ಕೊಳಗೇರಿ ಮಕ್ಕಳಿಗೆ ಶಿಕ್ಷಣ ಕಲಿಸಿ ಹಸಿವು ನೀಗಿಸುತ್ತಿರುವ ಭಾರತೀಯ ರೈಲ್ವೇ ಅಧಿಕಾರಿ
ಗಜಿಯಾಬಾದ್ ಮೂಲದ ಸುಶೀಲ್ ಭಾರತೀಯ ರೈಲ್ವೇ ವಿಭಾಗದಲ್ಲಿ ಹಿರಿಯ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಅಧಿಕಾರಿ ಕೊಳಗೇರಿ ಪ್ರದೇಶದ ಮಕ್ಕಳಿಗೆ ಆಹಾರ ಹಾಗೂ ಶಿಕ್ಷಣ ನೀಡುವ ಮೂಲಕ ಆ ಮಕ್ಕಳಿಗೆ ಆಸರೆಯಾಗುತ್ತಿದ್ದಾರೆ.

ಮಕ್ಕಳಿಗೆ ಆಹಾರ ನೀಡುತ್ತಿರುವ ಸುಶೀಲ್ (ಚಿತ್ರ ಕೃಪೆ: ಮಿಲಾಪ್)
ಪ್ರಸ್ತುತ ದಿನಮಾನದಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಎಷ್ಟೋ ಪ್ರದೇಶಗಳಲ್ಲಿ ಬಾಲ ಕಾರ್ಮಿಕ ಪದ್ದತಿ ಇನ್ನು ನಿಂತಿಲ್ಲ. ಶಿಕ್ಷಣ ಕಲಿಯುವ ಮನಸ್ಸಿದ್ದರೂ ಕೂಡ ಕೆಲವೊಮ್ಮೆ ಪರಿಸ್ಥಿತಿ ಅವರನ್ನು ಶಾಲೆಯಿಂದ ದೂರ ಉಳಿಯುವಂತೆ ಮಾಡುತ್ತದೆ. ಅದೇ ಪರಿಸ್ಥಿತಿ ಉತ್ತರ ಪ್ರದೇಶದ ಘಜಿಯಾಬಾದ್‌ನಲ್ಲಿಯೂ ಇದೆ. ಆದರೆ ಇಂಥಹ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ಸುಶೀಲ್ ಕುಮಾರ್ ನೆರವಾಗುತ್ತಿದ್ದಾರೆ.
ಉತ್ತರ ಪ್ರದೇಶ ಮೂಲದ ಸುಶೀಲ್ ಕುಮಾರ್ ಸದ್ಯ ನವ ದೆಹಲಿಯಲ್ಲಿ ಭಾರತೀಯ ರೈಲ್ವೇಯ ಹಿರಿಯ ಇಂಜಿನಿಯರ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತಮ್ಮ ಕೆಲಸದ ಜೊತೆಗೆ ಕಟ್ಟಡ ಕಾರ್ಮಿಕರ ಮಕ್ಕಳು ಹಾಗೂ ಬಾಲ ಕಾರ್ಮಿಕರಿಗೆ ಶಿಕ್ಷಣ ನೀಡುವ ಮೂಲಕ ಅವರಿಗೆ ಜ್ಞಾನಾರ್ಜನೆಯನ್ನು ಮಾಡುತ್ತಿದ್ದಾರೆ. ಸುಶಿಲ್ ಅವರ ಈ ಕೆಲಸಕ್ಕೆ ಪ್ರೇರಣೆಯಾಗಿದ್ದು ಅವರ ಹುಟ್ಟುರಿನ ಪರಿಸ್ಥಿತಿ.
ಗಜಿಯಾಬಾದ್ ಭಾರತದಲ್ಲಿಯೇ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದು. ಈ ನಗರದಲ್ಲಿ ಸಾಕಷ್ಟು ಕಟ್ಟಡಗಳು, ರಸ್ತೆ ನಿರ್ಮಾಣಗಳು, ಸೇತುವೆ ನಿರ್ಮಾಣಗಳು ಸೇರಿದಂತೆ ಸಾಕಷ್ಟು ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಈ ಕಾಮಗಾರಿಗಳಿಗೆಂದು ಬೇರೆ ಬೇರೆ ದೂರದೂರುಗಳಿಂದ ಇಲ್ಲಿಗೆ ಬಂದು ತಾತ್ಕಾಲಿಕ ಸ್ಲಮ್‌ಗಳನ್ನು ನಿರ್ಮಿಸಿಕೊಂಡು ಕೆಲಸ ನಿರ್ವಹಿಸುತ್ತಾರೆ ಕಾರ್ಮಿಕರು. ಇವರಲ್ಲಿ ಬಾಲಕಾರ್ಮಿಕರು ಇದ್ದಾರೆ. ಇವೆರೆಲ್ಲಾ ಶಿಕ್ಷಣ ವಂಚಿತರು. ಶಾಲೆಗೆ ಹೋಗಬೇಕೆಂದರೂ ಹೋಗಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅವರ ಪೋಷಕರ ನಿರ್ಲಕ್ಷದಿಂದ ಕೆಲಸ ಮಾಡುವ, ಚಿಂದಿ ಆಯುವ ಪರಿಸ್ಥಿತಿ ಇದೆ. ಹೀಗಾಗಿ ಶಾಲೆಗೆ ಹೋಗುವ ಮನಸ್ಸಿರುವ ಮಕ್ಕಳಿಗೆ ಸುಶೀಲ್ ಕುಮಾರ್ ಶಿಕ್ಷಣ ನೀಡುವ ಕೆಲಸಕ್ಕೆ ಕೈ ಹಾಕಿದ್ದಾರೆ, ವರದಿ ಮಿಲಾಪ್.
ಗಜಿಯಾಬಾದ್‌ನಲ್ಲಿ ಸದ್ಯ ಒಂದು ಅಧ್ಯಯನ ಕೇಂದ್ರ ತೆರೆಯಲಾಗಿದೆ. ಇಲ್ಲಿ ಸುಮಾರು 243 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆ ಮಕ್ಕಳ ಪರಿಸ್ಥಿತಿಗೆ ಹಾಗೂ ಅವರ ಕೆಲಸಕ್ಕೆ ಅನುಗುಣವಾಗಿ ಅವರಿಗೆ ಶಿಕ್ಷಣಾಭ್ಯಾಸ ಮಾಡಿಸಲಾಗುತ್ತಿದೆ. ಬೆಳಗ್ಗೆ 9 ರಿಂದ ಸಂಜೆಯರೆಗೆ ಈ ಕೇಂದ್ರದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎನ್ನುತ್ತಾರೆ ಸುಶಿಲ್.

ಅಧ್ಯಯನ ಕೇಂದ್ರದಲ್ಲಿ ಮಕ್ಕಳ ಜೊತೆ ಸುಶೀಲ್ (ಚಿತ್ರ ಕೃಪೆ: ಮಿಲಾಪ್)
2013 ರಲ್ಲಿ ಸುಶೀಲ್ ಹಾಗೂ ಅವರ ಸ್ನೇಹಿತರು ಸೇರಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಅಧ್ಯಯನ ಕೇಂದ್ರಗಳನ್ನು ತೆರೆಯಲು ನಿರ್ಧಾರ ಮಾಡುತ್ತಾರೆ. ನಿರ್ಮಾನ್ ಕೋಚಿಂಗ್ ಸಂಸ್ಥಾನ್ ಎಂಬ ಹೆಸರಿನಲ್ಲಿ ತೆರಯುವ ಈ ಅಧ್ಯಯನ ಕೇಂದ್ರದಲ್ಲಿ ಉಚಿತ ಶಿಕ್ಷಣ, ಪಠ್ಯ ಪುಸ್ತಕವನ್ನು ನೀಡುತ್ತಾರೆ. ಈ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತವೆ. ಈ ಮಕ್ಕಳಿಗೆ ಮೂಲಭೂತ ಸೌಕರ್ಯ ನೀಡುವುದರ ಜೊತೆಗೆ ಮಕ್ಕಳಿಗೆ ಒಂದೊತ್ತಿನ ಊಟದ ವ್ಯವಸ್ಥೆಯನ್ನು ಮಾಡುತ್ತಾರೆ, ವರದಿ ದಿ ಬೆಟರ್ ಇಂಡಿಯಾ.
ಸದ್ಯ ನಿರ್ಮಾನ್ ಕೋಚಿಂಗ್ ಸೆಂಟರ್‌ನಲ್ಲಿ ಈಗಾಗಲೇ 200 ಕ್ಕೂ ಅಧಿಕ ಮಂದಿ ಮಕ್ಕಳಿಗೆ ಶಿಕ್ಷಣದ ಜೊತೆ ಮೂಲಭೂತ ಸೌಕರ್ಯ ಕೂಡ ನೀಡಲಾಗುತ್ತಿದೆ. ಸುಶೀಲ್ ಅವರ ಸಮೀಕ್ಷೆಯ ವರದಿ ಪ್ರಕಾರ 1000 ಮಕ್ಕಳನ್ನು ಈ ಸಂಸ್ಥೆಗೆ ಕರೆತರಬೇಕಿದೆ. ಆದರೆ ಹಣವಿಲ್ಲದ ಕಾರಣ ಈ ಯೋಜನೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಸಂಸ್ಥೆಯಲ್ಲಿರುವ ಮಕ್ಕಳಿಗೆ ಎರಡೊತ್ತಿನ ಊಟ ನೀಡಬೇಕಾಗಿದೆ. ಇವರಗೆ ಎರಡು ಹೊತ್ತಿನ ಊಟ ನೀಡುವುದರಿಂದ ಚಿಂದಿ ಹಾಯುವ, ಕಟ್ಟಡ ಕೆಲಸಕ್ಕೆ ಹೋಗುವ ಅವಶ್ಯಕತೆ ಇರುವುದಿಲ್ಲ ಎನ್ನುತ್ತಾರೆ ಸುಶೀಲ್. ಸದ್ಯ ಈ ಮಕ್ಕಳ ಬೆಳವಣಿಗೆಗೆ ಹಣದ ಅವಶ್ಯಕತೆ ಇದ್ದು, ಸಹಾಯ ನೀಡುವಂತೆ ಮನವಿ ಮಾಡುತ್ತಿದ್ದಾರೆ ಸುಶೀಲ್.