ಗಾಳಿಪಟದ ಮಾಂಜಾ ದಾರಕ್ಕೆ ಸಿಕ್ಕಿ ಸಾಯುವ ಪಕ್ಷಿಗಳನ್ನು ರಕ್ಷಿಸುತ್ತಿರುವ ವನ್ಯಜೀವಿ ಸಂರಕ್ಷಕ
ಸಂಕ್ರಾಂತಿಯ ಸಮಯದಲ್ಲಿ ಗಾಳಿಪಟ ಉತ್ಸವಕ್ಕೆ ರೆಕ್ಕೆ ಪುಕ್ಕಗಳನ್ನು ಕತ್ತರಿಸಿಕೊಂಡು ಪೆಟ್ಟು ತಿನ್ನುವ ಪಕ್ಷಿಗಳನ್ನು ರಕ್ಷಿಸುತ್ತಾ ಪರಿಸರ ಕಾರ್ಯಕರ್ತ ಮತ್ತು ಹೋಪ್ ಆಂಡ್ ಬಿಯಾಂಡ್ ಸಂಸ್ಥೆಯ ಸ್ಥಾಪಕ, ವನ್ಯಜೀವಿ ಸಂರಕ್ಷಣಾ ತಜ್ಞ ಡಾ. ಜಾಯ್ ಗಾರ್ಡ್ನರ್ ಪಕ್ಷಿಗಳ ಮೂಕ ವೇದನೆಗೆ ಧ್ವನಿಯಾಗುತ್ತಿದ್ದಾರೆ.
ಸಂಕ್ರಾಂತಿ ಸಂಭ್ರಮದ ಭಾಗವಾಗಿ ಗಾಳಿಪಟ ಹಾರಿಸುವ ಉತ್ಸವವು ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಮೊದಲಾದ ಭಾಗಗಳಲ್ಲಿ ನಡೆಯುತ್ತದೆ. ಗಾಜಿನ ಪುಡಿಯಿಂದ ತಯಾರಿಸಿದ ಮಾಂಜಾ ದಾರದ ಮೂಲಕ ಮುಂಜಾನೆಯಿಂದಲೇ ಜನರು ಗಾಳಿಪಟವನ್ನು ಬಾನಿಗೆ ಹಾರಿಬಿಟ್ಟು ಸಂಭ್ರಮದಿಂದ ಸಂಕ್ರಾಂತಿ ಆಚರಿಸುತ್ತಾರೆ.
ಆದರೆ ಬಾನು ಬಾನಡಿಗಳ ಆವಾಸ ಸ್ಥಾನ. ಗಾಜಿನ ತಂತಿಯ ಅತ್ಯಂತ ತೆಳುವಾದ ಈ ಗಾಳಿಪಟದ ಸೂತ್ರ ಪಕ್ಷಿಗಳ ಪಾಲಿಗೆ ಪ್ರಾಣಕಂಟಕವಾಗಿದೆ. ಅತ್ಯಂತ ಹರಿತವಾದ ಈ ಸೂತ್ರವು ಪಕ್ಷಿಗಳ ರೆಕ್ಕೆಯನ್ನ ಕತ್ತರಿಸುವುದಲ್ಲದೆ, ಅವುಗಳ ಜೀವಕ್ಕೆ ಸಂಚಕಾರವನ್ನು ತಂದಿದೆ.
ಒಂದೆಡೆಯಲ್ಲಿ ರಾಜಸ್ಥಾನದ ಜೈಪುರದಲ್ಲಿ ಜನರು ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿದ್ದರೆ, ಇನ್ನೊಂದೆಡೆಯಲ್ಲಿ ಪರಿಸರ ಕಾರ್ಯಕರ್ತ ಮತ್ತು ಹೋಪ್ ಆಂಡ್ ಬಿಯಾಂಡ್ ಸಂಸ್ಥೆಯ ಸ್ಥಾಪಕ, ವನ್ಯಜೀವಿ ಸಂರಕ್ಷಣಾ ತಜ್ಞ ಡಾ. ಜಾಯ್ ಗಾರ್ಡ್ನರ್ ಈ ಮೂಕ ವೇದನೆಗೆ ಧ್ವನಿಯಾಗುತ್ತಿದ್ದಾರೆ.
"ಸಂಕ್ರಾಂತಿ ನೀಡುವ ಹಬ್ಬವಾಗಿದೆ. ಹಬ್ಬವನ್ನು ಆಚರಿಸಲು, ನೀವು ಮಂಜಾ ಮತ್ತು ಗಾಳಿಪಟಗಳಿಗಾಗಿ ಖರ್ಚು ಮಾಡಿದ ಹಣವನ್ನು ಬಡವರಿಗೆ ಉಡುಗೊರೆಗಳನ್ನು ನೀಡಲು ಬಳಸಬಹುದು; ಅದು ನಿಜವಾದ ಹಬ್ಬವನ್ನು ಆಚರಿಸುವ ವಿಧಾನ. ನಾನು ಈ ಹಬ್ಬವನ್ನು ಪ್ರೀತಿಸುವಾಗ, ನನಗೆ ಬೇಸರವಾಗುವ ವಿಷಯವೆಂದರೆ ಗಾಳಿಪಟಗಳು. ಗಾಳಿಪಟಗಳನ್ನು ಹಾರಿಸುವುದು ಏಕೆ ಅಗತ್ಯ? ಗಾಳಿಪಟ ಹಾರಾಟವು ಯಾರ ಧಾರ್ಮಿಕ ಭಾವನೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ," ಎನ್ನುತ್ತಾರೆ ಗಾರ್ಡ್ನರ್.
ಹೋಪ್ ಆಂಡ್ ಬಿಯಾಂಡ್
ಮಕರ ಸಂಕ್ರಾಂತಿಯ ದಿನಕ್ಕೆ ಸಂಬಂದಿಸಿದಂತೆ ಮೂರು ದಿನಗಳ ಕಾಲ ಜರಗುವ ಈ ಗಾಳಿಪಟ ಉತ್ಸವ ಈ ವರ್ಷವೂ ಸಂಕ್ರಾಂತಿಯ ಹಿಂದಿನ ಮತ್ತು ನಂತರದ ದಿನ ಜರುಗಿತ್ತು. ಈ ಮೂರು ದಿನಗಳಲ್ಲಿ, ಹೋಪ್ ಆಂಡ್ ಬಿಯಾಂಡ್, ಪಾರಿವಾಳಗಳು ಸೇರಿದಂತೆ 350 ಕ್ಕೂ ಹೆಚ್ಚು ಪಕ್ಷಿಗಳನ್ನು ರಕ್ಷಿಸಿದೆ.
ಗಾರ್ಡ್ನರ್ ಮತ್ತು ಅವರ ತಂಡವು ಒಂದು ತಿಂಗಳ ಅವಧಿಯಲ್ಲಿ ಸುಮಾರು 700 ಪಕ್ಷಿಗಳನ್ನು ರಕ್ಷಿಸುತ್ತದೆ. ಇಂದು, ಸಂಸ್ಥೆಯು 40 ಕ್ಕೂ ಹೆಚ್ಚು ಸದಸ್ಯರನ್ನು ಮತ್ತು 100 ಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ. ಈ ವರ್ಷ, ಜೈಪುರದಾದ್ಯಂತ ಸುಮಾರು 1,000 ಗಾಳಿಪಟ ಹಾರುವ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಇದಲ್ಲದೆ, ಗಾಳಿಪಟ ಸಂಬಂಧಿತ ಅಪಘಾತಗಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸರ್ಕಾರ ಈಗಾಗಲೇ ಚೈನಾ ಮಾಂಜಾ ದಾರದ ಬಳಸುವುದನ್ನು ಜೈಪುರದಲ್ಲಿ ನಿಷೇಧಿಸಿದೆ. ಪ್ರಾಧಿಕಾರಗಳು ಹೆಚ್ಚಿನ ಪಕ್ಷಿಗಳು ಹಾರಾಡುವ ಸಮಯವಾದ ಮುಂಜಾನೆ ಮತ್ತು ಸಂಜಯಲ್ಲಿ ಗಾಳಿಪಟ ಹಾರಟದ ಮೇಲೆ ನಿಷೇಧ ಹೇರಿದೆ, ವರದಿ ದಿ ಹಿಂದೂ. ಆದರೂ ಈ ಎರಡು ಇನ್ನು ಚಾಲ್ತಿಯಲ್ಲಿರುವುದು ಕಣ್ಣ ಮುಂದಿರುವ ಸತ್ಯ.
ರಕ್ಷಿಸಿದ ನಂತರ…??
ಗಾಯಗೊಂಡ ಪಕ್ಷಿಗಳನ್ನು ಗುರುತಿಸಿದಾಗ, ಸ್ವಯಂಸೇವಕರು ಸಹಾಯ ಮಾಡಲು ಧಾವಿಸುತ್ತಾರೆ. ಶಿಬಿರಗಳಲ್ಲಿ ತರಬೇತಿ ಪಡೆದ ಪಶುವೈದ್ಯರಿಂದ ರಕ್ಷಕರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಇದರ ನಂತರ ಪಕ್ಷಿಗಳ ಪುನರ್ವಸತಿ ಕೆಂದ್ರಕ್ಕೆ ತಲುಪಿಸಲಾಗುತ್ತದೆ. "ಪಕ್ಷಿ ಹೊಡೆಯುವುದನ್ನು ನಾವು ನೋಡಿದಾಗ, ನಾವು 10 ರಿಂದ 15 ನಿಮಿಷಗಳಲ್ಲಿ ಪಕ್ಷಿಯನ್ನು ರಕ್ಷಿಸಲು ಪ್ರಯತ್ನಿಸುತ್ತೇವೆ. ಒಮ್ಮೆ ನಾವು ರಕ್ತದ ನಷ್ಟವನ್ನು ನಿಲ್ಲಿಸಿದರೆ, ಪಕ್ಷಿಯನ್ನು ಉಳಿಸುವುದು ಸುಲಭ," ಎಂದು ಗಾರ್ಡ್ನರ್ ಹೇಳುತ್ತಾರೆ.
ಸ್ವಯಂಸೇವಕರು ಪಕ್ಷಿಯನ್ನು ರಕ್ಷಿಸಿದ ನಂತರ, ಅಗತ್ಯವಿದ್ದಲ್ಲಿ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗುತ್ತದೆ. ನಂತರ ಅವರು ಪಕ್ಷಿಯನ್ನು ನಗರದ ಐದು ಶಿಬಿರಗಳಲ್ಲಿ ಒಂದಕ್ಕೆ ಕರೆದೊಯ್ಯುತ್ತಾರೆ, ಅಲ್ಲಿಂದ ಪಕ್ಷಿಯನ್ನು ಬೇಸ್ ಕ್ಯಾಂಪ್‌ಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ಅರಿವಳಿಕೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಒದಗಿಸಲು ಪ್ರಮುಖ ಸೌಲಭ್ಯಗಳನ್ನು ಹೊಂದಿರುವ ಆಶ್ರಯಗಳು ಇರುತ್ತವೆ, ವರದಿ ದಿ ಲಾಜಿಕಲ್ ಇಂಡಿಯನ್.
ಆಹಾರ ಮತ್ತು ಚಿಕಿತ್ಸೆಯನ್ನು ಪರಿಣಿತ ಪಶುವೈದ್ಯರಿಂದಲೇ ಎಲ್ಲಾ ಪಕ್ಷಿಗಳಿಗೆ ನೀಡಲಾಗುವುದು. ಮತ್ತು ಅವುಗಳು ಚೇತರಿಸಿಕೊಂಡು ಸುಮಾರು 8 ಅಡಿ ಹಾರಲು ಕಲಿತ ನಂತರವೇ ಅವುಗಳನ್ನು ಬಿಡುಗಡೆ ಮಾಡಿ ಸ್ವತಂತ್ರ ಗೊಳಿಸಲಾಗುತ್ತದೆ.
ಗಾಳಿಪಟ ಉತ್ಸವ ಮನಸಿಗೆ ಖುಷಿಯನ್ನು ನೀಡಬಹುದು, ಇದು ಆರೋಗ್ಯಕ್ಕೂ ಒಳ್ಳೆಯದು ಆದರೆ ಇಲ್ಲಿ ಬಳಸುವ ಮಾಂಜಾ ದಾರದ ಬದಲು ಹತ್ತಿಯ ಅಥವಾ ನೈಲಾನ್ ದಾರವನ್ನು ಬಳಸುವುದು ಉತ್ತಮ ಮತ್ತು ಹಕ್ಕಿಗಳ ಹಾರಾಟದ ಸಮಯವಾದ ಮುಂಜಾನೆ ಹಾಗೂ ಮುಸ್ಸಂಜೆ ಸಮಯವನ್ನು ಬಿಟ್ಟು ಉಳಿದ ಸಮಯದಲ್ಲಿ ಉತ್ಸವವನ್ನು ಆಯೋಜಿಸಿದರೆ ಉತ್ತಮ ಎನ್ನುವುದು ಹೋಪ್ ಆಂಡ್ ಬಿಯಾಂಡ್ ಸಂಸ್ಥೆಯ ಅಭಿಪ್ರಾಯವಾಗಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.