಸಂಸ್ಥೆಯ ಸಂಚಾಲಕ ಶ್ರೀ ಯು.ಎಸ್‌.ಏ ನಾಯಕ್‌ ಮಾಧ್ಯಮಗಳೊಂದಿಗೆ ಮಾತನಾಡುತ್ತ,


“ಹಲವು ಪೋಷಕರು ‘ನಮ್ಮ ಮಕ್ಕಳು ಬೆಳಗ್ಗೆ ಬಾಟಲಿಯಲ್ಲಿ ತುಂಬಿದ ನೀರನ್ನು ಕುಡಿಯದೆ ಹಾಗೆಯೇ ವಾಪಸ್‌ ತರ್ತಾರೆ’ ಇನ್ನು ಕೆಲವರು ‘ನೀರು ಯಾಕೆ ಕುಡೀಲಿಲ್ಲ ಅಂದ್ರೆ, ಟೈಮೇ ಇರ್ಲಿಲ್ಲ’ ಇಲ್ಲವೇ ‘ಶಾಲೆಯಲ್ಲೇ ನೀರಿನ ವ್ಯವಸ್ಥೆ ಇದೆ ಅದನ್ನೆ ಕುಡಿದೆ ಅಂತ ಸುಳ್ಳು ಹೇಳ್ತಾರೆ’ ಎಂದು ದೂರಿರುವ ಹಿನ್ನೆಲೆಯಲ್ಲಿ ಶಾಲೆಯ ಅವಧಿಯಲ್ಲಿ ಒಟ್ಟು ಮೂರು ಬಾರಿ ನೀರು ಕುಡಿಯುವ ಉದ್ದೇಶದಿಂದಲೇ ವಾಟರ್‌ ಬೆಲ್‌ ಎಂಬ ಯೋಜನೆಯನ್ನು ಪಠ್ಯದ ನಡುವೆ ಜೋಡಿಸಲಾಗಿದೆ. ಈ ಅವಧಿಯಲ್ಲಿ ಮಕ್ಕಳು ನೀರು ಕುಡಿಯಲು ಅವಕಾಶ ಕಲ್ಪಿಸಲಾಗಿದೆ,” ಎಂದರು.


ಮುಂದುವರೆದು ಅವರು ಮಕ್ಕಳು ಆರೋಗ್ಯವಾಗಿದ್ದಷ್ಟು ಕಲಿಕೆಯಲ್ಲಿ ಆಸಕ್ತರಾಗಿರುತ್ತಾರೆ ಹಾಗೂ ಅವರು ಮುಕ್ತ ಮನಸ್ಸಿನಿಂದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ತಿಳಿಸುತ್ತಾ,


“ವಿದ್ಯಾರ್ಥಿಗಳು ನೈಜ ಅನುಭವ, ಸದೃಢ ಮನಸ್ಸು ಹಾಗೂ ಸುಸ್ಥಿರ ಶರೀರದೊಂದಿಗೆ ಕಲಿಕಾ ಚಟುವಟಿಕೆಗಳಲ್ಲಿ ಮುಕ್ತ ಮನದಿಂದ ತೊಡಗಿಕೊಳ್ಳಬೇಕೆಂಬುದು ಸಂಸ್ಥೆಯ ಈ ವಿನೂತನ ಯೋಜನೆಯ ಆಶಯವಾಗಿದೆ,” ಎಂದರು.

ನೀರು ಕುಡಿದರೆ ಖಾಯಿಲೆ ದೂರ

ನೀರನ್ನು ಯಥೇಚ್ಚವಾಗಿ ಸೇವಿಸುವುದರಿಂದ ನಮ್ಮ ದೇಹ ಶುಚಿಯಾಗುತ್ತದೆ, ಚರ್ಮ ಕಾಂತಿಯುತವಾಗುತ್ತದೆ, ರಕ್ತದೊತ್ತಡ, ಮಲಬದ್ಧತೆ, ಗ್ಯಾಸ್ಟ್ರಿಕ್ ಮತ್ತು ಮಧುಮೇಹದಂತಹ ಚಿಕಿತ್ಸೆಗಳು ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಮೂತ್ರಪಿಂಡದಲ್ಲಿನ ಕಲ್ಲನ್ನು ತಗೆಸಿಕೊಳ್ಳಲು ಶಸ್ತ್ರಚಿಕಿತ್ಸೆಯ ಮೊರೆಹೋಗುವ ಮುನ್ನ ವೈದ್ಯರೇ ಹೆಚ್ಚು ನೀರು ಸೇವಿಸಿ ಎಂದು ಹೇಳುತ್ತಾರೆ. ಎಷ್ಟೋ ಪ್ರಕರಣಗಳಲ್ಲಿ ಕಿಡ್ನಿನೋವೆಂದು ಬಂದವರು, ನೀರು ಕುಡಿದು ಕುಡಿದು ಕಿಡ್ನಿಯಲ್ಲಿನ ಕಲ್ಲು ಮಾಯವಾಗಿರುವುದು ಕಂಡುಬರುತ್ತದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.