ಹಾಳಾದ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಪುನರ್ ನಿರ್ಮಾಣ ಮಾಡುತ್ತಿರುವ ಬೆಂಗಳೂರಿನ ವಯೋವೃದ್ಧರು

80 ರ ಆಸುಪಾಸಿನಲ್ಲಿರುವ ಪದ್ಮನಾಭ ಅರಕಲಗೂಡ್ ಹಾಗೂ ವೆಂಕಟಸುಬ್ಬುರಾವ್ ಇದುವರೆಗೂ ಬೆಂಗಳೂರಿನ 3 ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ಮರು ನಿರ್ಮಾಣ ಮಾಡಿದ್ದಾರೆ.

ಹಾಳಾದ ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಪುನರ್ ನಿರ್ಮಾಣ ಮಾಡುತ್ತಿರುವ ಬೆಂಗಳೂರಿನ ವಯೋವೃದ್ಧರು

Tuesday October 29, 2019,

3 min Read

ಮರ ಮುಪ್ಪಾದರೂ ಹುಳಿ ಮುಪ್ಪೇ ಎಂಬ ಗಾದೆ ಸಾಕಷ್ಟು ಬಾರಿ ಅನೇಕರಿಗೆ ಅನ್ವಯವಾಗುತ್ತಿರುತ್ತದೆ. ಇದೀಗ ಈ ಗಾದೆ ಮಾತಿಗನಂತಿದ್ದಾರೆ ಬೆಂಗಳೂರಿನ 83 ವರ್ಷದ ಪದ್ಮನಾಭ ಅರಕಲಗೂಡ್ ಹಾಗೂ 81 ವರ್ಷದ ವೆಂಕಟಸುಬ್ಬುರಾವ್. ಇಂತಹ ಇಳಿ ವಯಸ್ಸಿನಲ್ಲಿ ನಡೆದಾಡುವುದೇ ಕಷ್ಟ. ಆದರೆ ಈ ಇಬ್ಬರು ವಯೋವೃದ್ಧರು ಯುವಕರಿಗಿಂತ ಕಡಿಮೆ ಇಲ್ಲವೇನೋ ಎಂಬಂತೆ ಸಾಮಾಜಿಕ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


q

ಪದ್ಮನಾಭ ಅರಕಲಗೂಡ್ ಹಾಗೂ ವೆಂಕಟಸುಬ್ಬುರಾವ್


ಹೌದು, ಐಟಿಸಿ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷರಾಗಿ ನಿವೃತ್ತಿಯಾಗಿರುವ ಪದ್ಮನಾಭ ಅರಕಲಗೂಡ್ ಹಾಗೂ ಬೆಂಗಳೂರಿನ ರಿಸರ್ವ್ ಬ್ಯಾಂಕ್‌ನಿಂದ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ವೆಂಕಟ ಸುಬ್ಬುರಾವ್ ಮೊದಲಿನಿಂದಲೂ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆರೆ ಜಾಗ ಉಳಿಸುವುದು, ಅವುಗಳನ್ನು ಭೂಗಳ್ಳರಿಂದ ಕಾಪಾಡುವುದು ಹೀಗೆ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸದ್ಯ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಗಳ ನಿರ್ಮಾಣ ಕಾರ್ಯದಲ್ಲಿ ಈ ಜೋಡಿ ಕಾರ್ಯಪ್ರವೃತ್ತರಾಗಿದ್ದಾರೆ. ಬೆಂಗಳೂರಿನ ಮೂರು ಸರ್ಕಾರಿ ಶಾಲೆಗಳ ಶೌಚಾಲಯಗಳ ಮರು ನಿರ್ಮಾಣ ಕೈಗೆತ್ತಿಕೊಂಡಿದ್ದು, ಅದರಲ್ಲಿ ಎರಡು ಶೌಚಾಲಯಗಳ ನಿರ್ಮಾಣ ಕಾರ್ಯ ಈಗಾಗಾಲೇ ಮುಗಿದಿದೆ.


ಈ ಯೋಚನೆ ಹುಟ್ಟಿದ ಬಗ್ಗೆ ಯುವರ್‌ ಸ್ಟೋರಿ ಕನ್ನಡದೊಂದಿಗೆ ಮಾತನಾಡಿದ ಪದ್ಮನಾಭ ಅರಕಲಗೂಡ್‌,


“ನನ್ನ ಹಾಗೂ ವೆಂಕಟಸುಬ್ಬುರಾವ್ ರ ಸ್ನೇಹ ಸುಮಾರು ವರ್ಷಗಳದ್ದು. ಪ್ರತಿ ದಿನ ಭೇಟಿಯಾಗುತ್ತೇವೆ. ವಾಕಿಂಗ್ ಹೋಗುತ್ತೇವೆ. ಹೀಗೆ ಒಮ್ಮೆ ಭೈರಸಂದ್ರ ರಸ್ತೆಯಲ್ಲಿ ನಾನು ನನ್ನ ಸ್ನೇಹಿತ ಹೋಗುತ್ತಿರುವಾಗ ಆ ರಸ್ತೆಯಲ್ಲಿದ್ದ ಭೈರಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯದಿಂದ ಕೆಟ್ಟ ವಾಸನೆ ನಮಗೆ ಬಂತು. ಇದು ಸರ್ಕಾರಿ ಶಾಲೆ, ಇದನ್ನು ಸ್ವಚ್ಛವಾಗಿಟ್ಟುಕೊಂಡಿಲ್ವಾ? ಎಂಬ ಆಲೋಚನೆ ಬಂದು ಆ ಶಾಲೆಯ ಒಳಗೆ ಹೋದಾಗ ನಿಜಕ್ಕೂ ಆಶ್ಚರ್ಯ ಹಾಗೂ ಬೇಸರವಾಯ್ತು. ಏಕೆಂದರೆ ಈ ಶೌಚಾಲಯ ಅಷ್ಟು ಕೆಟ್ಟದಾಗಿದ್ದು ಹಾಗೂ ದುರ್ವಾಸನೆಯಿಂದ ಕೂಡಿತ್ತು. ಅಷ್ಟೆ ಅಲ್ಲ ಆ ಶೌಚಾಲಯಕ್ಕೆ ಬಾಗಿಲು ಕೂಡ ಇರಲಿಲ್ಲ. ಸುಮಾರು 150 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಒಬ್ಬ ವಿದ್ಯಾರ್ಥಿನಿ ಹೊರಗೆ ನಿಂತು ಇನ್ನೊಬ್ಬ ವಿದ್ಯಾರ್ಥಿನಿ ಒಳಗೆ ಹೋಗಿ ಬರಬೇಕಿತ್ತು” ಎನ್ನುತ್ತಾರೆ.


ಈ ಘಟನೆ ನೋಡಿದ ನಂತರ ಇಬ್ಬರು ಯೋಚನೆ ಮಾಡಿ ಶೌಚಾಲಯವನ್ನು ಮರು ನಿರ್ಮಾನ ಮಾಡೋಣ ಎಂದು ತೀರ್ಮಾನ ಮಾಡುತ್ತಾರೆ. ಆದರೆ ಇವರ ಬಳಿ ಹಣದ ಕೊರತೆ ಇತ್ತು. ಆ ವೇಳೆ ವಾಟ್ಸಾಪ್‌ನಲ್ಲಿ ಅವರ ಸ್ನೇಹಿತರು ಕುಟುಂಬಸ್ಥರಿಗೆ ಒಂದು ಮನವಿ ಪತ್ರವನ್ನು ರವಾನೆ ಮಾಡುತ್ತಾರೆ. ಅಲ್ಲಿದ್ದ ಪರಿಸ್ಥಿತಿಯನ್ನು ವಿವರಿಸುತ್ತಾರೆ. ಇದಾದ ನಂತರ ಸ್ನೇಹಿತರು ಸೇರಿದಂತೆ ಸಾಕಷ್ಟು ಮಂದಿ ಇವರಿಗೆ ಹಣದ ನೆರವು ನೀಡುತ್ತಾರೆ.


ಪದ್ಮನಾಭ ಅರಕಲಗೂಡ್ ಹಾಗೂ ಅವರ ಸ್ನೇಹಿತರು ನೀಡಿದ ಮನವಿ ಪತ್ರ




ಹಣ ಬಂದ ನಂತರ ಕಾಮಗಾರಿ ಪ್ರಾರಂಭಿಸುವ ಮೊದಲು ಗಣೇಶ ದೇವಸ್ಥಾನದಲಿ ಪೂಜೆ ಮಾಡಿಸುವಾಗ ಅರ್ಚಕರು ಪೂಜೆ ಯಾರ ಹೆಸರಲ್ಲಿ ಎಂದು ಕೇಳುತ್ತಾರೆ. ಆಗ ಶೌಚಾಲಯದ ಹೆಸರು ಎಂದಾಗ ಅಲ್ಲಿನ ಅರ್ಚಕರು ಜೋರಾಗಿ ನಕ್ಕು ಘಟನೆ ಬಗ್ಗೆ ಕೇಳುತ್ತಾರೆ. ಘಟನೆ ವಿವರಿಸಿದ ನಂತರ ಅರ್ಚಕರೂ ಕೂಡ 31 ಸಾವಿರ ಹಣವನ್ನು ಕಾಮಗಾರಿಗಾಗಿ ನೀಡಿದ್ದನ್ನು ನೆನೆಯುತ್ತಾರೆ ಪದ್ಮನಾಭರವರು.


ಕಾಮಗಾರಿ ಪ್ರಾರಂಭವಾಗಿ ಮೂರು ಶೌಚಾಲಗಳ ನಿರ್ಮಾಣ ಕಾರ್ಯ ಮುಗಿಯುತ್ತದೆ. ಸುಮಾರು 1,50,000 ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ. ಆದರೆ ಇವರ ಬಳಿ ಇನ್ನು ಹೆಚ್ಚಿನ ಹಣ ಉಳಿಯುತ್ತದೆ. ಅದರಲ್ಲಿ ಆ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಬೆಂಚ್, ಕುರ್ಚಿ, ಟೇಬಲ್‌ಗಳನ್ನು ನೀಡಲಾಗುತ್ತಿದೆ. ಸದ್ಯ ಈ ಶೌಚಾಲಯ ನಿರ್ವಹಣೆಯನ್ನು ರೋಟರಿ ಇನ್ನರ್ ವೀಲ್ ಕ್ಲಬ್ ನೋಡಿಕೊಳ್ಳುತ್ತಿದೆ.


ಭೈರಸಂದ್ರದಲ್ಲಿ ನಿರ್ಮಿಸಿದ ಮೂರು ಶೌಚಾಲಯಗಳು


ಯುವರ್‌ ಸ್ಟೋರಿ ಕನ್ನಡದ ಜೊತೆ ಮಾತನಾಡುತ್ತಾ ಪದ್ಮನಾಭ ಅರಕಲಗೂಡ್,


“ಈ ವರದಿ ಪತ್ರಿಕೆಯೊಂದರಲ್ಲಿ ಬಂದ ನಂತರ ನಮಗೆ ಮತ್ತೆರಡು ಶಾಲೆಗಳಿಂದ ಮನವಿ ಬಂತು. ಜೊತೆಗೆ ಹಣದ ನೆರವು ಕೂಡ ಹೆಚ್ಚಾಯಿತು. ಸಾರಕ್ಕಿ ಹಾಗೂ ಬಂಡೆಪಾಳ್ಯದ ಎರಡು ಸರ್ಕಾರಿ ಶಾಲೆಗಳಲ್ಲೂ ಇದೇ ಪರಿಸ್ಥಿತಿಯನ್ನು ಮಕ್ಕಳು ಅನುಭವಿಸುತ್ತಿದ್ದರು. ಅಲ್ಲಿಗೂ ನಾವು ಭೇಟಿ ನೀಡಿದೆವು. ಅಲ್ಲಿ ಶೌಚಾಲಯ ನಿರ್ಮಿಸಲಯ ಸುಮಾರು 65 ರಿಂದ 70 ಸಾವಿರ ಹಣ ವ್ಯಯಮಾಡಬೇಕಿತ್ತು,” ಎನ್ನುತ್ತಾರೆ.

ಸಮಸ್ಯೆ ಬಗ್ಗೆ ಅರಿತ ನಾವು ಮತ್ತೊಮ್ಮೆ ನಮ್ಮ ವಾಟ್ಸ್ ಅಪ್ ಗ್ರೂಪ್‌ನಲ್ಲಿ ಮನವಿ ಪತ್ರ ಕಳುಹಿಸಿದೆವು. ಮತ್ತೆ ಹಣದ ನೆರವು ಹರಿದು ಬಂತು. ವಿಶೇಷ ಅಂದರೆ ಯುಎಸ್‌ನಿಂದಲೂ ಹಣ ಕಳುಹಿಸಿದ್ದರು. ಹಾಗಾಗಿ ಸಾರಕ್ಕಿಯಲ್ಲಿನ ಸರ್ಕಾರಿ ಶಾಲೆಯ ಶೌಚಾಲಯ ಮರು ನಿರ್ಮಾಣ ಮಾಡಿ ಇತ್ತೀಚೆಗೆ ಉದ್ಘಾಟನೆ ಮಾಡಿದ್ದೇವೆ, ಸದ್ಯ ಬಂಡೆಪಾಳ್ಯದಲ್ಲಿರುವ ಸರ್ಕಾರಿ ಶಾಲೆಯ ಶೌಚಾಲಯ ಕಾಮಗಾರಿ ಮುಂದುವರೆದಿದೆ.


ಕಾಮಗಾರಿಗೂ ಮುನ್ನ ಹಾಗೂ ಕಾಮಗಾರಿಯಾದ ನಂತರ ಶೌಚಾಲಯ




ಇನ್ನು ಸ್ಥಳೀಯರು ಈ ಶೌಚಾಲಯಗಳನ್ನು ಉಪಯೋಗಿಸದ ರೀತಿಯಲ್ಲಿ ಉಕ್ಕಿನ ಬಾಗಿಲು ಹಾಗೂ ಬ್ಯಾರಿಗೇಟ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಇಬ್ಬರು ಸಾಮಾಜಿಕ ಕೆಲಸಗಾರರು ಕಾಮಗಾರಿಗೆ ಉಪಯೋಗಿಸಿದ ಎಲ್ಲಾ ಹಣದ ವಿವರವನ್ನು ಅಂದರೆ ಎಷ್ಟು ವೆಚ್ಚವಾಯಿತು, ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂಬುದನ್ನು ಟಿಪ್ಪಣಿ ಮಾಡಿತ್ತಿದ್ದಾರೆ.


ಅವರ ಪ್ರಕಾರ ಬೆಂಗಳೂರಿನಲ್ಲಿ ಶೌಚಾಲಯ ಸಮಸ್ಯೆಯನ್ನು ಎದುರಿಸುತ್ತಿರುವ ಅನೇಕ ಶಾಲೆಗಳಿವೆ. ಇಂಥಹ ಶಾಲೆಗಳ ಶೌಚಾಲಯಗಳನ್ನು ಮರು ನಿರ್ಮಾಣ ಮಾಡುವ ಆಸಕ್ತಿ ಇದೆ. ಹಾಗಾಗಿ ಶಾಲೆಗಳ ಬಗ್ಗೆ ಮಾಹಿತಿ ನೀಡಿದರೆ ಸರಿ ಪರಿಸುವ ಕೆಲಸ ಮಾಡುತ್ತಾರೆ. ಹಾಗೆಯೇ ಯಾರಾದರೂ ಸ್ವಯಂ ಸೇವಕರು ಹಣದ ವ್ಯವಸ್ಥೆಯ ನೆರವು ಕೂಡ ಮಾಡಬೇಕಿದೆ.


ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಪದ್ಮನಾಭ- 9448956783/[email protected] ಮತ್ತು

ವೆಂಕಟ ಸುಬ್ಬುರಾವ್-9591987899/[email protected].


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.