ಪ್ಲಾಸ್ಟಿಕ್ ನಿಷೇಧದಿಂದ ಜನ್ಮ ತಳೆಯಿತು ಒಡಿಷಾದ ಹಾಲಿನ ಎಟಿಎಂ
ಒಡಿಶಾ ರಾಜ್ಯದ ಗಂಜಾಂನಲ್ಲಿ ಗ್ರಾಹಕರು ಮನೆಯಿಂದಲೇ ಹಾಲಿನ ಪಾತ್ರೆಗಳನ್ನು ತಂದು ಹಾಲಿನ ಎಟಿಎಂ ನಿಂದ ಹಾಲನ್ನು ಪಡೆದು ಪ್ಲಾಸ್ಟಿಕ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧ ಆಗಲೇಬೇಕು ಎಂಬ ನಿರ್ಧಾರ ಈಗಾಗಲೇ ಕೊಂಚ ಮಟ್ಟಿನ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತಿದೆ. ಕೇಂದ್ರದ ಸೂಚನೆ ಮೇರೆಗೆ ಈಗಾಗಲೇ ಮೊದಲ ಹಂತದ ಪ್ಲಾಸ್ಟಿಕ್ ನಿಷೇಧವನ್ನು ರಾಜ್ಯ ಸರ್ಕಾರಗಳು, ಆಯಾಯ ಸ್ಥಳೀಯ ಸಂಸ್ಥೆಗಳು ಪಾಲಿಸುತ್ತಿವೆ. ಈ ನಡುವೆ ಸಾರ್ವಜನಿಕರು ಹಾಗೂ ಮಾರಾಟಗಾರರಲ್ಲಿ ಮೂಡುತ್ತಿರುವ ಪ್ರಶ್ನೆ ಒಂದೇ. ಹಾಲಿನ ಚೀಲಗಳು ಸೇರಿದಂತೆ ಪ್ಯಾಕ್ ಮಾಡಬುದಾದ ದ್ರವ ರೂಪದ ವಸ್ತುಗಳನ್ನು ಹೇಗೆ ತೆಗೆದುಕೊಂಡು ಹೋಗುವುದೆಂದು. ಇದಕ್ಕೆ ಇದೀಗ ಉತ್ತರ ನೀಡುತ್ತಿದೆ ಒಡಿಶಾದ ಗಂಜಾಂ.
ದಿ ಲಾಜಿಕಲ್ ಇಂಡಿಯಾ ಜೊತೆ ಮಾತನಾಡುತ್ತಾ, ಈ ಯೋಜನೆಯ ರುವಾರಿ ಜಿಲ್ಲಾಧಿಕಾರಿ ಅಮೃತ ಕುಲಂ,
“ನಾವು ಪ್ಲಾಸ್ಟಿಕ್ ಮುಕ್ತ ದೇಶ ಮಾಡುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಈ ವೇಳೆ ನಾಗರೀಕರು, ತಜ್ಞರು ಸೇರಿದಂತೆ ಆ ಪ್ರದೇಶದವರು ಭಾಗಿಯಾಗಿದ್ದರು. ಈ ಸಮಯದಲ್ಲಿ ಸ್ಥಳಿಯರೆಲ್ಲಾ ಕೇಳಿದ ಒಂದೇ ಪ್ರಶ್ನೆಯೆಂದರೆ ನೀರು, ಹಾಲು ಅಥವಾ ದ್ರವ ರೂಪದಲ್ಲಿರುವ ವಸ್ತುಗಳನ್ನು ಪಡೆಯಲು ಏನು ಮಾಡಬೇಕೆಂದು. ಈ ಬಗ್ಗೆ ಅಲ್ಲಿನ ಜನ ಕಳವಳ ವ್ಯಕ್ತ ಪಡಿಸಿದರು. ಆಗ ರೂಪುಗೊಂಡಿದ್ದೇ ಹಾಲಿನ ಎಟಿಎಂ” ಎಂದು ಹೇಳುತ್ತಾರೆ
ಒಡಿಶಾದ ಗಂಜಾಂ ಪ್ರದೇಶದಲ್ಲಿ ಹಾಲಿನ ಪ್ಯಾಕೇಟ್‌ಗಳ ಬದಲಿಗೆ ಹಾಲಿನ ಎಟಿಎಂ ಪರಿಚಯಿಸಲಾಗಿದೆ. ಹಾಲಿನ ಪ್ಲಾಸ್ಟಿಕ್ ಚೀಲದ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಒಡಿಷಾದ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳೊಂದಿಗೆ ಕೈಜೋಡಿಸಿ ಎಟಿಎಂಗಳಲ್ಲಿ ಹಾಲು ಮಾರಾಟವನ್ನು ಶುರುಮಾಡಿದೆ. ಹಾಲಿನ ಗ್ರಾಹಕರು ಮನೆಯಿಂದ ಪಾತ್ರೆಗಳನ್ನು ತಂದು ಎಟಿಎಂ ಮಷಿನ್‌ನಲ್ಲಿ ಹಣ ಹಾಕಿ ಹಾಲನ್ನು ಪಡೆಯಬಹುದಾಗಿದೆ. ಈ ಪರಿಸರ ಮತ್ತು ಗ್ರಾಹಕ ಸ್ನೇಹಿ ಯೋಜನೆಯನ್ನು ಗ್ರೇಟರ್ ಗಂಜಾಂ ಗಜಪತಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮತ್ತು ಟಾಟಾ ಸ್ಟೀಲ್ ಸಹಯೋಗದೊಂದಿಗೆ ಈ ಜಿಲ್ಲಾಧಿಕಾರಿ ಅಮೃತ ಕುಲಂ ಜಾರಿಗೆ ತಂದಿದ್ದಾರೆ, ವರದಿ ಎನ್‌ಡಿಟಿವಿ.
500 ಲೀಟರ್ ಹಾಲು ಸಂಗ್ರಹ ಸಾಮರ್ಥ್ಯ ಹೊಂದಿರುವ ಎಟಿಎಂನಲ್ಲಿ ಹಾಲು ಪೂರೈಸಲು 7,200 ಡೈರಿ ರೈತರೊಂದಿಗೆ ಸಹಕಾರಿ ಸಂಘಗಳು ಒಪ್ಪಂದ ಮಾಡಿಕೊಂಡಿವೆ. ಗ್ರಾಹಕರು ಕನಿಷ್ಠ 250 ಮಿ. ಲೀ ಹಾಲು ಖರೀಸಿಬಹುದಾಗಿದೆ. ಒಂದು ಲೀಟರ್ ಹಾಲಗೆ 40 ರೂ. ಹಾಗೂ ಕನಿಷ್ಠ 250 ಮಿ. ಲೀ. ಗೆ 10 ರೂ. ನಿಗದಿಪಡಿಸಲಾಗಿದೆ. ಟಾಟಾ ಸಮೂಹವು ತನ್ನ ಸಿಎಸ್‌ಆರ್ ನಿಧಿಯಡಿ 6 ಲಕ್ಷ ರೂ. ಹಣ ಒದಗಿಸಿದ್ದು, ಇದರಿಂದ ಜಿಲ್ಲೆಯ ಬೆರ್ಹಾಂಪುರದ ಗೇಟ್ ಬಜಾರ್ ಬಳಿ ಪಾಶ್ಚರೀಕರಿಸಿದ ಹಾಲಿನ ಎಟಿಎಂ ಸ್ಥಾಪಿಸಲಾಗಿದೆ.
ಈ ಹಾಲು ಎಟಿಎಂ ಅನ್ನು ಜುಲೈ ತಿಂಗಳಿನಲ್ಲಿ ಸ್ಥಾಪಿಸಲಾಗಿದೆ. ಈ ಯೋಜನೆಯನ್ನು ನಾಗರೀಕರು, ತಜ್ಞರು ಕೂಡ ಸ್ವಾಗತ ಮಾಡಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿದ್ದಾರೆ. ಈ ಯೋಜನೆ ವಲಸೆ ಕಾರ್ಮಿಕರು, ಹಿಂದುಳಿದ ವರ್ಗದವರಿಗೆ ಹೆಚ್ಚು ಅನುಕೂಲವಾಗುತ್ತಿದೆ, ಯಾವುದೇ ಸಮಯದಲ್ಲಾದರೂ ಹಣ ನೀಡಿ ಹಾವನ್ನು ಪಾತ್ರೆಗಳಲ್ಲಿ ಪಡೆಯಬಹುದಾಗಿದೆ. ನಿತ್ಯ ಈ ಹಾಲು ಎಟಿಂನಿಂದ ಸುಮಾರು 300 ಲೀಟರ್ ಪಾಶ್ಚರೀಕರಿಸಿದ ಹಾಲು ವಿತರಣೆ ಆಗುತ್ತಿದೆ.
ಎನ್‌ಡಿಟಿವಿ ಜೊತೆ ಮಾತನಾಡುತ್ತಾ ಜಿಲ್ಲಾಧಿಕಾರಿ ಅಮೃತ ಕುಲಂ,
“ಹಾಲಿನ ಎಟಿಎಂ ಗಳಲ್ಲಿ ಶುದ್ಧತೆ ಹಾಗೂ ನೈರ್ಮಲ್ಯತೆಯನ್ನು ಕಾಪಾಡುತ್ತೇವೆ. ಇದರಿಂದ ನಾಗರೀಕರು, ಶಾಲಾ ಮಕ್ಕಳು ಹಾಲನ್ನು ಸ್ವೀಕಾರ ಮಾಡುತ್ತಾರೆ. ಈ ಮೊದಲು ಜಿಲ್ಲೆಯಲ್ಲಿ ಉತ್ಪಾದಿಸಲಾದ ಹಾಲನ್ನು ಪ್ಯಾಕೇಜಿಂಗ್ ಉದ್ದೇಶದಿಂದ ಜಿಲ್ಲೆಯಿಂದ ಹೊರ ಕಳಿಸಲಾಗುತ್ತಿತ್ತು. ಅಲ್ಲಿ ಪ್ಯಾಕಿಂಗ್ ವೇಳೆ ಹಾಲಿನಲ್ಲಿ ಮಿಶ್ರಣವಾಗುತ್ತಿತ್ತು. ಆದರೆ ಇದೀಗ ಇಲ್ಲಿಯೇ ಹಾಲು ಉತ್ಪತ್ತಿಯಾಗಿ, ಇಲ್ಲಿಯೇ ಮಾರಾಟವಾಗುದರಿಂದ ಹಾಲು ಮಿಶ್ರಣವಾಗುವುದನ್ನು ತಡೆಯಬಹುದಾಗಿದೆ” ಎನ್ನುತ್ತಾರೆ.
ಸದ್ಯ ಈ ಪ್ರದೇಶದಲ್ಲಿ ಇನ್ನು ಹೆಚ್ಚಿನ ಹಾಲು ಎಟಿಎಂಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಎಟಿಂಎಮ್‌ಗಾಗಿ ಜಾಗವನ್ನು ನಿರ್ಧರಿಸಲಾಗಿದೆ.
ಈ ಹಾಲಿನ ಎಟಿಎಂಗಳನ್ನು ಆಸ್ಪತ್ರೆ ಶಾಲಾ ಕಾಲೇಜು, ವೈದ್ಯಕೀಯ ಕಾಲೇಜುಗಳ ಮುಂದೆ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಸುಲಭವಾಗಿ ಹಾಗೂ ಸ್ವಚ್ಛತೆಯಿಂದ ಕೂಡಿರುವ ಪೌಷ್ಟಿಕಾಂಶುವುಳ್ಳ ಹಾಲು ದೊರೆಯಬೇಕಾಗಿದೆ. ಜೊತೆಗೆ ಅಪಾರ ಪ್ರಮಾಣದ ಪ್ಲಾಸ್ಟಿಕ್ ಅನ್ನು ಕೊನೆಗೊಳಿಸಬಹುದಾಗಿದೆ, ವರದಿ ದಿ ಲಾಜಿಕಲ್ ಇಂಡಿಯಾ.
ಒಟ್ಟಿ ನಲ್ಲಿ ಪ್ಲಾಸ್ಟಿಕ್ ನಿಷೇಧವಾದರೆ ದ್ರವ ರೂಪದ ವಸ್ತುಗಳಿಗೆ ಪರ್ಯಾಯ ವ್ಯವಸ್ಥೆ ಏನು ಎನ್ನುವವರಿಗೆ ಒಡಿಶಾ ಜಿಲ್ಲಾಡಳಿತ ಉತ್ತರ ನೀಡಿದೆ. ಇದೇ ರೀತಿ ದ್ರವ ರೂಪದ ವಸ್ತುಗಳಿಗೆ ಇಂಥಹ ಯಂತ್ರಗಳನ್ನು ಅಳವಡಿಸಿದರೆ ಪ್ಲಾಸ್ಟಿಕ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿದೆ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.