ಕನ್ನಡ ಶಾಲೆಗಳಿಗೆ "ಶ್ರೀನಿವಾಸ"ಕೃಪೆ..!
ಟೀಮ್ ವೈ.ಎಸ್. ಕನ್ನಡ
ಇಂಗ್ಲಿಷ್ ಶಾಲೆಗಳ ಪಾರಮ್ಯದಲ್ಲಿ ಕನ್ನಡ ಶಾಲೆಗಳು ತನ್ನ ನೆಲದಲ್ಲೇ ಅಂತಃಸತ್ವ ಕಳೆದುಕೊಳ್ಳುತ್ತಿವೆ. ಕನ್ನಡಕ್ಕೆ ದೊಡ್ಡ ಗಂಡಾಂತರ ಎದುರಾಗಿದೆ ಎಂದು ಬರೀ ಬಾಯಲ್ಲಿ ಹೇಳದೇ ಕೆಲಸದ ಮೂಲಕ ಸಾಧಿಸಬೇಕೆಂಬ ಪ್ರಯತ್ನದಲ್ಲಿ ಇದ್ದಾರೆ ಕನ್ನಡ ಪರ ಹೋರಾಟಗಾರ ವೀರ ಪುತ್ರ ಶ್ರೀನಿವಾಸ. ಕನ್ನಡ ಶಾಲೆಗಳ ಅಭಿವೃದ್ಧಿಗೆಂದು ಅವರು ಗಡಿಯಂಚಿನ ಶಾಲೆಗಳ ದತ್ತು ತೆಗೆದುಕೊಳ್ಳುತ್ತಿದ್ದಾರೆ. ಈ ಅಭಿಯಾನದ ಮೂಲಕ ಶಾಲೆಗಳ ಮೂಲ ಸೌಕರ್ಯಗಳು, ಕಂಪ್ಯೂಟರ್ ಶಿಕ್ಷಣ, ಒಟ್ಟಾರೆ ಶೈಕ್ಷಣಿಕ ಬೆಳವಣಿಗೆಯ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾ ಕನ್ನಡ ಶಾಲೆಗಳ ಉಳಿವಿಗೆ ಶ್ರೀನಿವಾಸ್ ಶ್ರಮಿಸುತ್ತಿದ್ದಾರೆ.
ಕೋಲಾರ ಸೀಮೆಯ ವೀರಕಪುತ್ರ ಎನ್ನುವ ಕುಗ್ರಾಮದಲ್ಲಿ ಹುಟ್ಟಿದ ಶ್ರೀನಿವಾಸ ಅವರು ಓದಿದ್ದೂ ಸರ್ಕಾರಿ ಕನ್ನಡ ಶಾಲೆಯಲ್ಲೇ. ಬೆಂಗಳೂರಿನಲ್ಲಿ ಸಣ್ಣ ಉದ್ಯಮದಲ್ಲಿ ತೊಡಗಿಕೊಂಡ ಶ್ರೀನಿವಾಸ್ಗೆ ತಮ್ಮ ಊರಿನ ಗಡಿಭಾಗದ ಕನ್ನಡ ಶಾಲೆಗಳು, ಅವುಗಳ ದುಃಸ್ಥಿತಿ ಬಗ್ಗೆ ಅರಿವಿತ್ತು. ಕನ್ನಡ ಶಾಲೆಗಳ ಭವಿಷ್ಯ ಮತ್ತು ಮುಂದಿನ ಪೀಳಿಗೆಗಳ ಕುರಿತು ಯೋಚಿಸುವಂತೆ ಪ್ರೇರೇಪಣೆ ನೀಡಿದ್ದವು. ಇದನ್ನೇ ಯೋಚನೆ ಮಾಡುತ್ತಾ ಕನ್ನಡ ಶಾಲೆಗಳ ಅಭಿವೃದ್ಧಿಗೆ ಏನಾದ್ರೂ ಮಾಡಬೇಕು ಅನ್ನುವ ಪಣತೊಟ್ರು.
ಕನ್ನಡ ಶಾಲೆ ಉಳಿದರೆ ಮಾತ್ರ ಕನ್ನಡ ಉಳಿದೀತು ಎನ್ನುವ ನಿಲುವಿನೊಂದಿಗೆ ಶಾಲೆಗಳನ್ನು ದತ್ತು ಸ್ವೀಕರಿಸುವ ಪರಿಕಲ್ಪನೆ ಶ್ರೀನಿವಾಸ್ ಅವರಲ್ಲಿ ಚಿಗುರೊಡೆಯಿತು. ಇದೇ ನಿಟ್ಟಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳ ದತ್ತು ಸ್ವೀಕಾರ ಅಭಿಯಾನವನ್ನು ಅವರು ಆರಂಭಿಸಿದರು. ಇದಕ್ಕಾಗಿ ತಾವು ದುಡಿಯುತ್ತಿದ್ದ ಒಂದಷ್ಟು ಹಣವನ್ನು ಅವರು ಮೀಸಲಿಟ್ಟರು.
ಈ ಆಂದೋಲನಕ್ಕೆ ಅವರು ವೇದಿಕೆಯಾಗಿ ಬಳಸಿಕೊಂಡಿದ್ದು ಫೇಸ್ಬುಕ್ನ್ನು. ಫೇಸ್ಬುಕ್ನಲ್ಲಿ ಒಂದು ಮೆಸೆಜ್ ಅನ್ನು ಹರಿಬಿಟ್ಟರು. ಅಗತ್ಯವಿರುವವರಿಗೆ ನನ್ನ ಕೈಲಾದ ಸೇವೆಯನ್ನು ಮಾಡಬೇಕೆಂದಿದ್ದೇನೆ. ನನ್ನ ಕೈಗೆ ನಿಮ್ಮ ಕೈ ಕೈ ಜೋಡಿಸಿ ಎಂಬುದು ಆ ಮೇಸೆಜ್ನ ಸಾರಾಂಶವಾಗಿತ್ತು.
ಇದನ್ನು ಓದಿ: ರುಚಿ ರುಚಿಯಾಗಿದೆ 'ಹುಡ್ಲಿ'ಯ ಉಪ್ಪಿನ ಕಾಯಿ- ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಿದ ಯುವಕರಿಗೆ ಜೈ
ಅಭಿಯಾನದ ಆರಂಭಕ್ಕೂ ಮೊದಲು, ರಾಜ್ಯದ ಕನ್ನಡಶಾಲೆಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿದ ಶ್ರೀನಿವಾಸ್, ದತ್ತು ಸ್ವೀಕಾರಕ್ಕೆ ಆರಿಸಿಕೊಂಡಿದ್ದು ಮೊದಲು ಬೀದರ್ ಜಿಲ್ಲೆಯನ್ನು. ಈ ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸತತವಾಗಿ ದಾಖಲಾತಿ ಕುಸಿಯುತ್ತಿರುವ ಶಾಲೆಗಳ ಸಮೀಕ್ಷೆ ನಡೆಸಿದ್ದಾರೆ. ಬೀದರ್ ಸಮೀಪದ ಬಾಪೂರ ಗ್ರಾಮದ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸುವ ಮೂಲಕ ಆರಂಭವಾಯಿತು ಇವರ ಅಭಿಯಾನ. ಆ ಶಾಲೆಗೆ ಕಂಪ್ಯೂಟರ್, ಪ್ರೊಜೆಕ್ಟರ್, ಪ್ರದರ್ಶನ ಪರದೆ, ನೀರು ಶುದ್ಧೀಕರಣ ಯಂತ್ರ ನೀಡಿದ್ದಾರೆ. ಶ್ರೀನಿವಾಸ್ ಕನ್ನಡ ಕಾರ್ಯ ಗಮನ ಸೆಳೆಯಲು ಆರಂಭಿಸಿತು.
ಶಾಲೆಯ ಒಳಗಡೆ ಹೇಗಿರುತ್ತದೋ, ಹಾಗೆಯೇ ಶಾಲೆಯ ಸುತ್ತಮುತ್ತಲಿನ ವಾತಾವರಣ ಇರಬೇಕು. ಆಗಲೇ ಶಾಲೆಯಲ್ಲಿ ಶಿಕ್ಷಣದ ಜೊತೆ ಶಿಸ್ತು ಕೂಡ ಬೆಳೆಯುತ್ತದೆ. ಹೀಗಾಗಿ ಶಾಲೆಯ ಸುತ್ತಮುತ್ತ ಸಸಿಗಳನ್ನು ನೆಟ್ಟು, ಶಾಲಾ ಕಟ್ಟಡಕ್ಕೆ ಸಣ್ಣಪುಟ್ಟ ದುರಸ್ತಿ ಕೆಲಸ ಮಾಡಿಸಿದ್ದಾರೆ. ಕಂಪ್ಯೂಟರ್ ಬೋಧನೆಗಾಗಿ ಒಬ್ಬ ಶಿಕ್ಷಕರನ್ನು ನೇಮಿಸಿ, ಅವರಿಗೆ ಪ್ರತಿ ತಿಂಗಳು ಗೌರವಧನ ನೀಡುವ ವ್ಯವಸ್ಥೆ ಮಾಡಿದ್ದಾರೆ.
" ಕನ್ನಡ ಶಾಲೆಗಳಲ್ಲಿ ನಾವು ನೇಮಿಸಿರುವ ಕಂಪ್ಯೂಟರ್ ಬೋಧಕರು ನುರಿತ ತರಬೇತಿ ಪಡೆದಿರುತ್ತಾರೆ. ಅಲ್ಲದೆ ಅವರು ಸಹ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಬಂದಿರುತ್ತಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸುಣ್ಣ ಬಣ್ಣ ಬಳಿದು, ಮರಗಿಡ ಬೆಳೆಸಿದರೆ ಸಾಲದು, ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಅದಕ್ಕಾಗಿ ನಾನು ಶ್ರಮಿಸುತ್ತಿದ್ದೇನೆ."
- ವೀರಕಪುತ್ರ ಶ್ರೀನಿವಾಸ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ
ಅಭಿಯಾನದ ಸಹಾಯದಿಂದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿ ಬಿದಾರಣೆ ಎನ್ನುವ ಗ್ರಾಮದ ಸರ್ಕಾರಿ ಶಾಲೆ ಸೇರಿದಂತೆ, ರಾಜ್ಯದ ಒಂದಷ್ಟು ಶಾಲೆಗಳಿಗೆ ಅಗತ್ಯ ಇರುವ ಪರಿಕರಗಳನ್ನು ನೀಡಿದ್ದಾರೆ. ಕನ್ನಡ ಪರ ಹೋರಾಟ ಮಾಡುವ ಜನರಿಗೆ ಯಾವ ರೀತಿಯ ಹೋರಾಟ ಮಾಡಬಹುದು ಅನ್ನುವುದನ್ನು ಶ್ರೀನಿವಾಸ್ ತೋರಿಸಿಕೊಟ್ಟಿದ್ದಾರೆ.
ಸ್ನೇಹಿತರ ಸಹಕಾರ
ಶ್ರೀನಿವಾಸ್ ಅವರ ಜತೆ ಡಾ.ವಿಷ್ಣು ಸೇನಾ ಸಮಿತಿ ಬಳಗದ ಮಂಜು ಮಾಣಿಕ್ಯ, ವಿಷ್ಣು ಪ್ರಕಾಶ್, ಕೆ. ವಿನಯ್, ಯದುನಂದನಗೌಡ, ಆನಂದರಾಜ್, ಮಲ್ಲಿಕಾರ್ಜುನ, ಬಲರಾಮ್, ಡಾ.ಸಂತೋಷ್ ಹಾನಗಲ್, ಮುಂತಾದವರು ಕೈಜೋಡಿಸಿದ್ದಾರೆ. ಈ ಮೂಲಕ ಕನ್ನಡ ಶಾಲೆಗಳ ಉಳಿವಿನ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಾನ್ವೆಂಟ್ ಬಿಟ್ಟು ಹೊರಲು ಮನವಿ
ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಕ್ಕೆ ಬಂದೊದಗಿರುವ ದುಃಸ್ಥಿತಿ ನಾಡಿನ ಇತರ ಭಾಗಗಳಿಗೆ ಹರಡಬಾರದೆಂಬ ಕಾರಣಕ್ಕೆ ಕೆಲವು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ, ಸರ್ಕಾರಿ ಶಾಲೆಗಳಲ್ಲೂ ಸಿಗಲಿ, ಪೋಷಕರು ಕಾನ್ವೆಂಟ್ಗಳನ್ನು ಬಿಟ್ಟು, ಸರ್ಕಾರಿ ಶಾಲೆಗಳ ಕಡೆ ತಮ್ಮ ಮಕ್ಕಳನ್ನು ಕಳುಹಿಸಬೇಕೆಂಬ ಕಾಳಜಿಯಿಂದ ಈ ಅಭಿಯಾನ ಆರಂಭಿಸಿದ್ದೇನೆ ಎನ್ನುತ್ತಾರೆ ಶ್ರೀನಿವಾಸ.
ಕೈ ಜೋಡಿಸಿ
ಈ ಅಭಿಯಾನದಲ್ಲಿ ನೂರು ಶಾಲೆಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಶ್ರೀನಿವಾಸ ಅವರು ಪ್ರಯತ್ನ ಮುಂದುವರೆಸಿದ್ದಾರೆ. ಸದ್ಯಕ್ಕೆ ಮೈಸೂರು ಜಿಲ್ಲೆಯಲ್ಲಿ ಗಿರಿಜನ ಮಕ್ಕಳು ಕಲಿಯುತ್ತಿರುವ ಶಾಲೆಯನ್ನು ದತ್ತು ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ. ಒಂದು ಶಾಲೆಯ ಅಭಿವೃದ್ಧಿಗೆ ಕನಿಷ್ಠ 1.5 ಲಕ್ಷ ವೆಚ್ಚವಾಗುತ್ತದೆ. ಉದಾರ ಮನಸ್ಸಿನವರು ಅಭಿಯಾನದೊಂದಿಗೆ ಕೈಜೋಡಿಸಿದರೆ ಸಹಾಯವಾಗುತ್ತದೆ ಎಂದು ಅವರು ಮನವಿ ಮಾಡುತ್ತಾರೆ. ಒಟ್ಟಿನಲ್ಲಿ ಕನ್ನಡವನ್ನು ಉಳಿಸಿಕೊಂಡರೆ ಭವಿಷ್ಯ ಚೆನ್ನಾಗಿರುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೇ ಇದ್ದರೆ ಕನ್ನಡಕ್ಕೆ ಭವಿಷ್ಯದಲ್ಲಿ ಕಷ್ಟವಿದೆ ಅನ್ನುವುದನ್ನು ಮರೆಯುವ ಹಾಗಿಲ್ಲ.
1. ರಂಗಭೂಮಿಯಲ್ಲಿ ಪ್ರಯೋಗದ ಕಿಕ್- "ವಿ ಮೂವ್"ನಿಂದ ಹೊಸತನದ ಟಚ್
2. ತಿಂಡಿ ಉಚಿತ-ಟೈಮ್ಗೆ ದುಡ್ಡು..! ಇದು ಬೆಂಗಳೂರಿನ ಸ್ಪೆಷಲ್ ಹೊಟೇಲ್