1.8 ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳಿಂದ ಸಿದ್ಧವಾಯ್ತು ಮಿಯಾಮಿಯ ಪುಟ್ಬಾಲ್ ಮೈದಾನ

ಮಿಯಾಮಿಯಲ್ಲಿ ಅದಿದಾಸ್ ಕಂಪನಿಯು 1.8 ಮಿಲಿಯನ್ ತ್ಯಾಜ್ಯ ಪ್ಲಾಸ್ಟಿಕ್ ಬಾಟಲ್‌ಗಳು ಅಥವಾ 40,000 ಪೌಂಡ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಫುಟ್ಬಾಲ್ ಮೈದಾನವನ್ನು ನಿರ್ಮಿಸಿದೆ.

1.8 ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳಿಂದ ಸಿದ್ಧವಾಯ್ತು ಮಿಯಾಮಿಯ ಪುಟ್ಬಾಲ್ ಮೈದಾನ

Friday February 07, 2020,

2 min Read

ಇಂದು ಪ್ಲಾಸ್ಟಿಕ್ ತ್ಯಾಜ್ಯವು ಇಡೀ ಜಗತ್ತನ್ನು ಆಳುತ್ತಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಪ್ರಕಾರ, ವಿಶ್ವಾದಾದ್ಯಂತ ಪ್ರತಿ ನಿಮಿಷಕ್ಕೆ ಒಂದು ಮಿಲಿಯನ್ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲ್‌ಗಳನ್ನು ಖರೀದಿಸಲಾಗುತ್ತದೆ. ಆದರೆ ವಿಶ್ವದ ಸಾಗರಗಳಲ್ಲಿ 5 ಟ್ರಿಲಿಯನ್ ಪ್ಲಾಸ್ಟಿಕ್ ತುಂಡುಗಳು ತೇಲುತ್ತವೆ. ಅಲ್ಲದೇ‌ ಪ್ರಪಂಚವು ಪ್ರತಿವರ್ಷ 300 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತಿದ್ದು, ಅದು ಇಡೀ ಮಾನವ ಜನಸಂಖ್ಯೆಯ ತೂಕಕ್ಕೆ ಸಮವಾಗಿದೆ‌.


ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ಸಮುದ್ರಗಳಲ್ಲಿ ಜಲಚರಗಳಿಗಿಂತ ಪ್ಲಾಸ್ಟಿಕ್ ತ್ಯಾಜ್ಯವೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಕ್ರೀಡಾ ಉಡುಪಿನ ಪ್ರಮುಖ ಬ್ರ್ಯಾಂಡ್ ಆದ ಅದಿದಾಸ್ ಕಂಪನಿಯು ತನ್ನ ವಿನೂತನ ಯೋಜನೆಯ ಮೂಲಕ ಪ್ಲಾಸ್ಟಿಕ್ ಅನ್ನು ಕಡಿಮೆ ಮಾಡುವಲ್ಲಿ ಹೆಜ್ಜೆಯನ್ನಟ್ಟಿದೆ.


1.8 ಮಿಲಿಯನ್ ತ್ಯಾಜ್ಯ ಪ್ಲಾಸ್ಟಿಕ್ ಬಾಟಲ್‌ಗಳು ಅಥವಾ 40,000 ಪೌಂಡ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿಕೊಂಡು ವಿಶ್ವದ ಮೊದಲ ‘ಹಸಿರು' ಹಾಗೂ ಸುಸ್ಥಿರ ಫುಟ್ಬಾಲ್ ಪಿಚ್ ಅನ್ನು ನಿರ್ಮಿಸಿದೆ. ಸಾಂಪ್ರದಾಯಿಕವಾಗಿ ನೈಸರ್ಗಿಕ ಹುಲ್ಲಿನ ಹಾಗೇ ಕಾಣುವಂತೆ ದೊಡ್ಡ ಪ್ರಮಾಣದ ಸಂಶ್ಲೇಷಿತ ನಾರುಗಳನ್ನು ಬಳಸಿ ಟರ್ಫ್ ಭೂಮಿಯನ್ನು ನಿರ್ಮಿಸಲಾಗುತ್ತದೆ. ಅದಿದಾಸ್ ಪರಿಸರವನ್ನು ಕಲುಷಿತಗೊಳಿಸುವ ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಮಿಯಾಮಿಯ ಪ್ರೌಢಶಾಲೆಯ ಪುಟ್ಬಾಲ್ ಮೈದಾನವನ್ನು ವಿಭಿನ್ನವಾಗಿ ನಿರ್ಮಿಸಿದೆ.


ವಿಶ್ವದ ಮೊದಲ ಹಸಿರು ಹಾಗೂ ಸುಸ್ಥಿರ ಪುಟ್ಬಾಲ್ ಮೈದಾನ (ಚಿತ್ರಕೃಪೆ: ಸಿಎನ್‌ಎನ್)


ಈ ಹಸಿರು ಪುಟ್ಬಾಲ್ ಮೈದಾನವನ್ನು ಮಿಯಾಮಿ ಎಡಿಸನ್ ಪ್ರೌಢ ಶಾಲೆಯಲ್ಲಿ ನಿರ್ಮಿಸಿದ್ದು, ಇದರ ಕುರಿತಾಗಿ ಅದಿದಾಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, "ಉತ್ತಮ ನಾಳೆಗಾಗಿ ಇದನ್ನು ನಿರ್ಮಿಸಿದ್ದು, ಮಿಯಾಮಿ ಎಡಿಸನ್ ಹಿರಿಯ ಶಾಲೆಗಾಗಿ ಈ ಹೊಸ ಮನೆಯನ್ನು ಸುಮಾರು 1.8 ಮಿಲಿಯನ್ ಪ್ಲಾಸ್ಟಿಕ್ ಬಾಟಲ‌್‌ಗಳಿಂದ ಇದನ್ನು ಮರುರೂಪಿಸಲಾಯಿತು‌," ಎಂದು ಬರೆದುಕೊಂಡಿದೆ.



ಅದಿದಾಸ್‌ನ ಜಾಗತಿಕ ಬ್ರಾಂಡ್ ಕಾರ್ಯತಂತ್ರದ ಉಪಾಧ್ಯಕ್ಷ ಜೇಮ್ಸ್ ಕಾರ್ನೆಸ್ ಸಿಎನ್‌ಎನ್ ಜೊತೆ ಮಾತನಾಡುತ್ತಾ,


"ಈ ಸುಸ್ಥಿರ ಕ್ಷೇತ್ರವನ್ನು ದೂರದ ದ್ವೀಪಗಳು, ಕಡಲ ತೀರಗಳು, ಕರಾವಳಿ ಸಮುದಾಯಗಳು ಮತ್ತು ನದಿ ತೀರಗಳಿಂದ ಪಡೆದ ಪ್ಲಾಸ್ಟಿಕ್ ಬಾಟಲ್‌ಗಳಿಂದ ತಯಾರಿಸಲಾಗಿದೆ. - ಇದೆಲ್ಲದರ ಗುರಿ ಸಮುದ್ರವು ಮಾಲಿನ್ಯವಾಗದಂತೆ ತಡೆಗಟ್ಟುವುದಾಗಿದೆ,” ಎಂದರು.


ಈ ಮೈದಾನವು ಇನ್ಪಿಲ್ ಉಂಡೆಗಳಂತಿದ್ದು, ಈ ಮೈದಾನವು ಆಡಲು ಸುಲಭವಾಗುವಂತಿದೆ ಹಾಗೂ ಸುರಕ್ಷತೆಗೆ ಅನುಕೂಲವಾಗಿದೆ. ಆಟಗಾರರು ಇದರ ‌ಮೇಲೆ ಬಿದ್ದರೂ ಕೂಡ ಅವರಿಗೆ ಅದು ಕುಶನ್ ರೀತಿ ಭಾಸವಾಗುತ್ತದೆ ಮತ್ತು ಆಟಗಾರರಿಗೆ ಹೆಚ್ಚಿನ ಪೆಟ್ಟು ಸಂಭವಿಸದಂತೆ ತಡೆಯುತ್ತದೆ.


"ಕ್ರೀಡೆಯ ಮೂಲಕ ನಮಗೆ ಜೀವನವನ್ನು ಬದಲಾಯಿಸುವ ಶಕ್ತಿಯಿದೆ ಎಂದೇ ನಾವು ನಂಬುತ್ತೇವೆ ಮತ್ತು ಈ ಮೈದಾನವು ಆ ನಂಬಿಕೆಯ ಮೇಲೆ ನಾವು ಕೈಗೊಳ್ಳುವ ಕ್ರಮವಾಗಿದೆ. ಯುವ ಕ್ರೀಡಾಪಟುಗಳಿಗೆ ಆಡುವ ಸ್ಥಳಕ್ಕಿಂತ ಹೆಚ್ಚಾಗಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಕೊನೆಗೊಳಿಸುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಇದು ನೆನಪಿಸುತ್ತದೆ," ಎಂದು ಅದಿದಾಸ್‌ನ ಉತ್ತರ ಅಮೇರಿಕಾದ ಪುಟ್ಬಾಲ್ ನಿರ್ದೇಶಕ ಕ್ಯಾಮರೂನ್ ಕಾಲಿನ್ಸ್ ಹೇಳುತ್ತಾರೆ, ವರದಿ ಸಿಎನ್‌ಎನ್.


ಇಂದು ಕಾರ್ಪೊರೇಟ್ ಸಂಸ್ಥೆಗಳು ಇಂತಹ ವಿಷಯಗಳತ್ತ ಗಮನ ಕೊಡುತ್ತಿರುವುದು ಗಮನಾರ್ಹ ಬೆಳವಣಿಗೆ. ಹಾಗೇ ಬೇರೆ ಬೇರೆ ಸಂಸ್ಥೆಗಳು ಸಹ ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆಗೊಳಿಸುವಲ್ಲಿ ನವೀನ ಯೋಜನೆಗಳನ್ನು ತರಬೇಕು‌.