ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿದ ಉಡುಪಿ ಜಿಲ್ಲೆಯ ಸರಕಾರಿ ಶಾಲೆಯ ಶಿಕ್ಷಕರ ನ್ಯಾಪಿಕಿನ್ ವಿಲೇವಾರಿ ಘಟಕ
ತಮ್ಮ ಮಗಳು ಋತುಸ್ರಾವದ ಸಂಧರ್ಭದಲ್ಲಿ ಶಾಲೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ತಾನು ಅನುಭವಿಸುವ ಕಷ್ಟವನ್ನು ಮನೆಯಲ್ಲಿ ಹೇಳಿಕೊಂಡಾಗ, ಇದು ತನ್ನಮಗಳೊಬ್ಬಳ ನೋವಲ್ಲಾ, ಎಲ್ಲಾ ಹೆಣ್ಣುಮಕ್ಕಳು ಎದುರಿಸುತ್ತುರಿವ ಸಮಸ್ಯೆ ಎಂದು ಅರಿತು, ಉತ್ತಮವಾದ ಪರಿಸರಸ್ನೇಹಿ ಪರಿಹಾರೋಪಾಯದೊಂದಿಗೆ ನ್ಯಾಪಿಕಿನ್ ವಿಲೇವಾರಿ ಘಟಕವನ್ನು ಪ್ರಾರಂಭಿಸಿದ್ದಾರೆ ಶಿಕ್ಷಕ ಶ್ರೀಕಾಂತ್ ವಿ.
ಪ್ರತಿಯೊಂದು ಹೆಣ್ಣುಮಗುವಿನ ಜೀವನದಲ್ಲಿ ಆಕೆ ತನ್ನ ಬಾಲ್ಯವನ್ನು ಕಳೆದು ಯವ್ವನಕ್ಕೆ ಕಾಲಿಡುವಾಗ ಋತುಮತಿಯಾಗಿ ದೈಹಿಕವಾಗಿ ಮಾತ್ತು ಮಾನಸಿಕವಾಗಿ ಹೊಸ ಬದುಕಿಗೆ ಸಿದ್ದತೆ ನಡೆಸುತ್ತಾಳೆ. ಆದರೆ ಇಂದು ಅದೆಷ್ಟೋ ಶಾಲೆಗಳಲ್ಲಿ ಸರಿಯಾದ ಶೌಚಾಲಯ ಇಲ್ಲದೆ ಮತ್ತು ನ್ಯಾಪಿಕಿನ್ ಬದಲಾವಣೆಗಾಗಿ ಸರಿಯಾಗಿ ವ್ಯವಸ್ಥೆ ಇಲ್ಲದೆ, ವಿದ್ಯಾರ್ಥಿನಿಯರು ಪಡುವ ಬವಣೆ ಹೇಳತೀರದು.
ಈಗ ನಾವು ಹೇಳಹೊರಟಿರುವುದು ತಮ್ಮ ಮಗಳು ಋತುಸ್ರಾವದ ಸಂಧರ್ಭದಲ್ಲಿ ಶಾಲೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ತಾನು ಅನುಭವಿಸುವ ಕಷ್ಟವನ್ನು ಮನೆಯಲ್ಲಿ ಹೇಳಿಕೊಂಡಾಗ, ಇದು ತನ್ನಮಗಳೊಬ್ಬಳ ನೋವಲ್ಲಾ, ಎಲ್ಲಾ ಹೆಣ್ಣುಮಕ್ಕಳು ಎದುರಿಸುತ್ತುರಿವ ಸಮಸ್ಯೆ ಎಂದು ಅರಿತು, ಉತ್ತಮವಾದ ಪರಿಸರಸ್ನೇಹಿ ಪರಿಹಾರೋಪಾಯದೊಂದಿಗೆ ಇಂದು ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ನ್ಯಾಪಿಕಿನ್ ವಿಲೇವಾರಿ ಘಟಕವನ್ನು ಪ್ರಾರಂಭಿಸುತ್ತಿರುವ ಕುಂದಾಪುರ ದ ಪ್ಯಾಡ್ ಮ್ಯಾನ್ ಎಂದೇ ಪ್ರಸಿದ್ಧರಾದ ಶ್ರೀಕಾಂತ್ ವಿ ಅವರ ಬಗ್ಗೆ.
ಕುಂದಾಪುರದ ವಡೇರ್ ಹೋಬಳಿಯ ನಿವಾಸಿ ಹಾಗೂ ಸರಕಾರಿ ಫ್ರೌಢಶಾಲೆ ಬಸ್ರುರು ಇಲ್ಲಿಯ ಗಣಿತ ಶಿಕ್ಷಕರಾಗಿರುವ ಶ್ರೀಕಾಂತ್ ವಿ, ಮೂರು ವರ್ಷದ ಕೆಳಗೆ ತಮ್ಮ ಮಗಳು ಋತುಸ್ರಾವದ ಸಮಯದಲ್ಲಿ ತಾನು ಶಾಲೆಯಲ್ಲಿ ನ್ಯಾಪಿಕಿನ್ ಬದಲಿಸಲು ಸರಿಯಾದ ವ್ಯವಸ್ಥೆ ಇಲ್ಲದೆ ಪಡುತ್ತಿರುವ ಕಷ್ಟವನ್ನು ತಂದೆಯ ಬಳಿ ಹೇಳಿಕೊಂಡಾಗ, ಶ್ರೀಕಾಂತ್ ವಿ ಮೊದಲಿಗೆ ತಮ್ಮ ಸರಕಾರಿ ಫ್ರೌಢಶಾಲೆ ಬಸ್ರುರು ಇಲ್ಲಿಯೇ ವಿದ್ಯಾರ್ಥಿಗಳ ಹೆತ್ತವರ ಸಹಕಾರದಿಂದ ಪ್ರಾಯೋಗಿಕವಾಗಿ ಒಂದು ನ್ಯಾಪಿಕಿನ್ ಎಸೆಯಲು ಹೊಸವಿಧಾನವನ್ನು ಆರಂಭಿಸಿದರು.
"ನೂರಾರು ಹೆಣ್ಣುಮಕ್ಕಳು ಇರುವ ಶಾಲಾ ಕಾಲೇಜುಗಳಲ್ಲಿ ನ್ಯಾಪಿಕಿನ್ ಎಸೆಯುವುದು ಒಂದು ಸಮಸ್ಯೆಯಾಗಿದೆ. ನ್ಯಾಪಿಕಿನ್ ಬರ್ನರ್ ಇದ್ದರೂ ಅದು ವಿದ್ಯುತ್ ಸಂಪರ್ಕ ಇಲ್ಲದೆ ಕಾರ್ಯನಿರ್ವಹಿಸುವುದಿಲ್ಲಾ, ಮಾತ್ರವಲ್ಲದೆ ಕೆಟ್ಟು ಕೂತರೆ ರಿಪೇರಿಗೆ ಸಮಯ ಹಿಡಿಯುತ್ತದೆ, ಟಾಯ್ಲೆಟ್ ಪ್ಲಶ್ ಗೆ ಹಾಕಿದ್ರೆ ಅದು ಬ್ಲಾಕ್ ಆಗುತ್ತದೆ, ಡಸ್ಟ್ ಬಿನ್ ವ್ಯವಸ್ಥೆ ಎಲ್ಲೆಡೆ ಇರುವುದಿಲ್ಲಾ. ಈ ಹಿನ್ನಲೆಯಲ್ಲಿ ನಾನು ಈ ಹೊಸ ವಿಧಾನದಲ್ಲಿ ಈ ಎಲ್ಲಾ ಸಮಸ್ಯೆಗೆ ಸುಲಭವಾಗಿ ಪರಿಹಾರವನ್ನು ಕಂಡು ಹಿಡಿದಿದ್ದೇನೆ," ಎನ್ನುತ್ತಾರೆ ಶ್ರೀಕಾಂತ್ ವಿ.
ಏನಿದು ಹೊಸ ವಿಧಾನ..??
ಹೆಣ್ಣುಮ್ಮಕ್ಕಳ ಶೌಚಾಲಯದ ಗೋಡೆಗೆ ಸುಮಾರು 8 ಇಂಚಿನ ರಂಧ್ರಕೊರೆದು ಅದಕ್ಕೆ ಕೆಳಮುಖವಾಗಿ ಪೈಪ್ ಅಳವಡಿಸಿ ಅದನ್ನು ಹೊರಗಿರುವ 4 ಅಡಿ ಎತ್ತರ ಹಾಗೂ 4 ಅಡಿ ಉದ್ದದ ಕಾಂಕ್ರೀಟ್ ರಿಂಗ್‌ಗಳನ್ನು ಬಳಸಿ ನಿರ್ಮಿಸಿದ ಗುಂಡಿಗೆ ಸಂಪರ್ಕಿಸುವುದು. ಈ ಗುಂಡಿ ತುಂಬಲು ಸುಮಾರು 4-5ವರ್ಷ ಬೇಕಾಗುತ್ತದೆ ಮತ್ತು ತಿಂಗಳಿಗೊಮ್ಮೆ ಬ್ಲೀಚಿಂಗ್ ಪೌಡರ್ ಮತ್ತು ನೀರಿನ ಮಿಶ್ರಣವನ್ನು ಸಿಂಪಡಿಸಿದರೆ, ಪ್ಲಾಸ್ಟಿಕ್ ಬಿಟ್ಟು ಉಳಿದದ್ದೆಲ್ಲಾ ಕರಗಿಹೋಗುತ್ತದೆ.
ಹೆಣ್ಣುಮ್ಮಕ್ಕಳು ಶೌಚಾಲಯದ ಒಳಗೆ ರಂಧ್ರಕ್ಕೆ ಪ್ಯಾಡ್ ಅನ್ನು ಎಸೆದು ತಿಂಗಳಿಗೊಮ್ಮೆ ಬ್ಲೀಚಿಂಗ್ ಪೌಡರ್ ಮತ್ತು ನೀರಿನ ಮಿಶ್ರಣವನ್ನು ಸಿಂಪಡಿಸಿದರೆ ಆಯಿತು. ಇದೊಂದು ಅತ್ಯಂತ ಸುಲಭವಾಗಿ ಬಳಸಬಹುದಾದ ಮತ್ತು ಸಮಯವನ್ನು ಹಾಗೂ ಶುಚಿತ್ವವನ್ನು ಕಾಪಾಡುವುದರೊಂದಿಗೆ ಪರಿಸರಸ್ನೇಹಿ ವಿಧಾನವು ಆಗಿದೆ.
"ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರ ಸಲಹೆಯ ಮೇರೆಗೆ ನಾವು ಇಂದು ಉಳಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರೆಯೆಲ್ಲಿಯೂ ಡ೦ಪ್ ಮಾಡದೆ, ಪಂಚಾಯತಿಯ ಮೂಲಕ ನೇರವಾಗಿ ಸಿಮೆಂಟ್ ತಯಾರಿಕಾ ಕೇಂದ್ರಕ್ಕೆ ಕಳಿಸಿಕೊಡುತ್ತಿದ್ದೇವೆ," ಎಂದು ಶ್ರೀಕಾಂತ್ ಯುವರ್ ಸ್ಟೋರಿಗೆ ಹೇಳಿದ್ದಾರೆ.
ಉಡುಪಿಯಲ್ಲಿ ಎಲ್ಲೆಲ್ಲಿ…??
ಬಸ್ರುರು, ಮಡಮಕ್ಕಿ, ಮುದ್ರಾಡಿ, ಹಾಲಾಡಿ, ಬೈಂದೂರು, ಬಿದ್ಕಲ್ ಕಟ್ಟೆ, ಕೊಕ್ಕರ್ನೆ, ಮಣಿಪಾಲ, ಮೊದಲಾದ 34 ಕಡೆಗಳಲ್ಲಿ ಈ ಘಟವನ್ನು ವಿವಿಧ ಶಾಲಾ ಕಾಲೇಜುಗಳಲ್ಲಿ ಸ್ಥಾಪಿಸಿದ್ದಾರೆ. ಒಂದು ಘಟಕದ ನಿರ್ಮಾಣಕ್ಕೆ ಸುಮಾರು 8 ರಿಂದ 10 ಸಾವಿರ ಖರ್ಚು ತಗಲುತ್ತಿದ್ದು, ಶ್ರೀಕಾಂತ್ ತಾವೇ ಖುದ್ದಾಗಿ ಹಲವು ಶಾಲೆಗಳಿಗೆ ಭೇಟಿನೀಡಿ ಮಾಹಿತಿ ನೀಡುತ್ತಿದ್ದಾರೆ.
ನಮ್ಮೊಂದಿಗೆ ಮಾತನಾಡುತ್ತಾ, "ನಾನು ನನ್ನ ಸೇವೆಗೆ ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ, ಕೇವಲ ಇದರ ನಿರ್ಮಾಣಕ್ಕೆ ತಗಲುವ ಖರ್ಚನ್ನು ಮಾತ್ರ ಶಾಲೆ ಅಥವಾ ಸಂಸ್ಥೆಗೆ ಭರಿಸುವಂತೆ ಕೇಳುತ್ತೇನೆ, ಹಲವಾರು ಕಡೆಗಳಿಂದ ಬೇಡಿಕೆ ಬರುತ್ತಿದೆ ಆದರೆ 10 ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆ ಮುಗಿದ ನಂತರ ಮುಂದಿನ ಕೆಲಸಕ್ಕೆ ಅಣಿಯಾಗುತ್ತೇನೆ," ಎಂದರು.
ವಿಜ್ಞಾನ ಮೇಳದಲ್ಲಿ ಇವರದ್ದೇ ಕಲರವ
ತುಮಕೂರಿನಲ್ಲಿ ನಡೆದ ವಿಜ್ಞಾನ ಮೇಳದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ, ಬೆಳಗಾವಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಕೊಯಮುತ್ತೂರಿನಲ್ಲಿ ನಡೆಯುವ ವಲಯ ಮಟ್ಟಕ್ಕೆ ಶ್ರೀಕಾಂತ್ ಅವರ ಈ ಮಾಡೆಲ್ ಆಯ್ಕೆಯಾಗಿದೆ.
ರಾಷ್ಟ್ರಮಟ್ಟದವರೆಗೆ ಗಮನ ಸೆಳೆದ ಕಾರಣ ಈ ಘಟಕದ ವಿನ್ಯಾಸಕ್ಕೆ ಪೇಟೆಂಟ್ ಪಡೆಯಲು ಅರ್ಜಿ ಹಾಕಿದ್ದೇನೆ. ಪುತ್ರಿ ಸಿವಿಲ್ ಇಂಜಿನಿಯರ್ ಆಗಿದ್ದು ಇದನ್ನು ಮತ್ತಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದಾಳೆ ಎಂದರು.
ಕರ್ನಾಟಕದ ಶಿಕ್ಷಣ ಮಂತ್ರಿಗಳಿಗೆ ತಮ್ಮ ಘಟಕದ ಬಗ್ಗೆ ಮಾಹಿತಿಯನ್ನು ಸಲ್ಲಿಸಿದ ಶ್ರೀಕಾಂತ್ ಈ ಮೂಲಕ ಸರಕಾರದ ಗಮನ ಸೆಳೆದು ಎಲ್ಲ ಶಾಲೆಗಳಲ್ಲೂ ಕಡ್ಡಾಯವಾಗಿ ಈ ರೀತಿಯ ಘಟಕದ ನಿರ್ಮಾಣದ ಕುರಿತು ನಿರ್ಧಾರಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮುಂದಿನ ಯೋಜನೆ
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 34 ಶಾಲೆಗಳಲ್ಲಿ ತಮ್ಮ ಘಟಕಗಳನ್ನು ಆರಂಭಿಸಿದ ಶ್ರೀಕಾಂತ್ ಇದನ್ನು ನಾಡಿನ ಎಲ್ಲಾ ಶಾಲೆಗಳು ಅಳವಡಿಸಿಕೊಂಡರೆ ಉತ್ತಮ ಎಂದು ಅಭಿಪ್ರಾಯ ಪಡುತ್ತಾರೆ. ಮುಂದುವರೆದು,
"ಮುಖ್ಯವಾಗಿ ಪ್ರೌಢಶಾಲೆಯಲ್ಲಿ ವಿಧ್ಯಾರ್ಥಿನಿಯರು ಸಾಮಾನ್ಯವಾಗಿ ಮೊದಲಿಗೆ ಋತುಮತಿಯಾಗುತ್ತಾರೆ, ಆದ್ದರಿಂದ ಎಲ್ಲಾ ಫ್ರೌಢಶಾಲೆಗಳು ಇದನ್ನು ಅಳವಡಿಸಿಕೊಳ್ಳಬೇಕು, ಮಾತ್ರವಲ್ಲದೆ, ಪ್ರತಿಯೊಂದು ಶಾಲಾ ಕಾಲೇಜು, ದೂರ ದೂರಕ್ಕೆ ಪ್ರಯಾಣ ಮಾಡುವಾಗ ಸ್ತ್ರೀಯರಿಗೆ ಅನುಕೂಲವಾಗಲು ಎಲ್ಲಾ ಬಸ್ ಸ್ಟ್ಯಾಂಡ್ ನ ಶೌಚಾಲಯಗಳಲ್ಲಿ ಮತ್ತು ಲೇಡೀಸ್ ಹಾಸ್ಟೆಲ್‌ಗಳಲ್ಲಿ ಇದರ ಸ್ಥಾಪನೆ ಅಗತ್ಯವಾಗಿದೆ," ಎನ್ನುತ್ತಾರೆ.
ಹೆಚ್ಚಿನ ವಿದ್ಯಾರ್ಥಿನಿಯರು ಸರಿಯಾದ ನ್ಯಾಪಿಕಿನ್ ವಿಲೇವಾರಿ ಸಮಸ್ಯೆ ಇರುವುದರಿಂದ, ಆ ಸಮಯದಲ್ಲಿ ಶಾಲೆಗೆ ಹಾಜಾರಾಗದೆ ಮನೆಯಲ್ಲೇ ಉಳಿಯುವ ಮತ್ತು ಕೆಲವೊಮ್ಮೆ ಒಂದು ಮುಂಜಾನೆಯಿಂದ ಸಂಜೆಯ ತನಕ ಒಂದೇ ನ್ಯಾಪಿಕಿನ್ ಅನ್ನು ಧರಿಸಿ ತಮ್ಮ ಆರೋಗ್ಯಕ್ಕೆ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗೂ ಶ್ರೀಕಾಂತ್ ಅವರ ಈ ಯೋಜನೆ ಇತಿ:ಶ್ರಿ ಹಾಡಿದೆ.
ತಮ್ಮ ಶಾಲೆಯಲ್ಲೋ, ಸಂಸ್ಥೆಯಲ್ಲೋ ಈ ರೀತಿಯ ಘಟಕವನ್ನು ಹೊಂದಬಹಸುವವರ ಕರೆಗೆ ಬಹಳ ಖುಷಿಯಿಂದ ಸ್ಪಂದಿಸುವ ಶ್ರೀಕಾಂತ್, ಓರ್ವ ಉತ್ತಮ ಪರಿಸರ ಪ್ರೇಮಿಯು ಹೌದು. ಸುಮಾರು 500ಕ್ಕೂ ಹೆಚ್ಚು ಗಿಡಗಳನ್ನು ಕೊಡುಕೊಂಡು ಅದನ್ನು ವಿದ್ಯಾರ್ಥಿಗಳಿಗೆ ಹಂಚಿ ಮತ್ತು ತಾವು ಎಲ್ಲೆಡೆ ನಟ್ಟು ಹಸಿರಿನ ಸಂಪತ್ತನ್ನು ವೃದ್ಧಿಸಲು ಪಣತೊಟ್ಟಿದ್ದಾರೆ. ಇವರ ಈ ಸಮಾಜಮುಖಿ ಕೆಲಸ ಇನ್ನಷ್ಟು ಮತ್ತಷ್ಟು ವಿಸ್ತರಿಸಲಿ ಎಂದು ಆಶಿಸೋಣ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.