ಸರ್ಕಾರಿ ಶಾಲೆಯಲ್ಲಿ ಚಿತ್ರ ಬಿಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಪಾಠ ಮಾಡುತ್ತಿರುವ ಈ ಯುವಕ
ಬೆಂಗಳೂರಿನ ಹದಿನೆಂಟು ವರ್ಷದ ಅಂಕಿತ್ ರತಕೊಂಡ ತಮ್ಮ ವಾರಾತ್ಯಂದ ಬಿಡುವಿನ ವೇಳೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಕುರಿತಾಗಿ ಚಿತ್ರಗಳನ್ನು ಬಿಡಿಸುತ್ತಾರೆ.
ರಜೆ ಬಂದರೆ ಸಾಕು, ಅಬ್ಬಾ ವಾರದಿಂದ ಕೆಲಸ ಮಾಡಿ ಮಾಡಿ ಸುಸ್ತಾಗಿರುತ್ತದೆ, ಅವತ್ತು ಬೇರೆನೂ ಮಾಡುವುದೇ ಬೇಡ, ಆರಾಮಾಗಿ ಸಮಯ ಕಳೆಯೋಣ ಎಂದುಕೊಳ್ಳುವವರೆ ಜಾಸ್ತಿ, ಸಾಮಾಜಿಕ ಕಾರ್ಯಗಳಿಗಾಗಿ ತಮ್ಮ ಸಮಯವನ್ನು ಮೀಸಲಿಟ್ಟವರು ತುಂಬಾ ಕಡಿಮೆ. ಯಾರಾದರೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ ಅಂತವರನ್ನು ಅಪಹಾಸ್ಯ ಮಾಡುವುದೇ ಹೆಚ್ಚು.
ಅದರಲ್ಲಿಯೂ ಯುವಜನತೆ ಮೊಬೈಲ್, ಪಬ್ಜಿಗಳಲ್ಲಿಯೆ ಕಾಲ ಕಳೆಯುವಾಗ, ಇಲ್ಲೊಬ್ಬ ಬೆಂಗಳೂರಿನ ಯುವಕನೊಬ್ಬ ತಾನು ವಿಭಿನ್ನ ಎಂದು ತನ್ನ ಕಾರ್ಯದ ಮೂಲಕ ತೋರಿಸುತ್ತಿದ್ದಾನೆ. ವಾರಾಂತ್ಯವನ್ನು ಸಾಮಾಜಿಕ ಕಾರ್ಯಕ್ಕೆ ಮೀಸಲಿಟ್ಟಿದ್ದಾನೆ. ಶಾಲಾ ಮಕ್ಕಳಿಗೆ ಶೈಕ್ಷಣಿಕ ವಿಷಯಗಳು ಸುಲಭವಾಗಿ ತಿಳಿಯುವಂತೆ ಮಾಡಲು ಅದನ್ನು ಕಲೆಯ ಮೂಲಕ ಸಾಕಾರಗೊಳಿಸುತ್ತಿದ್ದಾರೆ. ಅದೇ "ದಿ ಟೀಚಿಂಗ್ ಬ್ರಷ್" ಯೋಜನೆ.
ಬೆಂಗಳೂರಿನ ಗ್ರೀನ್‌ವುಡ್ ಹೈಸ್ಕೂಲ್ ನ 12ನೇ ತರಗತಿ ವಿದ್ಯಾರ್ಥಿಯಾದ ಅಂಕಿತ್ ರತಕೊಂಡ ಹಾಗೂ ಆತನ ಸಹಪಾಠಿಗಳು ಸರ್ಕಾರಿ ಶಾಲೆಗಳ ಗೋಡೆಗಳು ಮತ್ತಷ್ಟು ವರ್ಣಮಯವಾಗಿ ಕಾಣಲಿ ಹಾಗೂ ಶೈಕ್ಷಣಿಕ ವಿಷಯಗಳ ಕುರಿತು ವಿದ್ಯಾರ್ಥಿಗಳು ಅರಿಯಲಿ ಎಂದು "ದಿ ಟೀಚಿಂಗ್ ಬ್ರಷ್" ಎಂಬ ವಿನೂತನ ಯೋಜನೆಯೊಂದನ್ನು ಪ್ರಾರಂಭಿಸಿದರು.
ಈಗಾಗಲೇ ಈ ವಿದ್ಯಾರ್ಥಿಗಳ ಈ ತಂಡವು ಸರ್ಕಾರಿ ಸಿಂಧಿ ಮಾದರಿ ಪ್ರಾಥಮಿಕ ಶಾಲೆ, ಇಮ್ಮಡಿಹಳ್ಳಿ ಸರ್ಕಾರಿ ಶಾಲೆ, ಗುಂಜೂರು ಸರ್ಕಾರಿ ಪ್ರೌಢಶಾಲೆಯ ಗೋಡೆಗಳನ್ನು ವರ್ಣರಂಜಿತಗೊಳಿಸಿದ್ದಾರೆ, ವರದಿ ಎಡೆಕ್ಸ್ ಲೈವ್.
ಈ ಯೋಜನೆಯ ಮುಖ್ಯ ಆಶಯ, ಸರ್ಕಾರಿ ಶಾಲೆಗಳನ್ನು ವರ್ಣಮಯವಾಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಕಲೆಯ ಮೂಲಕ ಶಿಕ್ಷಣವನ್ನು ಆನಂದಿಸುವಂತೆ ಮಾಡುವುದು.
ಈ ಸಂದರ್ಭದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ತಂಡದೊಂದಿಗೆ ಸೇರಿ, ಚಿತ್ರಕಲೆಯನ್ನು ಕಲಿಯುವುದರ ಜೊತೆಗೆ, ತಮ್ಮ ಶಾಲೆಯ ಬದಲಾವಣೆಯನ್ನು ಕಂಡು ತುಂಬಾ ಖುಷಿಪಟ್ಟರು.
ಈ "ಟೀಚಿಂಗ್ ಬ್ರಷ್" ಪರಿಕಲ್ಪನೆಯ ಕುರಿತಾಗಿ ದಿ ಹ್ಯಾನ್ಸ್ ಇಂಡಿಯಾದೊಂದಿಗೆ ಮಾತನಾಡಿದ ಅಂಕಿತ್,
"ನಾನು ಕಲೆಯನ್ನು ತುಂಬಾ ಇಷ್ಟಪಡುತ್ತೇನೆ. ಅದನ್ನು ಬದಲಾವಣೆಗೆಗಾಗಿ ಬಳಸಲು ನಾನು ಬಯಸುತ್ತೇನೆ. ನಾನು ಸರ್ಕಾರಿ ಶಾಲೆಯ ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸುತ್ತಿದ್ದೆ. ಇಂದು ಆ ಶಾಲೆಗಳು ಎಷ್ಟೊಂದು ಕಡಿಮೆಯಾಗುತ್ತಿವೆ. ಎರಡನ್ನೂ ಒಟ್ಟಿಗೆ ಸೇರಿಸಿದಾಗ "ಟೀಚಿಂಗ್ ಬ್ರಷ್" ಪರಿಕಲ್ಪನೆ ಜಾರಿಗೆ ಬಂದಿತು. ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಣವನ್ನು ಹೇಳಿ ಕೊಡುವಂತಹ ಸಮಾನ ಮನಸ್ಕರ ಗುಂಪೊಂದನ್ನು ರಚಿಸಿದೆ," ಎನ್ನುತ್ತಾರೆ.
ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚುವ ಮೊದಲು, ಆ ಗೋಡೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಗೋಡೆಗಳು ಸಮವಾಗಿಲ್ಲ, ಅಸಮವಾಗಿರುವುದು ನಮ್ಮನ್ನು ಕೆಲವೊಂದು ಬಾರಿ ಹೆಚ್ಚಿನ ಕೆಲಸಕ್ಕೆ ಈಡು ಮಾಡುತ್ತದೆ. ನಂತರ ಪ್ರೈಮರ್ ಕೋಟ್ ಅನ್ನು ಲೇಪಿಸಲಾಗುತ್ತದೆ. ತದನಂತರ ಪ್ರಾಂಶುಪಾಲರೊಂದಿಗೆ ಮೊದಲೇ ಚರ್ಚಿಸಿದ ವಿಷಯಗಳ ಮೇಲೆ ಚಿತ್ರ ಬಿಡಿಸಲಾಗುತ್ತದೆ.
ಯೋಜನೆಯು ಜಾರಿಯಾಗಲು ವಸ್ತುಗಳು, ಪ್ರಾಯೋಜಕರು ಮತ್ತು ಸ್ವಯಂಸೇವಕರು ಮುಖ್ಯವಾಗಿ ಬೇಕು. ರೋಟರಿ ಸಂಸ್ಥೆಯ ಸಹಾಯದಿಂದ ಬೇಕಾಗುವ ಬಣ್ಣ ಹಾಗೂ ಪ್ರಾಯೋಜಕರು ಸುಲಭವಾಗಿ ಸಿಕ್ಕಿತು. ಆದರೆ ಸ್ವಯಂಸೇವಕರನ್ನು ಹುಡುಕುವುದು ಬಹಳ ಕಷ್ಟವಾಯಿತು. ಆದ್ದರಿಂದ ಆಗ ನನ್ನ ಸಹಪಾಠಿಗಳ ಸಹಾಯ ಕೋರಿದೆ. ಅಂತಿಮವಾಗಿ ನಾವು ಇಪ್ಪತ್ತು ಜನರು ಸಿದ್ಧರಾದೆವು ಎಂದೆನ್ನುತ್ತಾರೆ ಅಂಕಿತ್.
ಈ ಪರಿಕಲ್ಪನೆಯ ಕುರಿತು ಗ್ರೀನ್‌ವುಡ್ ಇಂಟರ್‌ನ್ಯಾಷನಲ್ ಸ್ಕೂಲ್ ಟ್ರಸ್ಟಿ ನಿರು ಅಗರ್ವಾಲ್,
"ವಿದ್ಯಾರ್ಥಿಗಳು ಸಾಮಾಜಿಕ ಮನೋಭಾವವನ್ನು ಹೊಂದಿರುವುದು ಬಹಳ ಮುಖ್ಯ. ಅಂಕಿತ್ ಅವರ ಈ ಪರಿಕಲ್ಪನೆ ಹಾಗೂ ಕಾರ್ಯವನ್ನು ತುಂಬಾ ಪ್ರಶಂಸಿಸುತ್ತೆನೆ. ಅವರು ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ" ಎಂದರು, ವರದಿ ದಿ ಹ್ಯಾನ್ಸ್ ಇಂಡಿಯಾ.
"ನನ್ನ ಕನಸು ಈಗ ನಗರದಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳನ್ನು ವರ್ಣಮಯಗೊಳಿಸುವುದು ಹಾಗೂ ವಿದ್ಯಾರ್ಥಿಗಳು ಅದರ ಮೂಲಕ ಶಿಕ್ಷಣವನ್ನು ಆನಂದಿಸಬೇಕೆಂಬುದಾಗಿದೆ. ಈ ಯೋಜನೆ ಮುಂದುವರೆಯುತ್ತದೆ. ಅಂತಿಮವಾಗಿ ದೇಶದ ಎಲ್ಲಾ ಸರ್ಕಾರಿ ಶಾಲೆಗಳ ಗೋಡೆಗಳು ವರ್ಣರಂಜಿತವಾಗಿರುತ್ತವೆ," ಎನ್ನುವುದು ಅಂಕಿತ್ ರ ಕನಸು.
ಅಂಕಿತ್ ಅವರ ಈ ಕನಸು ನನಸಾಗಲಿ, ಸರ್ಕಾರಿ ಶಾಲೆ ಮಕ್ಕಳು ಕೂಡ ಸೃಜನಶೀಲತೆಯಿಂದ ಬೆಳೆಯಲಿ ಎಂಬುದಷ್ಟೇ ನಮ್ಮ ಹಾರೈಕೆ..!!
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.