ಗುಜರಿಯಲ್ಲಿದ್ದ ರೈಲುಬೋಗಿಯು ಶಾಲೆಯಾಗಿ ಮಾರ್ಪಾಟಾದಾಗ..!!

ಮೈಸೂರಿನ ಅಶೋಕಪುರಂನ ರೈಲ್ವೆ ಕಾರ್ಯಾಗಾರದ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಇದನ್ನು ಮನಗಂಡ ರೈಲ್ವೆ ಇಲಾಖೆ, ಹಳೆಯ ರೈಲು ಬೋಗಿಗಳಿಗೆ ಮರುರೂಪ ನೀಡಿ ಶಾಲಾ ಕಟ್ಟಡವನ್ನಾಗಿ ಪರಿವರ್ತಿಸಿದೆ.

ಗುಜರಿಯಲ್ಲಿದ್ದ ರೈಲುಬೋಗಿಯು ಶಾಲೆಯಾಗಿ ಮಾರ್ಪಾಟಾದಾಗ..!!

Tuesday January 14, 2020,

2 min Read

ಇಂದು ಸರ್ಕಾರವು ಶಾಲಾ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವುದಕ್ಕಾಗಿ ಅನೇಕ ಬಗೆಯ ಉಪಾಯಗಳನ್ನು ಮಾಡುತ್ತಿದೆ. ಅದರಲ್ಲಿ ಶಾಲೆಯನ್ನು ವಿಭಿನ್ನವಾಗಿ ರೈಲು, ಬಸ್‌ನಂತೆ ಅಲಂಕರಿಸಿ, ಶಾಲೆಯನ್ನು ವರ್ಣಮಯವಾಗಿಸಿ ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲಾಗುತ್ತದೆ. ಆದರೆ ರೈಲುಬೋಗಿಯೇ ಶಾಲೆಯಾದರೆ ಹೇಗಿರುತ್ತೆ?


ಶಾಲೆಯಾಗಿ ಪರಿವರ್ತನೆಗೊಂಡಿರುವ ರೈಲು ಬೋಗಿ


ಹೌದು, ರೈಲುಬೋಗಿಯೇ ಶಾಲೆಯಾಗಿ ಮಾರ್ಪಾಟನ್ನು ಹೊಂದಿದೆ. ಇದು ಸಾಧ್ಯವಾಗಿದ್ದು ಮೈಸೂರು ಜಿಲ್ಲೆಯ ಅಶೋಕಪುರಂನಲ್ಲಿ. ಅಶೋಕಪುರಂನ ರೈಲ್ವೆ ಕಾರ್ಯಾಗಾರದ ಬಳಿಯಲ್ಲಿರುವ ರೈಲ್ವೇ ಕಾಲೋನಿಯ ಸರ್ಕಾರಿ ಶಾಲೆಯ ಮಕ್ಕಳು ಇನ್ನೂ ರೈಲುಬೋಗಿಯಲ್ಲಿಯೆ ಪಾಠವನ್ನು ಕಲಿಯಲಿದ್ದಾರೆ.


ಶತಮಾನಗಳ ಇತಿಹಾಸವನ್ನು ಹೊಂದಿದ್ದ ಈ ಶಾಲಾ‌ ಕಟ್ಟಡವು ಇಂದು ಶಿಥಿಲಾವಸ್ಥೆಗೆ ತಲುಪಿದೆ. ಇದರಿಂದ ವಿದ್ಯಾರ್ಥಿಗಳು ಪಾಠ ಕೇಳದಂತಾಗಿದೆ. ಆಗ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಶಾಲೆಯಲ್ಲಿ ಪಾಠ ಮಾಡಬೇಡಿ ಎಂದು ಪ್ರಕಟಿಸಿತು. ಮುಂದೆ ಹೇಗೆ ಶಾಲೆಯನ್ನು ನಡೆಸುವುದು ಎಂದಾಗ ರೈಲ್ವೆ ಇಲಾಖೆಗೆ ಹೊಳೆದದ್ದೇ ಈ ಉಪಾಯ.


ಅಶೋಕಪುರಂ ರೈಲ್ವೆ ಕಾಲೋನಿಯ ಸರ್ಕಾರಿ ಶಾಲೆಯಲ್ಲಿ ಅರವತ್ತಕ್ಕೂ ಹೆಚ್ಚಿನ ಮಕ್ಕಳು 1ನೇ ತರಗತಿಯಿಂದ 7ನೇ ತರಗತಿಯವರೆಗೆ ಅಭ್ಯಸಿಸುತ್ತಿದ್ದು, ಇವರಿಗೆ ಸರಿಯಾದ ಶಾಲಾ ಕಟ್ಟಡವಿಲ್ಲ. ಆದ್ದರಿಂದ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಇದನ್ನು ಸರಿಯಾಗಿ ಬಗೆಹರಿಸಬೇಕೆಂದು ರೈಲ್ವೆ ಇಲಾಖೆಯು ರೈಲು ಬೋಗಿಯನ್ನೆ ಮರುಬಳಕೆ ಮಾಡಿ ಅದಕ್ಕೆ ವಿನೂತನ ರೂಪ ಕೊಡುವ ಮೂಲಕ ಶಾಲೆಯನ್ನಾಗಿ ಬದಲಾಯಿಸಿ ಜಾಗದ ಸಮಸ್ಯೆಯನ್ನು ನಿವಾರಿಸುವಂತೆ ಮಾಡಿದೆ.


ಇದರ ಕುರಿತಾಗಿ ಮಾತನಾಡಿದ ಅಶೋಕಪುರಂ ರೈಲ್ವೆ ವರ್ಕ್‌ಶಾಪ್ ವೆಲ‌್‌ಫೇರ್ ಇನ್ಸಪೆಕ್ಟರ್‌ ಜಿ.ರಂಗನಾಥ್‌ರವರು,


"ರೈಲು ಬೋಗಿಗಳು ಇಂತಿಷ್ಟು ಸಮಯ ಕಾರ್ಯ ನಿರ್ವಹಿಸಬೇಕೆಂದು ಇರುತ್ತದೆ. ಅದು ಮುಗಿದ ನಂತರ ಅದನ್ನು ಬಳಸುವುದಿಲ್ಲ. ಅದನ್ನು ಸ್ಕ್ಯಾಪ್‌ ಎಂದೇ ಪರಿಗಣಿಸಲಾಗುತ್ತದೆ. ಆಗಲೇ, ಇದನ್ನು ಮರುಬಳಕೆ ಮಾಡಿ ಮಕ್ಕಳಿಗೆ ಶಾಲೆಯನ್ನಾಗಿ ಪರಿವರ್ತಿಸಬಹುದಲ್ಲ ಎಂಬ ಆಲೋಚನೆಯೊಂದು ನಮ್ಮ ಚೀಪ್ ವರ್ಕ್‌ಶಾಪ್ ‌ಮ್ಯಾನೇಜರ್ ಆದ ಪಿ.ಶ್ರೀನಿವಾಸು ಅವರ ತಲೆಯಲ್ಲಿ ಹೊಳೆದಾಗ ಅದನ್ನು ತತಕ್ಷಣವೇ ಜಾರಿಗೆ ತರಲಾಯಿತು," ಎಂದರು.


ಹೇಗಿದ್ದ ಬೋಗಿ ಹೇಗಾಯ್ತು ಗೊತ್ತೆ

ಮೈಸೂರಿನ ರೈಲ್ವೆ ವರ್ಕ್‌ಶಾಪ್ ಎರಡು ಕಂಡೋಮ್ಡ್ ರೈಲು ಬೋಗಿಗಳನ್ನು ದತ್ತು ತೆಗೆದುಕೊಂಡು ಅದನ್ನು ಶಾಲೆಯನ್ನಾಗಿ ಮರುಪರಿವರ್ತಿಸಿದೆ. ಅವುಗಳನ್ನು ದುರಸ್ತಿಗೊಳಿಸಿ, ಶಾಲಾ ಕೊಠಡಿಗಳಂತೆ ವಿನ್ಯಾಸಗೊಳಿಸಿ, ಬಣ್ಣ-ಚಿತ್ತಾರದ ಮೂಲಕ ಶಾಲೆ ವಿಶಿಷ್ಟವಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.


ಒಳಾಂಗಣ ನೋಟ




ಒಂದೊಂದು ಬೋಗಿಗಳಲ್ಲಿ ಎರಡೆರಡು ತರಗತಿಗಳಂತೆ ನಾಲ್ಕು ತರಗತಿಗಳನ್ನಾಗಿ ವಿಂಗಡಿಸಿದ್ದು, ಒಂದು ಬೋಗಿಯಲ್ಲ ಏಕಕಾಲದಲ್ಲಿ ಮೂವತ್ತು ಮಕ್ಕಳು ಪಾಠವನ್ನು ಕೇಳಬಹುದಾಗಿದೆ. ಈ ರೈಲ್ವೆ ಶಾಲೆಯು ಇದೇ ತಿಂಗಳ 11ರಂದು ಉದ್ಘಾಟನೆಯಾಯಿತು.


ರೈಲ್ವೆ ಕಾರ್ಯಾಗಾರದಲ್ಲಿ ಗುಜರಿಗೆ ಹಾಕಲೆಂದು ಎತ್ತಿಟ್ಟಿದ್ದ ರೈಲ್ವೆ ಬೋಗಿಗೆ ಮರುರೂಪ ನೀಡಿ ಅದಕ್ಕೆ ಶಾಲಾ ಸಾಮಗ್ರಿಗಳನ್ನು ಅಳವಡಿಸಿತು. ಇದಕ್ಕಾಗಿ ರೈಲ್ವೆ ಇಲಾಖೆ ಸಿಬ್ಬಂದಿ ವರ್ಗ ಮೂರು ಕ್ರೌನ್‌‌ಗಳನ್ನು ಬಳಸಿ, ಎರಡು ರೈಲು ಬೋಗಿಗಳನ್ನು ಶಾಲೆಯ ಮುಂದೆ ಶಿಫ್ಟ್ ಮಾಡಿತು. ನಂತರ ಆ ಬೋಗಿಗಳಿಗೆ ಗುಣಮಟ್ಟದ ಪೈಂಟ್ ಮಾಡಲಾಯಿತು. ಬೋಗಿಯ ಹೊರಾಂಗಣ ಮತ್ತು ಒಳಾಂಗಣದೊಳಗೆ ವಿಜ್ಞಾನ, ಕನ್ನಡ, ಇಂಗ್ಲೀಷ್ ಅಕ್ಷರಗಳು, ಚಿತ್ರಗಳನ್ನು ಬಿಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಇದಕ್ಕಾಗಿ ರೈಲ್ವೆ ಸಿಬ್ಬಂದಿಯು ವ್ಯಯಿಸಿದ್ದು ಒಂದು ತಿಂಗಳ ಸಮಯವಷ್ಟೇ.


ಅಲ್ಲದೇ ಬೋಗಿಯೊಳಗೆ ಶಿಕ್ಷಕರ ಕೊಠಡಿಗಳು, ಫ್ಯಾನ್‌, ಲೈಟ್‌ಗಳನ್ನು ಅಳವಡಿಸಲಾಯಿತು. ಅಲ್ಲದೆ ಇದರಲ್ಲಿ ಬಯೋ ಟಾಯ್ಲೆಟ್ ವ್ಯವಸ್ಥೆಯನ್ನು ಮಾಡಲಾಗಿದೆ.


ಇದನ್ನು ಕಂಡ ಶಾಲಾ ಮಕ್ಕಳು ಮತ್ತಷ್ಟು ಹರುಷಗೊಂಡಿದ್ದಾರೆ. ಇಂದು ಚಾಲ್ತಿಯಲ್ಲಿರುವ ಸರ್ಕಾರಿ ಶಾಲೆಗಳೇ ಮುಚ್ಚುತ್ತಿರುವ ಸಂದರ್ಭದಲ್ಲಿ, ಶಾಲಾ ಕಟ್ಟಡ ಇಲ್ಲವೆಂಬ ಕೊರಗಿಗೆ ಪರ್ಯಾಯ ವ್ಯವಸ್ಥೆ ರೂಪಿಸಿ ಶಾಲೆ ಬಿಡಲು ಹೊರಟಿದ್ದ ಮಕ್ಕಳನ್ನು ಮರಳಿ‌‌ ಶಾಲೆಗೆ ಬರುವಂತೆ ಮಾಡಿದ ರೈಲ್ವೆ ಇಲಾಖೆಗೆ, ಅವರ ಪರಿಶ್ರಮಕ್ಕೆ ಒಂದು ಸಲಾಂ!!


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.