Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

8 ರಿಂದ 83ಕ್ಕೆ ಏರಿತು ವಿದ್ಯಾರ್ಥಿಗಳ ಸಂಖ್ಯೆ: ಚುಕುಬುಕು ಸರ್ಕಾರಿ ಶಾಲೆ

ಕೇವಲ 8 ಜನ ವಿದ್ಯಾರ್ಥಿಗಳನ್ನು ಹೊಂದಿದ್ದ ನಾಗುರಿನ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳನ್ನು ಆಕರ್ಷಿಸಲು ಹಲವು ಸುಧಾರಿತ ಸೌಲಭ್ಯಗಳೊಂದಿಗೆ ಶಾಲೆಯನ್ನು ಭಾರತೀಯ ರೈಲಿನಂತೆ ಮಾಡಲು ಬಣ್ಣ ಬಳಿದಿದ್ದಾರೆ, ಇದರ ಪರಿಣಾಮ ಈಗ ವಿದ್ಯಾರ್ಥಿಗಳ ಸಂಖ್ಯೆ 83 ಕ್ಕೆ ಏರಿದೆ.

8 ರಿಂದ 83ಕ್ಕೆ ಏರಿತು ವಿದ್ಯಾರ್ಥಿಗಳ ಸಂಖ್ಯೆ: ಚುಕುಬುಕು ಸರ್ಕಾರಿ ಶಾಲೆ

Tuesday February 18, 2020 , 2 min Read

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತಾನು ಕಲಿತ ಶಾಲೆ ಮತ್ತು ಶಾಲೆಯ ಪರಿಸರ ತುಂಬಾ ಪ್ರಭಾವವನ್ನು ಬೀರುತ್ತದೆ. ಶಾಲೆ ಕೇವಲ ಅಂಕ, ಪರೀಕ್ಷೆಗೆ ಮಾತ್ರ ಸೀಮಿತವಾಗಿಲ್ಲ, ಅದೊಂದು ವ್ಯಕ್ತಿತ್ವವನ್ನು ರೂಪಿಸುವ ಸ್ಥಳ. ಪ್ರತಿಯೊಂದು ಶಾಲೆಯೂ ತನ್ನ ಕಟ್ಟಡದೊಳಗೆ ಅದೆಷ್ಟೋ ವಿದ್ಯಾರ್ಥಿಗಳ ನೆನಪುಗಳನ್ನು ತನ್ನೊಡಲೊಳಗೆ ಸೇರಿಸಿಕೊಂಡಿರುತ್ತದೆ. ಇಂಥ ಶಾಲೆಯನ್ನು ಶಾಶ್ವತವಾಗಿ ಮುಚ್ಚುವ ಘಟನೆಗಳ ಬಗ್ಗೆ ಕೇಳಿದಾಗಲೆಲ್ಲ ಬೇಸರವಾಗುವುದು ಸಹಜ.


ಆಂಗ್ಲಮಾಧ್ಯಮದ ಮೋಹ ಮತ್ತು ಹೆಚ್ಚುತ್ತಿರುವ ಖಾಸಗಿ ಶಾಲೆಗಳಿಂದಾಗಿ ಇಂದು ಹಲವಾರು ಕಡೆ ನಮ್ಮ ನಾಡಿನಲ್ಲಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಆದರೆ ಇದಕ್ಕೆ ಸರಕಾರವೇ ಹೊಣೆ ಎಂದು ದೂರುತ್ತಾ ಕುಳಿತರೆ ಕೆಲಸ ಸಾಗದು, ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಗತ್ಯ.


ಕೇವಲ 8 ವಿದ್ಯಾರ್ಥಿಗಳನ್ನು ಹೊಂದಿದ್ದ ಸರಕಾರಿ ಶಾಲೆಯೊಂದು ಇಂದು ಬರೋಬ್ಬರಿ 83 ವಿದ್ಯಾರ್ಥಿಗಳಿಗೆ ಏರಿಕೆ ಕಂಡಿದೆ. ಆ ಸರಕಾರಿ ಶಾಲೆಯೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಿರಿಮಂಜೇಶ್ವರ ಕ್ಲಸ್ಟರ್ ವ್ಯಾಪಿಗೆ ಬರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗುರೂ.


1973 ರ ಭಾರತ ಸರ್ಕಾರದ ಅಲ್ಪಸಂಖ್ಯಾತ ಯೋಜನೆಯ ಅಡಿಯಲ್ಲಿ ಆರಂಭವಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊದಲು 150 ವಿದ್ಯಾರ್ಥಿಗಳನ್ನು ಹೊಂದಿತ್ತು. ಕ್ರಮೇಣ ಖಾಸಿಗಿ ಶಾಲೆಗಳ ಆರಂಭದಿಂದಾಗಿ ಈ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಯಿತು.


ಇದನ್ನು ಗಮನಿಸಿದ ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವನಾಥ ಪೂಜಾರಿ ಮಕ್ಕಳನ್ನು ತಮ್ಮ ಶಾಲೆಯತ್ತ ಸೆಳೆಯಲು ವಿವಿಧ ಮಾರ್ಗೋಪಾಯದ ಕುರಿತು ಯೋಚಿಸಿದರು, ಆಗ ಅವರಿಗೆ ಹೊಳೆದದ್ದೇ ತಮ್ಮ ಶಾಲೆಯನ್ನು ರೈಲಿನಂತೆ ಕಾಣುವಂತೆ ಬಣ್ಣ ಮಾಡುವುದು.


ಶಾಲಾವರಣದಲ್ಲಿ ವಿದ್ಯಾರ್ಥಿಗಳು (ಚಿತ್ರಕೃಪೆ: ವಿಶ್ವನಾಥ ಪೂಜಾರಿ)


ಚುಕುಬುಕು ಓಡುವ ರೈಲು ಮಕ್ಕಳಿಗೆ ಮಾತ್ರವಲ್ಲದೆ ಎಲ್ಲಾ ವಯೋಮಾನದವರಿಗೂ ಕುತೂಹಲದ ವಸ್ತು. ಈ ಹಿನ್ನಲೆಯಲ್ಲಿ ತಮ್ಮ ಶಾಲೆಯನ್ನು ರೈಲಿನಂತೆ, ತರಗತಿಯನ್ನು ಭೋಗಿಗಳಂತೆ ಬಣ್ಣ ಬಳಿದಿದ್ದಾರೆ.


ಮಾತ್ರವಲ್ಲದೆ ಶಾಲಾ ಅಭಿವೃದ್ಧಿ ಸಮಿತಿಯು ಎಲ್ಲಾ ಹೆತ್ತವರ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ಮತ್ತು ದಾನಿಗಳ ನೆರವಿನಿಂದ ದೇಣಿಗೆಯನ್ನು ಸಂಗ್ರಹಿಸಿ, ಮಕ್ಕಳಿಗೆ 2 ಜೊತೆ ಸಮವಸ್ತ್ರ, ಶಾಲಾ ವಾಹನ, ಆಂಗ್ಲಮಾಧ್ಯದಲ್ಲಿ ಶಿಕ್ಷಣ, ಸ್ಮಾರ್ಟ್ ಕ್ಲಾಸ್, ನುರಿತ ಶಿಕ್ಷಕರ ನೇಮಕಾತಿ, ನೋಟ್ ಬುಕ್ ವಿತರಣೆ, ಬಿಸಿ ಊಟ, ಪ್ರತಿಭಾ ಕಾರಂಜಿಗಳಲ್ಲಿ ಪಾಲ್ಗೊಳ್ಳುವಿಕೆ ಮೊದಲಾವುಗಳನ್ನು ಒಳಗೊಂಡು ಸಮಗ್ರ ಶಿಕ್ಷಣಕ್ಕೆ ಒತ್ತು ನೀಡಿದೆ.


ಭೋಗಿಯಿಂದ (ತರಗತಿಯಿಂದ) ಹೊರನೋಡುತ್ತಿರುವ ಪುಟಾಣಿಗಳು (ಚಿತ್ರಕೃಪೆ: ವಿಶ್ವನಾಥ್ ಪೂಜಾರಿ)




ಯುವರ್ ಸ್ಟೋರಿ ಕನ್ನಡದೊಂದಿಗೆ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವನಾಥ ಪೂಜಾರಿ,


"ನಮ್ಮ ಶಾಲೆಯಲ್ಲಿ ಈಗ ವಿದ್ಯಾರ್ಥಿಗಳ ಸಂಖ್ಯೆ 83ಕ್ಕೆ ಏರಿದೆ ಮಾತ್ರವಲ್ಲದೆ ಇತರ ಪ್ರತಿಷ್ಠಿತ ಖಾಸಿಗಿ ಶಾಲೆಯಲ್ಲಿ ನಡೆಯುವಂತೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ನಮ್ಮಲ್ಲಿ ಈಗಾಗಲೇ ಸುಮಾರು 40 ವಿದ್ಯಾರ್ಥಿಗಳ ನೋಂದಣಿ ಮುಂಚಿತವಾಗಿ ಆಗಿದೆ. ನಗರದಲ್ಲಿ ಇರುವ ಮಕ್ಕಳು ಈ ಮೊದಲು ಬೇರೆ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳು ಈಗ ನಮ್ಮ ಶಾಲೆಯಲ್ಲಿ ಕಲಿಯುವ ಉತ್ಸಾಹ ತೋರಿಸುತ್ತಿದ್ದಾರೆ. ಇದು ನಮಗೆಲ್ಲರಿಗೂ ಸಂತಸದ ವಿಷಯ," ಎಂದರು.


ಪ್ರಸ್ತುತ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಯನ್ನು ನವೀಕರಣಗೊಳಿಸಲು ಸಮಿತಿ ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯ ರೈಲ್ವೇ ದಕ್ಷಿಣ ವಿಭಾಗದಿಂದ ಭೋಗಿಗಳನ್ನು ಪಡೆದು, ಭೋಗಿಯನ್ನೇ ತರಗತಿಯನ್ನಾಗಿ ರೂಪಿಸಿ ತನ್ಮೂಲಕ ಇನಷ್ಟು ಮಕ್ಕಳನ್ನು ಆಕರ್ಷಿಸಲು ಯೋಚನೆ ನಡೆಸಿದೆ.


ಇನ್ನೇನೂ 2023ರಲ್ಲಿ ತನ್ನ 50ನೇ ವರ್ಷದ ವಾರ್ಷಿಕೋತ್ಸವವನ್ನು ಈ ಶಾಲೆ ಆಚರಿಸಿಕೊಳ್ಳುತ್ತಿದ್ದು ಇದು ಶಾಲೆಯ ಇತಿಹಾಸದಲ್ಲಿ ಒಂದು ಮಹತ್ವದಾದ ಘಟನೆಯಾಗಿ ಉಳಿಯುತ್ತದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗೂರಿನಂತೆ ನಮ್ಮ ನಾಡಿನ ಇತರ ಶಾಲೆಗಳು ಎಚ್ಚತ್ತು, ಹಳೆವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ನೆರವಿನಿಂದ ಸುಧಾರಣಾ ಕ್ರಮಗಳನ್ನು ಕೈಗೊಂಡರೆ, ಬಹುಶಃ ಭವಿಷ್ಯದಲ್ಲಿ ಯಾವ ಶಾಲೆಯು ಮುಚ್ಚುವ ಸ್ಥಿತಿಯನ್ನು ತಲುಪುದಿಲ್ಲವೆಂದರೆ ಅತಿಶಯೋಕ್ತಿಯಲ್ಲ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.