ಗೂಗಲ್‌ ಟ್ರೆಂಡ್ಸ್‌ 2020 ಭಾರತ - ಏನೆಲ್ಲ ಹುಡುಕಿದ್ದಾರೆ ಗೂಗಲ್‌ನಲ್ಲಿ?

2020ರಲ್ಲಿ ಭಾರತೀಯರು ಗೂಗಲ್‌ನಲ್ಲಿ ಏನೆಲ್ಲ ಹುಡುಕಾಡಿದ್ದಾರೆ ಎಂಬ ಪಟ್ಟಿಯನ್ನು ಗೂಗಲ್‌ ಬಿಡುಗಡೆಗೊಳಿಸಿದ್ದು, ಸಾಂಕ್ರಾಮಿಕದ ಸಮಯದಲ್ಲಿ ಜನರ ತಲೆಯಲ್ಲಿ ಓಡುತ್ತಿದ್ದ ವಿಚಾರಗಳನ್ನು ಬಿಚ್ಚಿಟ್ಟಿದೆ.

ಗೂಗಲ್‌ ಟ್ರೆಂಡ್ಸ್‌ 2020 ಭಾರತ - ಏನೆಲ್ಲ ಹುಡುಕಿದ್ದಾರೆ ಗೂಗಲ್‌ನಲ್ಲಿ?

Thursday December 10, 2020,

2 min Read

2020 ಅನ್ನು ತುಂಬಾ ವಿಚಿತ್ರ ವರ್ಷವೆನ್ನಬಹುದು. ಈ ವರ್ಷವನ್ನು ಕೊರೊನಾ ಎಂಬ ಸಾಂಕ್ರಾಮಿಕದ ಛಾಯೆ ಆವರಿಸಿ ಎಲ್ಲರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಮನೆಯಿಂದ ಹೊರಬರದಂತೆ ಮಾಡಿದ್ದು ನಿಜಕ್ಕೂ ಆಶ್ಚರ್ಯಕರ. ಆದರೆ ಇದೆಲ್ಲದರ ನಡುವೆ ಹಲವು ಘಟನೆಗಳು, ಬೆಳವಣಿಗೆಗಳು, ಬದಲಾವಣೆಗಳಿಗೆ 2020 ಸಾಕ್ಷಿಯಾಗಿದೆ.


ಪ್ರತಿವರ್ಷದಂತೆ ಗೂಗಲ್‌ ಈ ವರ್ಷವು 2020ರಲ್ಲಿ ಭಾರತೀಯರು ಯಾವೆಲ್ಲ ವಿಷಯಗಳನ್ನು ಗೂಗಲ್‌ನಲ್ಲಿ ತಡಕಾಡಿದ್ದಾರೆ, ಹೆಚ್ಚು ಸರ್ಚ್‌ ಮಾಡಿರುವ ಘಟನೆಗಳು, ಹೆಸರುಗಳು, ಸಿನಿಮಾಗಳು ಮತ್ತು ಇತ್ಯಾದಿಗಳ ಪಟ್ಟಿಯನ್ನು ಬಿಡುಗಡೆಮಾಡಿದೆ. ಐಪಿಎಲ್‌ನಿಂದ ಅರ್ನಬ್‌ ಗೋಸ್ವಾಮಿವರೆಗೆ, ಆಹಾರ ವಿತರಣಾ ಕೇಂದ್ರದಿಂದ ಮಧ್ಯದ ಅಂಗಡಿವರೆಗೆ, ದಲ್ಗೋನಾ ಕಾಫಿಯಿಂದ ಕೇಕ್‌ವರೆಗೆ ಹೀಗೆ ಗೂಗಲ್‌ ಬಿಡುಗಡೆಗೊಳಿಸಿರುವ ಪಟ್ಟಿ ವಿಶಿಷ್ಟವಾಗಿದೆ.


ವರ್ಷದ ಬಹುಪಾಲನ್ನು ಆವರಿಸಿದ ಕೊರೊನಾ ಛಾಯೆಯಿಂದ ಹೊರಬರಲು ಕ್ರಿಕೆಟ್‌ ಪ್ರೀಯರಿಗೆ ಸಹಾಯ ಮಾಡಿದ್ದು ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌). ಹೌದು ಜನ ಸರ್ಚ್‌ ಮಾಡಿರುವುದಲ್ಲಿ ಇದಕ್ಕೆ ಮೊದಲ ಸ್ಥಾನ, ಕೊರೊನಾವೈರಸ್‌ ನಂತರದ ಸ್ಥಾನದಲ್ಲಿದೆ.


ಆನಂತರದ ಸ್ಥಾನದಲ್ಲಿ ಪ್ರಧಾನ ಮಂತ್ರಿ ಕಿಸಾನ್‌ ಯೋಜನೆ, ಬಿಹಾರ್‌ ಮತ್ತು ದೆಹಲಿ ಚುನಾವಣಾ ಫಲಿತಾಂಶ, ದಿಲ್‌ ಬೇಚಾರಾ ಚಲನಚಿತ್ರ, ಅಮೇರಿಕಾದ ಅಧ್ಯಕ್ಷ ಜೋಯ್‌ ಬಿಡೆನ್‌, ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಇದ್ದಾರೆ.

ಇವು ಒಟ್ಟಾರೆ(ಸಮಗ್ರ)ಯಾಗಿ ಹುಡುಕಿದ ವಿಷಯಗಳಾದರೆ ಅತೀ ಹೆಚ್ಚು ಸರ್ಚ್‌ ಮಾಡಿರುವ ಸಿನಿಮಾಗಳಲ್ಲಿ ಸುಶಾಂತ್‌ ಸಿಂಗ್‌ ರಜಪುತ್‌ ಅವರ ದಿಲ್‌ ಬೇಚಾರಾ ಅಗ್ರಸ್ಥಾನದಲ್ಲಿದೆ. ನಂತರದಲ್ಲಿ ಕನ್ನಡಿಗ ಕ್ಯಾಪ್ಟನ್‌ ಗೋಪಿನಾಥ್‌ ಅವರ ಸಿಂಪ್ಲಿ ಫೈ: ಅ ಡೆಕ್ಕನ್‌ ಒಡೆಸ್ಸಿ ಪುಸ್ತಕ ಆಧರಿಸಿದ ಸೂರಾರಾಯಿ ಪೋಟ್ರು, ತಾನ್ಹಾಜಿ, ಶಕುಂತಲಾ ದೇವಿ, ಗುಂಜನ್‌ ಸಕ್ಸೇನಾ ಇತ್ಯಾದಿ ಚಿತ್ರಗಳಿವೆ.


ಇನ್ನೂ ಟಿವಿ/ವೆಬ್‌ ಸಿರೀಸ್‌ಗಳ ವಿಷಯಕ್ಕೆ ಬಂದರೆ ಸ್ಪ್ಯಾನಿಷ್‌ನ ಮನಿ ಹೇಸ್ಟ್‌ ಅಗ್ರ ಸ್ಥಾನ ಪಡೆದಿದೆ. ನಂತರದ ಸ್ಥಾನದಲ್ಲಿ ಸ್ಕ್ಯಾಮ್‌ 1992: ದಿ ಹರ್ಶದ್‌ ಮೇಹ್ತಾ ಸ್ಟೋರಿ, ಬಿಗ್‌ ಬಾಸ್‌ 14, ಮಿರ್ಜಾಪುರ್‌ 2, ಪಾತಾಳ ಲೋಕ್‌ ಇತ್ಯಾದಿಗಳು ಸೇರಿವೆ.


ಏನಿದು, ಹೀಗೆಂದರೇನು ಎಂದು ಕೇಳಿದ ಪ್ರಶ್ನೆಗಳಲ್ಲಿ ಕೊರೊನಾವೈರಸ್‌ಗೆ ಮೊದಲ ಸ್ಥಾನ, ನಂತರದಲ್ಲಿ ಬಿನೋದ್‌, ಪ್ಲಾಸ್ಮಾ ಚಿಕಿತ್ಸೆ, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಸೂರ್ಯಗ್ರಹಣ ಎನ್‌ಆರ್‌ಸಿ, ಹಂತಾವೈರಸ್‌, ನೇಪೋಟಿಸ್ಮ್‌ ಎಂದರೇನು ಎಂಬ ಪ್ರಶ್ನೆಗಳಿವೆ.

ಅತೀ ಹೆಚ್ಚು ಹುಡುಕಿರುವ ವ್ಯಕ್ತಿಗಳ ಪಟ್ಟಿಯಲ್ಲಿ ಜೋಯ್‌ ಬಿಡೇನ್‌, ಅರ್ನಬ್‌ ಗೋಸ್ವಾಮಿ, ಕಾನಿಕಾ ಕಪೂರ್‌, ಕಿಮ್‌ ಜಾಂಗ್‌-ಉನ್‌, ಅಮಿತಾಬ್‌ ಬಚ್ಚನ್‌, ರಶೀದ್‌ ಖಾನ್‌, ರಿಯಾ ಚಕ್ರವರ್ತಿ, ಕಮಲಾ ಹ್ಯಾರಿಸ್‌, ಕಂಗನಾ ರನಾವತ್‌ ಇದ್ದಾರೆ.


ಹೇಗೆ ತಯಾರಿಸಬೇಕು(ಹೌ-ಟು) ವಿಭಾಗದಲ್ಲಿ ಪನೀರ್‌ ಮಾಡೋದು ಹೇಗೆ?, ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಹೇಗೆ?, ದಲ್ಗೊನಾ ಕಾಫಿ ಮಾಡೋದೆಗೆ?, ಮನೆಯಲ್ಲಿ ಸ್ಯಾನಿಟೈಸರ್‌ ಹೇಗೆ ತಯಾರಿಸಬೇಕು?, ಮತ್ತು ಆಧಾರ ನೊಂದಿಗೆ ಪ್ಯಾನ್‌ ಕಾರ್ಡ್‌ ಜೋಡಿಸುವುದು ಹೇಗೆ ಎಂಬ ಇತ್ಯಾದಿ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗಿದೆ.


ಅತೀ ಹೆಚ್ಚು ಸುದ್ದಿ ಮಾಡಿದ ಘಟನೆಗಳಲ್ಲಿ ಐಪಿಎಲ್‌ಗೆ ಅಗ್ರಸ್ಥಾನ, ನಂತರ ಕೊರೊನಾವೈರಸ್‌, ಅಮೇರಿಕದ ಚುನಾವಣೆ, ನಿರ್ಭಯಾ ಪ್ರಕರಣ, ಲಾಕ್‌ಡೌನ್‌, ಆಸ್ಟ್ರೇಲಿಯಾದ ಕಾಡ್ಗಿಚ್ಚು, ರಾಮ ಮಂದಿರ ಮತ್ತು ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚು ಹುಡುಕಲಾಗಿದೆ.

Share on
close