ಪ್ಲ್ಯಾಸ್ಟಿಕ್ ಬಾಟಲಿ ಮತ್ತು ರಬ್ಬರ್ ಟೈರ್ ಬಳಸಿ ತಮ್ಮ ಸರ್ಕಾರಿ ಬಂಗಲೆಯಲ್ಲಿ ಸುಂದರ ಉದ್ಯಾನ ನಿರ್ಮಿಸಿದ್ದಾರೆ ಈ ಅರಣ್ಯಾಧಿಕಾರಿ
ಪಶ್ಚಿಮ ಬಂಗಾಳದ ಮಿಡ್ನಾಪುರ ವಿಭಾಗದಡಿ ಬರುವ ಪಿರಕಟಾ ವಲಯದ ಅರಣ್ಯಾಧಿಕಾರಿ ಪಾಪಾನ್ ಮೊಹಂತಾರವರು, ಪ್ಲ್ಯಾಸ್ಟಿಕ್ ಮತ್ತು ರಬ್ಬರ್ ಟೈರ್‌ಗಳನ್ನು ಬಳಸಿಕೊಂಡು, ಅದರಲ್ಲಿ ಗಿಡಗಳನ್ನು ಬೆಳೆಸಿ ತಮ್ಮ ಸರ್ಕಾರಿ ಬಂಗಲೆಯಲ್ಲಿ ಸುಂದರ ಗಾರ್ಡನ್ ನಿರ್ಮಿಸುವ ವಿನೂತನ ಪ್ರಯೋಗದ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.
ರೆಡ್ಯೂಸ್, ರೀಯೂಸ್, ರಿಸೈಕಲ್ ಸೂತ್ರ ಅಳವಡಿಸಿಕೊಂಡು ನಾವು ಶ್ರದ್ಧೆಯಿಂದ ಪಾಲಿಸಿದರೆ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಕಡಿಮೆ ಮಾಡಬಹುದು. ಪಶ್ಚಿಮ ಬಂಗಾಳದ ಮಿಡ್ನಾಪುರ ವಿಭಾಗದ ವಲಯ ಅರಣ್ಯಾಧಿಕಾರಿ ಪಾಪಾನ್ ಮೊಹಂತಾರವರು ಈ ಸೂತ್ರ ಅಳವಡಿಸಿಕೊಂಡು, ತ್ಯಾಜ್ಯ ಪ್ಲ್ಯಾಸ್ಟಿಕ್ ಬಾಟಲಿ ಮತ್ತು ರಬ್ಬರ್ ಟೈರ್‌ಗಳನ್ನು ಬಳಸಿ ತಮ್ಮ ಕಚೇರಿಯಲ್ಲಿ ಸುಂದರ ಹೂದೋಟ ನಿರ್ಮಿಸಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಾಪನ್‌ರವರು ಈ ವಿಭಾಗಕ್ಕೆ ವರ್ಗಾವಣೆಯಾದ ಸಮಯವನ್ನು ನೆನಪಿಸಿಕೊಂಡು ಹೀಗೆ ಹೇಳುತ್ತಾರೆ,
"ನಾನು ಮೊದಲು ಇಲ್ಲಿ ವರ್ಗಾವಣೆಯಾದಾಗ ಇಲ್ಲಿ ವಿಪರೀತ ತ್ಯಾಜ್ಯವಿತ್ತು. ನಾನು ಈ ಪ್ರದೇಶವನ್ನು ಸುಂದರವಾಗಿಡಲು ಬಯಸಿದ್ದೆ, ನಂತರ ಆ ದಿಸೆಯಲ್ಲಿ ಕೆಲಸ ಮಾಡಿದೆ. ಜನರು ಈ ಸ್ಥಳಕ್ಕೆ ಬರಲು ಇಷ್ಟಪಡುವಂತಾದಮೇಲೆ ನನಗೆ ಮಾಡಿದ್ದು ಸಾರ್ಥಕವೆನಿಸಿತು," ದಿ ಬೆಟರ್ ಇಂಡಿಯಾ ವರದಿ
ಮೊಹಂತಾರವರು ತಮ್ಮ ಸ್ನೇಹಿತರು ಮತ್ತು ನೆರೆಹೊರೆಯವರಿಂದ ತ್ಯಾಜ್ಯ ಪ್ಲ್ಯಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಗಿಡಗಳನ್ನು ಬೆಳೆಸಲು ಪ್ರಾರಂಭಿಸುತ್ತಾರೆ. ಸಣ್ಣದಾಗಿ ಪ್ರಾರಂಭವಾದ ಪ್ರಯೋಗ ಇಂದು ಅವರ ಬಂಗಲೆಯ ಮುಂಬಾಗದ ಅಂಗಳವನ್ನು ಸಂಪೂರ್ಣವಾಗಿ ಆವರಿಸಿದೆ.
ಇವರ ಪ್ರಾಯೋಗಿಕ ವಿಧಾನದಿಂದ ಸ್ಪೂರ್ತಿಪಡೆದ ಸ್ಥಳೀಯರು ಮತ್ತು ಕೆಲವು ಶಾಲೆಗಳಲ್ಲಿ ಈ ರೀತಿಯ ಉದ್ಯಾನವನ್ನು ಬೆಳೆಸಲು ಮುಂದಾಗಿದ್ದಾರೆ.
ಪಾಪಾನ್ ಮೊಹಂತಾರವರು ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಾ ಎನ್‌ಡಿಟಿವಿ ಗೆ ಹೀಗೆ ಹೇಳುತ್ತಾರೆ,
“ನಾನು ಇಲ್ಲಿಗೆ ವರ್ಗಾವಣೆಗೊಂಡು ನಾಲ್ಕು ವರ್ಷವಾಯಿತು. ಚಳಿಗಾಲದಲ್ಲಿ ಪೆಟುನಿಯಾ ಗಿಡವನ್ನು ನೆಡುತ್ತೇನೆ, ಇದೀಗ ಕಾಲೋಚಿತ ಹೂವುಗಳಿವೆ. ಈ ಉದ್ಯಾನವನ್ನು ನೋಡಿ ಹತ್ತಿರದಲ್ಲಿರುವ ಶಾಲೆಗಳೂ ಈ ವಿಧಾನವನ್ನು ಅನುಸರಿಸುತ್ತಿವೆ. ನೆರೆಯವರಾದ ಸಿ ಆರ್ ಪಿ ಎಫ್ ಜವಾನರೂ ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಜನರು ನಮ್ಮಿಂದ ಸ್ಪೂರ್ತಿ ಪಡೆದು ಏನನ್ನಾದರೂ ಒಳ್ಳೆಯ ಕೆಲಸವನ್ನು ಮಾಡಿದಾಗ ನಮಗೆ ಸಂತೋಷವೆನಿಸುತ್ತದೆ."
ALSO READ
ಮೊಹಂತಾರವರು ಉದ್ಯಾನವನವನ್ನು ನಿರ್ಮಿಸಲು ಸುಮಾರು 1,000 ಕ್ಕೂ ಹೆಚ್ಚು ತ್ಯಾಜ್ಯ ಪ್ಲ್ಯಾಸ್ಟಿಕ್ ಬಾಟಲಿಗಳನ್ನು ಮತ್ತು ರಬ್ಬರ್ ಟೈರ್‌ಗಳನ್ನು ಬಳಸಿಕೊಂಡಿದ್ದಾರೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಕತ್ತರಿಸಿ, ಅವುಗಳಲ್ಲಿ ಗಿಡಗಳನ್ನು ಬೆಳೆಸಿ, ಹಗ್ಗದ ಸಹಾಯದಿಂದ ಮನೆಯ ಮುಂದೆ ನೇತು ಹಾಕಿದ್ದಾರೆ. ತಮ್ಮ ಬಂಗಲೆಯ ಮುಂಬಾಗದ ಅಂಗಳದಲ್ಲಿ ಖಾಲಿಯಿರುವ ಪ್ರದೇಶಗಳಲ್ಲೆಲ್ಲ ಸುಂದರ ಗಿಡಗಳನ್ನು ನೆಟ್ಟು ತಮ್ಮ ಪರಿಸರ ಕಾಳಜಿಯಿಂದಾಗಿ ಇತರರಿಗೆ ಮಾದರಿಯಾಗಿದ್ದಾರೆ.
ಎನ್‌ಡಿಟಿವಿಯೊಂದಿಗೆ ಮುಂದುವರೆದು ಮಾತನಾಡುತ್ತಾ ಪಾಪನ್ ಮೊಹಂತಾರವರು ಹೀಗೆ ಹೇಳುತ್ತಾರೆ,
"ಭವಿಷ್ಯದಲ್ಲಿ ಭೂಮಿಯನ್ನು ಸಂರಕ್ಷಿಸಲು ಮತ್ತು ಪ್ಲ್ಯಾಸ್ಟಿಕ್ ಮರುಬಳಕೆ ಮಾಡಲು ನಾವು ಈ ಪ್ರಯೋಗದಿಂದ ಕಲಿಯಬಹುದಾಗಿದೆ. ಈ ಸಂದೇಶವನ್ನು ಶಾಲೆ ಅಥವಾ ಇತರ ಮಾಧ್ಯಮಗಳ ಮೂಲಕ ಹರಡಲು ಸಾಧ್ಯವಾದರೆ ಅದು ದೊಡ್ಡ ಚಳವಳಿಯಾಗಬಹುದೆಂದು ನಾನು ಭಾವಿಸುತ್ತೇನೆ. ಹತ್ತಿರದಲ್ಲಿರುವ ಇತರ ನರ್ಸರಿಗಳು ಮತ್ತು ಅರಣ್ಯ ಕಚೇರಿಗಳು ಸಹ ಈ ವಿಧಾನವನ್ನು ಅನುಸರಿಸುತ್ತವೆ ಎಂದು ನಾನು ಭಾವಿಸುತ್ತೇನೆ, ಸಮೀಪವಿರುವ ಶಾಲೆಗಳಲ್ಲಿಯೂ ಈ ವಿಧಾನವು ಪರಿಣಾಮ ಬೀರುತ್ತದೆ."
ಮೊಮಂತಾರವರು ಬಳಸಿದ ಮತ್ತು ಮುರಿದ ಮಣ್ಣಿನ ಮಡಿಕೆಗಳನ್ನೂ ಮರುಬಳಕೆ ಮಾಡುತ್ತಾರೆ, ಮತ್ತು ಅವುಗಳಲ್ಲಿ ಗಿಡಗಳನ್ನು ಬೆಳೆಸುತ್ತಾರೆ. ಸಸಿಗಳನ್ನು ನೆಡಲು ಕೆಲವನ್ನು ಸಿಹಿ ಅಂಗಡಿ ಮಾಲಿಕರಿಂದ ಖರೀದಿಸಿದ್ದಾರೆ. ಇವರ ಉದ್ಯಾನವು ನಗರದ ಸಾಕಷ್ಟು ಜನರನ್ನು ಆಕರ್ಷಿಸಿದೆ. ಅವರು ನಿರ್ಮಿಸಿರುವ ಉದ್ಯಾನಕ್ಕೆ ಭೇಟಿ ನೀಡಿದವರಿಗೆ ವಿವಿಧ ಬಗೆಯ ಹೂವಿನ ಸಸ್ಯಗಳ ದರ್ಶನ ಭಾಗ್ಯ ಸಿಗಲಿದೆ, ಇವರ ಕೆಲಸವು ಸ್ಥಳೀಯರು ಮತ್ತು ಹಲವಾರು ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ತನ್ನ ಸುತ್ತ ಮುತ್ತಲಿನ ಪ್ರದೇಶವನ್ನು ತನ್ನ ಮನೆಯಂತೆ ಸುಂದರ ಮತ್ತು ಸ್ವಚ್ಛವಾಗಿಡಲು ಬಯಸುವ ಮೊಹಂತಾರವರು, ತಮ್ಮ ಸುತ್ತಲೂ ಹಸಿರು ಆವರಿಸಿದ್ದರೆ ಶಾಂತಿಯಿಂದ ಇರಬಹುದೆಂಬ ನಂಬಿಕೆಯನ್ನು ಹೊಂದಿದ್ದಾರೆ.
ಪ್ಲ್ಯಾಸ್ಟಿಕ್‌ನ್ನು ಜಗತ್ತು ಇಂದು ಒಂದು ಬಗೆಯ ತಲೆ ನೋವಾಗಿ ಭಾವಿಸಿದೆ. ಹೀಗಿರುವಾಗ ಅದನ್ನು ಸರಿಯಾದ ಮಾರ್ಗದಲ್ಲಿ ಮರುಬಳಕೆ ಮಾಡುವ ಮೂಲಕ, ಪರಿಸರಕ್ಕೆ ಪೂರಕ ವಾತಾವರಣ ಕಲ್ಪಿಸುವ ಜತೆ, ಸುಂದರ ತಾಣವನ್ನಾಗಿ ಪರಿವರ್ತಿಸುವ ವಿಧಾನವನ್ನು ಜನರಿಗೆ ತಿಳಿಸಿಕೊಟ್ಟ ಪಾಪನ್ ಮೊಹಂತಾರವರ ಕೌಶಲ್ಯಕ್ಕೆ ಹ್ಯಾಟ್ಸ್ಅಪ್ ಹೇಳಲೇಬೇಕು.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.