ನವಜಾತ ಶಿಶುಗಳನ್ನು ಬದುಕಿಸಿದ ಝೀರೋ ಟ್ರಾಫಿಕ್ ಮತ್ತು ಆಂಬುಲೆನ್ಸ್ ಚಾಲಕನ ಸಾಹಸ ಗಾಥೆ
ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 40 ದಿನಗಳ ಹಸುಗೂಸು ಸೈಫುಲ್ ಹಾಗೂ ಶಿವಮೊಗ್ಗದ 10 ದಿನದ ಹೆಣ್ಣು ಶಿಶುವನ್ನು ಅತ್ಯಂತ ವೇಗವಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ ಆಂಬುಲೆನ್ಸ್ ನಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಯಶಸ್ವಿಯಾಗಿ ದಾಖಲಿಸಲಾಗಿದೆ.
ದಿನನಿತ್ಯದ ಜೀವನದಲ್ಲಿ ಕೆಲವೊಂದು ಮಾನವೀಯತೆಗೆ ಸಾಕ್ಷಿಯಾಗುವ ಘಟನೆಗಳು ಜರುಗುತ್ತಿರುತ್ತವೆ. ಈ ಘಟನೆಗಳು ಜನ ಸಾಮಾನ್ಯರ ಬದುಕಿಗೆ ಲವಲವಿಕೆಯನ್ನು ತಂದು ಕೊಡುತ್ತದೆ.
ಇಂತಹ ಘಟನೆಗಳಿಗೆ ಕಳೆದ ಒಂದು ವಾರದಿಂದ ಸಾಕ್ಷಿಯಾಗುತ್ತಿದೆ ನಮ್ಮ ರಾಜ್ಯ ಕರ್ನಾಟಕ.
ಮೊನ್ನೆಯಷ್ಟೇ ಅಂದ್ರೆ ಫೆಬ್ರುವರಿ 6 ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 40 ದಿನಗಳ ಹಸುಗೂಸು ಸೈಫುಲ್ ಅಜ್ಮಾನ್ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿತ್ತಾರೆ.
ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅಜ್ಮಾನ್‌ಗೆ ಮಂಗಳೂರಿನಿಂದ ಬೆಂಗಳೂರಿಗೆ ಅತ್ಯಂತ ಶೀಘ್ರದಲ್ಲೇ ತಲುಪುವ ಅನಿವಾರ್ಯತೆ ಎದುರಾದಾಗ ಆಂಬ್ಯುಲೆನ್ಸ್ ಚಾಲಕರಾದ ಮೊಹಮ್ಮದ್ ಹನೀಫ್ 380 ಕಿ.ಮೀ ದೂರವನ್ನು (ಮಂಗಳೂರಿನಿಂದ ಬೆಂಗಳೂರಿಗೆ) 270 ನಿಮಿಷಗಳಲ್ಲಿ ಅಂದರೆ ಸುಮಾರು 4 ಗಂಟೆ 30 ನಿಮಿಷಗಳ ಅವಧಿಯಲ್ಲಿ ಕ್ರಮಿಸಿ ಜಯದೇವ ಆಸ್ಪತ್ರೆಯನ್ನು ತಲುಪಿದರು, ವರದಿ ಡೆಕ್ಕನ್ ಹೆರಾಲ್ಡ್.
ಆಂಬುಲೆನ್ಸ್ ಅನ್ನು ಪೊಲೀಸರ ಸಹಾಯದಿಂದ ಝೀರೋ ಟ್ರಾಫಿಕ್ ನಲ್ಲಿ ಅತ್ಯಂತ ಶೀಘ್ರದಲ್ಲೇ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿಸಿದ ಡ್ರೈವರ್ ಮೊಹಮ್ಮದ್ ಹನೀಫ್ ಅವರ ಚಾಲನಾ ಕೌಶಲ್ಯ ಮತ್ತು ಸಮಯ ಪಾಲನೆಗೆ ಜನಸಾಮಾನ್ಯರಿಂದ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದೆ ರೀತಿಯ ಇನ್ನೊಂದು ಘಟನೆಗೆ ಸಾಕ್ಷಿಯಾಗಿದೆ ನಮ್ಮ ರಾಜ್ಯ. ಶಿವಮೊಗ್ಗದ ಮ್ಯಾಕ್ ಗಾನ್ ಆಸ್ಪತ್ರೆಯಲ್ಲಿ ಕಳೆದ ಜನವರಿ 31 ರಂದು ದಾವಣಗೆರೆಯ ಹೊನ್ನಳ್ಳಿ ತಾಲೂಕಿನ ಸುಧಾ ಹಾಗೂ ಸ್ವಾಮಿ ಅವರ 10 ದಿನದ ಶಿಶುವು ಹೃದಯಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಆ ಮಗುವನ್ನು ನಿನ್ನೆ ಫೆಬ್ರುವರಿ 10 ರಂದು ಝೀರೋ ಟ್ರಾಫಿಕ್ ನಲ್ಲಿ ಕೇವಲ 3 (302 ಕಿಮೀ) ಗಂಟೆಯಲ್ಲಿ ಶಿವಮೊಗ್ಗದಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಆಂಬುಲೆನ್ಸ್ ಚಾಲಕ ಸದ್ದಾಮ್ ಹುಸೇನ್ ಅವರು ತಲುಪಿಸಿದ್ದಾರೆ, ವರದಿ ದ ಹಿಂದೂ.
ಪ್ರಸ್ತುತ 2 ಶಿಶುಗಳು ಪರಿಣಿತ ವೈದ್ಯರ ತಂಡದಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿವೆ.
ಈ ಎರಡು ಘಟನೆಗಳು ನಮ್ಮ ಸಮಾಜದಲ್ಲಿ ಮಾನವೀಯ ಪ್ರಜ್ಞೆ ಇನ್ನೂ ಜಾಗೃತವಾಗಿರುವುದನ್ನು ತೋರಿಸುತ್ತದೆ. ಸದಾ ಟ್ರಾಫಿಕ್‌ನಿಂದ ಗಿಜಿಗುಡುವ ರಸ್ತೆಗಳು ಪುಟ್ಟ ಕಂದಮ್ಮಗಳ ಉತ್ತಮ ಆರೋಗ್ಯಕ್ಕಾಗಿ ಕೆಲವು ಗಂಟೆಗಳಷ್ಟು ಸ್ತಬ್ಧ ಗೊಂಡವು, ರಾಜ್ಯದ ಪೊಲೀಸ್ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಚಾಲಕರು ತೋರಿದ ಸಮಯಪ್ರಜ್ಞೆ ನಿಜಕ್ಕೂ ಶ್ಲಾಘನೀಯ.